ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಇಬ್ಬರು ಆರೋಪಿಗಳು ಆನ್‌ಲೈನ್ ಲಿಂಕ್ ಬಳಸಿ ಜೈಲಿನಿಂದಲೇ ಮೊಬೈಲ್ ಮೂಲಕ ಕೋರ್ಟ್ ಕಲಾಪ ವೀಕ್ಷಿಸಿರುವ ಪ್ರಕರಣದ ತನಿಖೆ ನಡೆಸಲು ಪ್ರತ್ಯೇಕ ತನಿಖಾ ತಂಡ ರಚಿಸುವುದಾಗಿ ಹೈಕೋರ್ಟ್ ಹೇಳಿದೆ.
ಗಲಭೆ ಪ್ರಕರಣ ಸಂಬಂಧ ಜಾಮೀನು ನಿರಾಕರಿಸಿದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸುತ್ತಿದ್ದಾಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಕರಣದ 15ನೇ ಆರೋಪಿ ಶೇಖ್ ಮೊಹಮ್ಮದ್ ಬಿಲಾಲ್ ಹಾಗೂ 25ನೇ ಆರೋಪಿ ಮೊಹಮ್ಮದ್ ಶರೀಫ್ ವೀಡಿಯೋ ಕಾನ್ಫರೆನ್ಸ್ ಲಿಂಕ್ ಬಳಸಿ ಮೊಬೈಲ್ ಮೂಲಕ ಕಲಾಪ ವೀಕ್ಷಿಸಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ವಿವರಣೆ ನೀಡಬೇಕು ಎಂದು ನ್ಯಾಯಪೀಠ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ, ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್. ಸುಬ್ರಮಣಿ ಹಾಜರಾಗಿ, ಪ್ರಕರಣದ ತನಿಖೆ ನಡೆಸಲು ಬೆಂಗಳೂರು ದಕ್ಷಿಣ ವಲಯದ ಡಿಜಿಐ ಟಿ.ಪಿ. ಶೇಷ ಅವರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಇದನ್ನು ಒಪ್ಪದ ನ್ಯಾಯಪೀಠ, ಇಂಥ ತನಿಖೆ ಬೇಡ. ಒಬ್ಬ ಪೊಲೀಸ್ ಅಧಿಕಾರಿ ಮತ್ತೂಬ್ಬ ಅಧಿಕಾರಿಯನ್ನು ರಕ್ಷಿಸುತ್ತಾರೆ ಎಂಬ ವಿಷಯ ನಮಗೂ ತಿಳಿದಿದೆ. ಹೀಗಾಗಿ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಲಾಗುವುದು. ಅದಕ್ಕೆ ನಿಯೋಜಿಸಬಹುದಾದ ಅಧಿಕಾರಿಗಳ ಹೆಸರನ್ನು ತಿಳಿಸುವಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗೆ ನ್ಯಾಯಪೀಠ ಸೂಚಿಸಿತು.
ಈ ವೇಳೆ ಎನ್‌ಐಎ ಪರ ವಕೀಲರಾದ ಪಿ. ಪ್ರಸನ್ನಕುಮಾರ್, ಕೇಂದ್ರ ಸರಕಾರದ ಗೃಹ ಸಚಿವಾಲಯ 2010ರ ಜೂ.7ರಂದು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಕಾರಾಗೃಹ ಹಾಗೂ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಪಶ್ವಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ಗುಜರಾತ್, ರಾಜಸ್ಥಾನ, ಜಮ್ಮು ಕಾಶ್ಮೀರ ಮತ್ತು ಕರ್ನಾಟಕ ಸಹಿತ ದೇಶದ ವಿವಿಧ ರಾಜ್ಯಗಳ ಕಾರಾಗೃಹಗಳು ಭಯೋತ್ಪಾದಕ ಕೃತ್ಯಗಳ ಸಂಘಟನೆ, ಹಣ ಸಂಗ್ರಹ ಮತ್ತು ಹೊಸ ಸದ್ಯಸರ ಆಯ್ಕೆ ಹಾಗೂ ಕಾರ್ಯಾಚರಣೆ ಸ್ಥಳಗಳಾಗುತ್ತಿವೆ ಎಂಬುದಾಗಿ ಆ ಪತ್ರದಲ್ಲಿ ತಿಳಿಸಲಾಗಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅಲ್ಲದೆ, ಜೈಲು ಅಧಿಕಾರಿಗಳ ಸಹಕಾರದಿಂದ ಕೈದಿಗಳು ಮೊಬೈಲ್ ಫೋನ್‌ಗಳನ್ನು ದುರ್ಬಳಕೆ ಮಾಡಕೊಂಡು ಈ ರೀತಿ ಮಾಡುತ್ತಿದ್ದಾರೆ. ಇಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಬೇಕು. ಭದ್ರತೆ ಹೆಚ್ಚಿಸಬೇಕು ಮತ್ತು ಮೊಬೈಲ್ ಫೋನ್‌ಗಳು ಜೈಲುಗಳ ಒಳಗೆ ಹೋಗುವುದನ್ನು ತಡೆಯುವಂತೆ ಪತ್ರದಲ್ಲಿ ನಿರ್ದೇಶಿಸಲಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.