Advertisement

ದ.ಕ. ಅಭಿವೃದ್ಧಿಗೆ ಮೂಲಸೌಕರ್ಯ ಕಾರ್ಯಪಡೆ

12:19 PM Dec 08, 2017 | Team Udayavani |

ಮಂಗಳೂರು: ದ.ಕ ಜಿಲ್ಲೆಯ ಎಲ್ಲ ವಿಭಾಗಗಳ ಅಭಿವೃದ್ಧಿ ಕುರಿತಂತೆ ವಿವಿಧ ಇಲಾಖಾಧಿಕಾರಿಗಳ ನೇತೃತ್ವದಲ್ಲಿ “ಮೂಲಸೌಕರ್ಯ ಕಾರ್ಯಪಡೆ’ ರಚಿಸಲಾಗಿದೆ. ಈ ಮೂಲಕ ಎಲ್ಲ ಕಾಮಗಾರಿಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕುಮಾರ್‌ ಸೆಂಥಿಲ್‌ ಹೇಳಿದರು.

Advertisement

“ದ.ಕ. ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಇರುವ ಸಮಸ್ಯೆ ಹಾಗೂ ಸವಾಲು’ ಎಂಬ ವಿಚಾರದಲ್ಲಿ ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಜಿಲ್ಲಾಧಿಕಾರಿಗಳ ಜತೆ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೇ ಯೋಜನೆ, ಕಾಮಗಾರಿ ನಡೆಸುವ ಹಂತದಲ್ಲಿ
ಯಾವುದಾದರೂ ಒಂದು ಇಲಾಖೆಯಿಂದ ಸಮಸ್ಯೆ ಅಥವಾ ನಿರಾಕರಣೆ ಎದುರಾಗಿ ಕಾಮಗಾರಿ ವಿಳಂಬಿಸುವುದು ರೂಢಿ ಎಂಬಂತಾಗಿದೆ.

ಇಲಾಖೆಗಳ ನಡುವೆ ಸಮನ್ವಯ ಇಲ್ಲ. ಒಂದು ಇಲಾಖೆಯಿಂದ ಸಮ್ಮತಿ ದೊರೆತರೆ ಇನ್ನೊಂದು ಇಲಾಖೆ
ಕಾಮಗಾರಿ ಮುಂದುವರಿಕೆಗೆ ಅಡಚಣೆ ಒಡ್ಡುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಅತ್ಯಂತ ಅಗತ್ಯವಾದ
ಯೋಜನೆಯೊಂದು ನಿಧಾನವಾಗಿ ಮೂಲೆಗುಂಪಾಗುವ ಪರಿಸ್ಥಿತಿ ಇದೆ. ಇದನ್ನು ಮೊದಲು ಸರಿಪಡಿಸಬೇಕಿದೆ.

ಹೀಗಾಗಿ ಒಂದು ಯೋಜನೆ ಕೈಗೊಳ್ಳುವ ಹಂತದಲ್ಲಿ ಅದು ಒಳಗೊಳ್ಳುವ ಎಲ್ಲ ಇಲಾಖೆಗಳನ್ನು ಒಗ್ಗೂಡಿಸಿ
“ಮೂಲಸೌಕರ್ಯ ಕಾರ್ಯಪಡೆ’ ರಚಿಸಲಾಗಿದೆ. ಈ ಮೂಲಕ ಎಲ್ಲ ಇಲಾಖೆಗಳನ್ನು ಒಂದೇ ವೇದಿಕೆಯಲ್ಲಿ ತಂದು ಕಾಮಗಾರಿಗೆ ವೇಗ ನೀಡುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದರು.

ಮಂಗಳೂರು ನಗರ ಬೆಳೆಯುತ್ತಿದ್ದು, ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಭೂಮಿಯ ಆವಶ್ಯಕತೆಯಿದೆ. ಆದರೆ, ಮಂಗಳೂರು ವ್ಯಾಪ್ತಿಯಲ್ಲಿ ಸರಕಾರಿ ಭೂಮಿಯ ಕೊರತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಭೂಮಿಯನ್ನು ಗುರುತಿಸಲು ಉದ್ದೇಶಿಸಲಾಗಿದೆ. ಜತೆಗೆ ಖಾಸಗಿ ಭೂಮಿಯನ್ನು ಪಡೆದು ಕಾಯ್ದಿಡುವ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ ಎಂದರು.

Advertisement

ಟೆಂಡರ್‌ ಹಂತದಲ್ಲಿ ಸ್ಮಾರ್ಟ್‌ಸಿಟಿ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕೆಲವು ಯೋಜನೆಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಈ ಮೂಲಕ ಕೆಲವೇ ದಿನಗಳಲ್ಲಿ ಯೋಜನೆಯು ಅನುಷ್ಠಾನವಾಗಲಿದೆ. ಆದರೆ ಅದರ ಫಲಿತಾಂಶ ತತ್‌ ಕ್ಷಣವೇ ನಮಗೆ ದೊರೆಯದು. ಭವಿಷ್ಯದ ಮಂಗಳೂರಿನ ದೃಷ್ಟಿಯಲ್ಲಿ ಇದೊಂದು ಆಮೂಲಾಗ್ರ ಬದಲಾವಣೆ ಎನಿಸಲಿದ್ದು, ಸಿಂಗಾಪುರ ಮಾದರಿಯಲ್ಲಿ ಮಂಗಳೂರನ್ನು ಕಟ್ಟುವ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ಯೋಜನೆ ಬಗ್ಗೆ ವಿವರಗಳನ್ನು ನೀಡಿದರು. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ವತಿಕಾ ಪೈ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಮುಖರಾದ ಪಿ.ಬಿ.ಅಬ್ದುಲ್‌ ಹಮೀದ್‌, ಪ್ರಶಾಂತ್‌ ಸಿ.ಜಿ, ಇಸಾಕ್‌ ವಾಸ್‌ ಉಪಸ್ಥಿತರಿದ್ದರು. 

ಟ್ರಾಫಿಕ್‌: ಬದಲಿ ವ್ಯವಸ್ಥೆಗೆ ಚಿಂತನೆ ನಗರದಲ್ಲಿ ಟ್ರಾಪೀಕ್‌ ಸಮಸ್ಯೆ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಸಂಚಾರ ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ಯೋಚಿಸಬೇಕಿದೆ. ಮಂಗಳೂರಿನ ಮೂಲ ಚೆಲುವಿಗೆ ಧಕ್ಕೆ ಆಗದಂತೆ, ಮೋನೋ ರೈಲು ಸೇರಿದಂತೆ ಬದಲಿ ಪೂರಕ ಸಂಚಾರ ವ್ಯವಸ್ಥೆಗಳನ್ನು ರೂಪಿಸಲು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ
ಶಶಿಕುಮಾರ್‌ ಸೆಂಥಿಲ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next