ಚಾಮರಾಜನಗರ: ನಮ್ಮ ಪಕ್ಷ ಆಂತರಿಕ ಸರ್ವೆ ಮಾಡಿಸಿದ್ದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 136 ಸೀಟು ಗೆಲ್ಲಲಿದ್ದೇವೆ. ಚಾಮ ರಾಜನಗರ ಜಿಲ್ಲೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ನಗರಕ್ಕೆ ಬಂದು ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದೆವು. ಅಲ್ಲದೇ ಇಬ್ಬರು ದೇವಿಯವರ ಗುಡಿಯಲ್ಲೂ ಪೂಜೆ ಸಲ್ಲಿಸಿದೆವು. ಅಲ್ಲಿನ ಅರ್ಚಕರು ನನಗೆ ಹೂ ಹಾರ ಹಾಕಿ ಪ್ರತ್ಯೇಕವಾಗಿ ಕರೆದು, ತಾಯಿ ನಿನಗೆ 150 ಸೀಟು ಗೆಲ್ಲಿಸಲಿದ್ದಾಳೆ ಎಂದು ಹೇಳಿದ್ದಾರೆ. ನಾವು ಗೆದ್ದ ಬಳಿಕ ಮತ್ತೆ ಬಂದು ಹೂಹಾರ ಹಾಕಿ ನಿಮ್ಮ ಋಣ ತೀರಿಸುತ್ತೇವೆ ಎಂದು ದೇವರಿಗೆ ಪ್ರಾರ್ಥನೆ ಮಾಡಿದ್ದೇವೆ ಎಂದರು.
ಡಬಲ್ ಎಂಜಿನ್ ಸರ್ಕಾರ ಕಳೆದ 4 ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಬಿಜೆಪಿ ಸರ್ಕಾರ ನುಡಿದಂತೆ ನಡೆಯಲಿಲ್ಲ. ಕೊಟ್ಟ ಭರವಸೆ ಈಡೇರಿಸಿಲ್ಲ. ಆದಾಯ ದ್ವಿಗುಣ ಮಾಡಲಿಲ್ಲ. ಅಡುಗೆ ಅನಿಲ ಸಬ್ಸಿಡಿ ತೆಗೆದುಹಾಕಿದರು. ಉದ್ಯೋಗ ನೀಡಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ನೀಡದೇ 36 ಜನರ ಕೊಲೆ ಮಾಡಿದರು. ಸಾಂತ್ವನ ಹೇಳಲಿಲ್ಲ. ಇವರು ಏಕೆ ಮಂತ್ರಿಯಾಗಬೇಕು. ಇವರಿಗೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ಟೀಕಿಸಿದರು.
ಗೆದ್ದ ಬಳಿಕ 36 ಕುಟುಂಬಗಳಿಗೆ ನೌಕರಿ: ನಾನು ಮತ್ತು ಸಿದ್ದರಾಮಯ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದೆವು. ಮೃತರ ಮನೆಗಳಿಗೆ ಹೋಗಿ ತಲಾ 1 ಲಕ್ಷ ರೂ. ನೀಡಿದೆವು. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆ 36 ಜನರ ಕುಟುಂಬಗಳ ಒಬ್ಬ ಸದಸ್ಯರಿಗೆ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನೌಕರಿ ಕೊಡುತ್ತೇವೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಲ್ಲವನ್ನೂ ರಾಷ್ಟ್ರೀಕರಣ ಮಾಡಿದ್ದೆವು. ಬಿಜೆಪಿಯವರು ಖಾಸಗೀಕರಣ ಮಾಡಿ ಉದ್ಯೋಗ ಕಡಿತ ಮಾಡಿದೆ. ಗ್ಯಾಸ್ ಅಡುಗೆ ಎಣ್ಣೆ, ಉಪ್ಪು ಎಲ್ಲದರ ದರ ಹೆಚ್ಚಳವಾಗಿದೆ. ಜಿಎಸ್‌ಟಿ ಹಾಕಿಜನರನ್ನು ಕಂಗಾಲು ಮಾಡಿದ್ದಾರೆಂದರು.
ಇನ್ನು ಸಿದ್ದರಾಮಯ್ಯ ಮಾತಿನಂತೆ ಉಚಿತ ಅಕ್ಕಿ ಕೊಟ್ಟರು. ನಮ್ಮ ಮಾತನ್ನು ನಾವು ಉಳಿಸಿಕೊಳ್ಳದಿದ್ದರೆಬದುಕಿಯೂ ಸತ್ತಂತೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬಿಜೆಪಿಯವರು 5 ವರ್ಷಗಳಿಂದ ಪಾಪದ ಕೆಲಸ ಮಾಡಿದ್ದಾರೆ. ಇವೆಲ್ಲವನ್ನೂ ಪುಸ್ತಕದಲ್ಲಿ ಪಾಪದ ಪುರಾಣ ಎಂಬ ಹೆಸರಿನಲ್ಲಿ ಪ್ರಕಟಿಸುತ್ತೇವೆ ಎಂದರು.