Advertisement

ದ.ಕ. ಜಿಲ್ಲೆಯಲ್ಲಿ “ಪೌರ ರಕ್ಷಣಾ ಪಡೆ’ಅಸ್ತಿತ್ವಕ್ಕೆ

01:36 AM May 21, 2020 | Sriram |

ವಿಶೇಷ ವರದಿ- ಮಂಗಳೂರು: ನೆರೆ ಸಂತ್ರಸ್ತರ ರಕ್ಷಣೆ, ಬೆಂಕಿ ಅವಘಡದಂತಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಪೌರ ರಕ್ಷಣಾ ಪಡೆ ಸದ್ಯದಲ್ಲಿಯೇ ನಗರದಲ್ಲಿ ಕಾರ್ಯ ನಿರ್ವಹಿಸಲಿದೆ. ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು ಪೌರ ರಕ್ಷಕರಾಗಿ ವಿಪತ್ತಿನ ಸನ್ನಿವೇಶಗಳಲ್ಲಿ ಜನ ರಕ್ಷಣೆಗೆ ಬರಲಿದ್ದಾರೆ.

Advertisement

ಗೃಹ ರಕ್ಷಕ, ಪೌರ ರಕ್ಷಣೆ ಹಾಗೂ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಡಿಯಲ್ಲಿ ಪೌರ ರಕ್ಷಣಾ ಪಡೆ ಕಾರ್ಯ ನಿರ್ವಹಿಸಲಿವೆ. ಈ ವರೆಗೆ ಬೆಂಗಳೂರು, ರಾಯಚೂರಿನ ಶಕ್ತಿನಗರ ಮತ್ತು ಕಾರವಾರದ ಕೈಗಾದಲ್ಲಿ ಮಾತ್ರ ಪೌರ ರಕ್ಷಣಾ ಪಡೆ ಕಾರ್ಯ ನಿರ್ವಹಿಸುತ್ತಿತ್ತು. ಈಗ ದಕ್ಷಿಣ ಕನ್ನಡ ಸಹಿತ ಬಳ್ಳಾರಿ, ಧಾರವಾಡ, ಬೆಳಗಾವಿ ಯಲ್ಲಿ ಕಾರ್ಯಾಚರಿಸಲು ಪೊಲೀಸ್‌ ಮಹಾನಿರ್ದೇಶಕರು ಮತ್ತು ಗೃಹರಕ್ಷಕ ದಳ ಮಹಾಸಮಾದೇಷ್ಟರು, ಪೌರ ರಕ್ಷಣೆ ನಿರ್ದೇಶಕರು ಆದೇಶ ನೀಡಿದ್ದಾರೆ.

ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ| ಮುರಲೀ ಮೋಹನ ಚೂಂತಾರು ಅವರನ್ನು ಮೂರು ವರ್ಷಗಳ ಅವಧಿಗೆ ಪೌರ ರಕ್ಷಣಾ ವಿಭಾಗದ ಚೀಫ್‌ ವಾರ್ಡನ್‌ ಆಗಿ ನೇಮಕಗೊಂಡಿದ್ದು, ತಂಡವನ್ನು ರಚಿಸುವ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.

ಏನಿದು ಪೌರ ರಕ್ಷಣಾ ಪಡೆ?
1968ರಲ್ಲಿ ಅಸ್ತಿ ತ್ವಕ್ಕೆ ಬಂದ ಸಿವಿಲ್‌ ಡಿಫೆನ್ಸ್‌ ಅಥವಾ ಪೌರ ರಕ್ಷಣಾ ಪಡೆಯೂ ಮೊದಲು ಸೇನೆ ಯೊಂದಿಗೆ ಕಾರ್ಯ ನಿರ್ವಹಿಸಿತ್ತು. 2010ರಲ್ಲಿ ಅದನ್ನು ವಿಪತ್ತು ನಿರ್ವಹಣೆ ಘಟಕದ ಜತೆ ಸೇರಿಸಿ ಹೊಸ ಕಾನೂನನ್ನು ಜಾರಿಗೊಳಿಸಲಾಗಿತ್ತು. ಒಟ್ಟು ಜನಸಂಖ್ಯೆಯ ಶೇ. 1ರಷ್ಟು ಪೌರ ರಕ್ಷಣೆ ಕಾರ್ಯಕರ್ತರು ಇರಬೇಕೆಂಬ ನಿಯಮವಿದೆ.

