Advertisement

ದೀಪಾವಳಿ ಸಡಗರ ;ಎಚ್ಚರಿಕೆಯೂ ಅಗತ್ಯ

12:13 AM Nov 14, 2020 | mahesh |

ಜಗತ್ತನ್ನೇ ಅನಿಶ್ಚಿತತೆಯ ಕತ್ತಲಲ್ಲಿ ಕೆಡವಲು ಕೋವಿಡ್‌ ಎಂಬ ಸಾಂಕ್ರಾಮಿಕ ಪ್ರಯತ್ನಿಸುತ್ತಿರುವ ವೇಳೆಯಲ್ಲೇ, ಬೆಳಕಿನ ಹಬ್ಬ ದೀಪಾವಳಿ ಎದುರಾಗಿದೆ. ಈಗಷ್ಟೇ ಸಕಲ ಜಾಗೃತಿಯೊಂದಿಗೆ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಿದ ಹೊಸ್ತಿಲಲ್ಲೇ ದೀಪಾವಳಿಯ ಉತ್ಸಾಹ ಮನೆಮನಗಳಲ್ಲೂ ಹೊಳೆಯುತ್ತಿದೆ.

Advertisement

ಹೊಸ ಬಟ್ಟೆ, ಸಿಹಿ ಖಾದ್ಯ, ಹಣ್ಣು-ಹೂಗಳು, ಪಟಾಕಿಗಳ ಖರೀದಿ..ಹಬ್ಬವಾಚರಿಸಲು ಮಹಾನಗರಗಳಿಂದ ಊರಿಗೆ ಹೊರಟುನಿಂತವರು… ಅವರಲ್ಲಿ ಮನೆಮಾಡಿರುವ ಸಡಗರದ ವಾತಾವರಣವೆಲ್ಲ, ಭಾರತೀಯರಲ್ಲಿ ದೀಪಾವಳಿ ಹಬ್ಬ ಎಂಥ ಸ್ಥಾನ ಪಡೆದಿದೆ ಎನ್ನುವುದನ್ನು ಸಾರುತ್ತಿದೆ.

ವಿಶೇಷವೆಂದರೆ, ಲಾಕ್‌ಡೌನ್‌ನಿಂದಾಗಿ ತತ್ತರಿಸಿರುವ ಆರ್ಥಿಕತೆಗೆ ಹಬ್ಬಗಳು ಬಲ ತುಂಬಲಾರಂಭಿಸಿವೆ. ಕೆಲವು ದಿನಗಳಿಂದ ಹೆಚ್ಚಾಗಿರುವ ಬೇಡಿಕೆಯಿಂದಾಗಿ ಮಾರುಕಟ್ಟೆಗಳು ಚೇತರಿಸಿಕೊಳ್ಳಲಾರಂಭಿಸಿವೆ. ಆದರೆ, ಈ ಸಂಭ್ರಮದ ಭರದಲ್ಲಿ ನಾವು ಅಸಡ್ಡೆ ಮಾಡಲೇಬಾರದು. ಹಿಂದೆಂದಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಹಬ್ಬವನ್ನು ಆಚರಿಸಬೇಕಾದ ಅಗತ್ಯವಿದೆ ಎನ್ನುವುದನ್ನು ಮರೆಯದಿರೋಣ. ಸ್ವತ್ಛತೆ- ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಂಥ ಸುರಕ್ಷಾ ಕ್ರಮಗಳ ಕಡೆಗಣನೆ ಆಗಲೇಬಾರದು.

ಹಬ್ಬದ ಕಾರಣಕ್ಕಾಗಿ ಮಾರುಕಟ್ಟೆಗಳಲ್ಲಿ ಜನ ಕಿಂಚಿತ್ತೂ ಭಯವಿಲ್ಲದೇ ಗಿಜುಗುಟ್ಟುತ್ತಿರುವುದೂ ಆತಂಕ ಹುಟ್ಟಿಸುತ್ತಿದೆ. ಕೋವಿಡ್‌ನ‌ ಅಪಾಯ ಇನ್ನೂ ದೂರವಾಗಿಲ್ಲ. ನಿತ್ಯವೂ ಸಾವಿರಾರು ಪ್ರಕರಣಗಳು ವರದಿಯಾಗುತ್ತಲೇ ಇವೆ. ಸಾಲುಸಾಲು ಹಬ್ಬಗಳ ಸಮಯದಲ್ಲಿ ಎಚ್ಚರಿಕೆ ವಹಿಸದಿದ್ದರೆ ಒಂದೇ ತಿಂಗಳಲ್ಲೇ ಪ್ರಕರಣಗಳ ಸಂಖ್ಯೆ 2 ದಶಲಕ್ಷ ದಾಖಲಾಗಬಹುದು ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ.

ಇನ್ನು ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಬೆಳಗುವ, ಪಟಾಕಿ ಹೊಡೆಯಬೇಕೆಂಬ ಉತ್ಸಾಹ ಬಹುತೇಕರಲ್ಲಿರುತ್ತದೆ. ನೆನಪಿಡಬೇಕಾದ
ಸಂಗತಿಯೆಂದರೆ, ಕೋವಿಡ್‌ನಿಂದಾಗಿ ನಾವೆಲ್ಲರೂ ಈಗ ಸ್ಯಾನಿಟೈಜರ್‌ಗಳನ್ನು ನಿರಂತರವಾಗಿ ಬಳಸುವ ಅಭ್ಯಾಸ ರೂಢಿಸಿಕೊಂಡಿದ್ದೇವೆ. ಪ್ರತಿ ಮನೆಯಲ್ಲೂ ಸ್ಯಾನಿಟೈಸರ್‌ ಬಾಕ್ಸ್‌ಗಳು ಇದ್ದೇ ಇರುತ್ತವೆ. ಅವು ದೀಪ ಬೆಳಗಿಸುವ ಅಥವಾ ಪಟಾಕಿ ಹಚ್ಚುವ ಸಮಯದಲ್ಲಿ ಅಪಾಯಕ್ಕೂ
ತಳ್ಳಬಲ್ಲವು.

Advertisement

ಸ್ಯಾನಿಟೈಸರ್‌ಗಳಲ್ಲಿ ಆಲ್ಕೋಹಾಲ್‌ ಅಂಶವಿರುವುದರಿಂದ ತ್ವರಿತವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ, ಸ್ಯಾನಿಟೈಸರ್‌ ಡಬ್ಬಿ ದೀಪಗಳ ಸಮೀಪ ಇರದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವೂ ಇದೆ. ಈಗಾಗಲೇ ಕೆಲವರು ಸ್ಯಾನಿಟೈಸರ್‌ ಬಳಸಿದ ಮೇಲೆ ಕ್ಯಾಂಡಲ್‌ ಅಥವಾ ದೀಪ ಹಚ್ಚುವ ಸಂದರ್ಭದಲ್ಲಿ ಗಾಯಗೊಂಡ ಘಟನೆಗಳೂ ವರದಿಯಾಗುತ್ತಿವೆ. ಹೀಗಾಗಿ, ಸಕಲ ಎಚ್ಚರಿಕೆಯೊಂದಿಗೆ ಬೆಳಕಿನ ಹಬ್ಬವನ್ನು ನಾವೆಲ್ಲರೂ ಆಚರಿಸಬೇಕಿದೆ. ದೀಪಾವಳಿ ಹಬ್ಬ ಎಲ್ಲರ ಬದುಕು ಬೆಳಗಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next