ಮಂಗಳೂರು: ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹಾಗೂ ಮುಗ್ಧರ ಹತ್ಯೆ ತಡೆಯಲು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಫಲರಾಗಿದ್ದು ಅವರ ಮಂಗಳೂರು ಭೇಟಿಯನ್ನು ಪ್ರತಿಭಟಿಸಿ ಫೆ. 25ರಂದು ದ.ಕ. ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಹರತಾಳಕ್ಕೆ ಕರೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ತಿಳಿಸಿವೆ.
Advertisement
ಪ್ರತಿಭಟನಾ ಮೆರವಣಿಗೆಈ ಹಿಂದೆ ಮಂಗಳೂರು ಹರತಾಳಕ್ಕೆ ಕರೆಕೊಟ್ಟಿರುವುದನ್ನು ಇಡೀ ಜಿಲ್ಲೆಯಾದ್ಯಂತ ವಿಸ್ತರಿಸಲಾಗಿದ್ದು ಫೆ. 25ರಂದು ಬೆಳಗ್ಗೆ 6ರಿಂದ ಸಂಜೆ 6ರ ತನಕ ದ.ಕ. ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಹರತಾಳ ನಡೆಯಲಿರುವುದು. ಫೆ. 24ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಡಿ.ಸಿ. ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಮತ್ತು ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.
ಕಣ್ಣೂರು, ತೃಶ್ಶೂರ್ ಸೇರಿದಂತೆ ಕೇರಳದ ವಿವಿಧೆಡೆ ಅಮಾಯಕ ಹಿಂದೂ ಕಾರ್ಯಕರ್ತರು ಮತ್ತು ರಾಜಕೀಯ ಎದುರಾಳಿ ಪಕ್ಷಗಳ ಕಾರ್ಯಕರ್ತರನ್ನು ಸಿಪಿಎಂ ಅವ್ಯಾಹತವಾಗಿ ಹತ್ಯೆಗೈಯುತ್ತಿದೆ. ಈ ಪಕ್ಷದ ನೇತಾರರಾಗಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿನಲ್ಲಿ ನಡೆಯುವ ಕೋಮು ಸೌಹಾರ್ದ ರ್ಯಾಲಿಯಲ್ಲಿ ಭಾಷಣ ಮಾಡಲು ಬರುತ್ತಿರುವುದು ವಿಪರ್ಯಾಸ ಎಂದು ಸಂಘಟನೆಗಳು ತಿಳಿಸಿವೆ. ಕೇರಳದಲ್ಲಾಗುತ್ತಿರುವ ಮುಗ್ಧರ ಹತ್ಯೆಯನ್ನು ತಡೆಯುವಲ್ಲಿ ವಿಫಲವಾಗಿರುವ ಪಿಣರಾಯಿ ವಿಜಯನ್ ಕಾರ್ಯಕ್ರಮವನ್ನು ವಿರೋಧಿಸಿ ದ.ಕ. ಜಿಲ್ಲೆಯಾದ್ಯಂತ ನಡೆಯುವ ಈ ಪ್ರತಿಭಟನೆ ಮತ್ತು ಹರತಾಳಕ್ಕೆ ಜಿಲ್ಲೆಯ ಎಲ್ಲ ನಾಗರಿಕರು, ಸಂಘ-ಸಂಸ್ಥೆಗಳು, ಬಸ್ ಮಾಲಕರು, ಚಾಲಕರು, ರಿಕ್ಷಾ ಚಾಲಕರು-ಮಾಲಕರು, ಹೊಟೇಲ್ ಮಾಲಕರು ಸಿಬಂದಿ, ವಿದ್ಯಾರ್ಥಿಗಳು ತಮ್ಮ ಕಚೇರಿ, ಕಾಲೇಜುಗಳನ್ನು ಮುಚ್ಚಿ ಈ ಹರತಾಳದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಬೆಂಬಲಿಸಬೇಕೆಂದು ಕೋರಲಾಗಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.