ಕಾರ್ಯ ನಿರ್ವಹಣೆ ಹೇಗೆ?
ಗೃಹರಕ್ಷಕರಿಗೆ ನೀಡುವಂತೆ ಪ್ರಥಮ ಚಿಕಿತ್ಸೆ, ಬೆಂಕಿ ಅವಘಡ ತರಬೇತಿ, ನೆರೆ ಸಂತ್ರಸ್ತರ ರಕ್ಷಣೆ ಮತ್ತು ಇತರ ತರಬೇತಿಗಳನ್ನು ಪೌರ ರಕ್ಷಣಾ ತಂಡಕ್ಕೆ ನೀಡಲಾಗುತ್ತದೆ. ಸಮಾಜ ಸೇವೆ ಮಾಡುವ ಅವಕಾಶ ಇದಾಗಿದ್ದು, ಆಯ್ಕೆಯಾದ ಆಸಕ್ತ ಪೌರರಕ್ಷಕರಿಗೆ ಉಚಿತವಾಗಿ ಹಳದಿ ಬಣ್ಣದ ಜಾಕೆಟ್‌ ನೀಡಿ ಗುರುತು ಪತ್ರ ನೀಡಲಾಗುತ್ತದೆ. ಯಾವುದೇ ವೇತನ ಗೌರವಧನ ಇರುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಪೌರ ರಕ್ಷಣೆ ಪಡೆಯ ಸೇವೆ ಪಡೆಯಲಾಗುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಪೌರ ರಕ್ಷಣಾ ಪಡೆ ಕಾರ್ಯ ನಿರ್ವಹಿಸಲಿದೆ ಎನ್ನು ತ್ತಾರೆ ಪೌರರಕ್ಷಣಾ ವಿಭಾಗದ ಚೀಫ್‌ ವಾರ್ಡನ್‌ ಆಗಿ ನೇಮಕಗೊಂಡಿರುವ ಡಾ| ಮುರಳೀ ಮೋಹನ ಚೂಂತಾರು.

Advertisement

ನೀವು ಪೌರ ರಕ್ಷಕರಾಗಬೇಕೇ?
ಪೌರ ರಕ್ಷಣಾ ಪಡೆ ಸೇರಿ ಜನ ಸೇವೆ ಮಾಡಲು ಇದೊಂದು ಅವಕಾಶ. ನಿಮಗೆ ಪೌರರಕ್ಷಕರಾಗಬೇಕೆಂಬ ಇಚ್ಛೆ ಇದ್ದಲ್ಲಿ ಅವಕಾಶವನ್ನು ಬಳಸಿಕೊಳ್ಳಬಹುದು. ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾದ 18 ವರ್ಷ ದಾಟಿದ 50 ವರ್ಷ ಮೀರದ ಪುರುಷ ಮತ್ತು ಮಹಿಳೆಯರು ಪೌರ ರಕ್ಷಕರಾಗಲು ಇಚ್ಛಿಸಿದ್ದಲ್ಲಿ ಅರ್ಜಿ ಸಲ್ಲಿಸಬಹುದು. ಮಂಗಳೂರಿನ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದುಕೊಳ್ಳಬಹುದು.

ಆಸಕ್ತರಿಗೆ ಅವಕಾಶ
ದ.ಕ. ಜಿಲ್ಲೆಯಲ್ಲಿ ಸದ್ಯದಲ್ಲಿಯೇ ಪೌರ ರಕ್ಷಣಾ ಪಡೆ ಕಾರ್ಯ ನಿರ್ವಹಿಸಲಿದೆ. ವಿಪತ್ತಿನಂತಹ ಸಂದರ್ಭದಲ್ಲಿ ಸ್ವಯಂ ಸೇವಕ ರಾಗಿ ಇವರು ಕೆಲಸ ನಿರ್ವಹಿಸ ಲಿದ್ದಾರೆ. ಈಗಾಗಲೇ ಸುಮಾರು 40 ಮಂದಿ ಜತೆ ಮಾತುಕತೆ ನಡೆಸಲಾಗಿದ್ದು, ಸ್ವಯಂ ಸ್ಫೂರ್ತಿ ಯಿಂದ ಇದರಲ್ಲಿ ತೊಡಗಿಸಿ ಕೊಳ್ಳಲು ಮುಂದೆ ಬಂದಿದ್ದಾರೆ. ಆಸಕ್ತರಿಗೆ ಈ ಕೆಲಸದಲ್ಲಿ ತೊಡಗಿಕೊಳ್ಳಲು ಅವಕಾಶವಿದೆ.
ಡಾ|ವೈ. ಭರತ್‌ ಶೆಟ್ಟಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next