ಬೆಂಗಳೂರು: ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ರಸ್ತೆಗಳು, ಸಂಚಾರ ದಟ್ಟಣೆಯಿಲ್ಲದೆ ಬೆಳಗದ ಸಿಗ್ನಲ್ ದೀಪಗಳು, ಪ್ರಯಾಣಿಕರಿಲ್ಲದೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್- ಮೆಟ್ರೋ, ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ಮಾಲ್‌ಗಳು… ಇದು ಶುಕ್ರವಾರ ನಗರದ ಹಲವೆಡೆ ಕಂಡುಬಂದ ದೃಶ್ಯ. ಬಲಿಪಾಡ್ಯಮಿ ಹಬ್ಬದ ಹಿನ್ನೆಲೆ ಶುಕ್ರವಾರ ಸರ್ಕಾರಿ ರಜೆ ಜತೆಗೆ ವಾರಾಂತ್ಯದ ರಜೆಯೂ ಸೇರಿದ್ದರಿಂದ ಶುಕ್ರವಾರ ಪ್ರಮುಖ ಜನಸಂದಣಿ ಪ್ರದೇಶಗಳು, ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು.
ಕೆ.ಜಿ.ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಲಾಲ್‌ಬಾಗ್ ರಸ್ತೆ, ಎಂ.ಜಿ.ರಸ್ತೆ, ಸ್ಯಾಂಕಿ ರಸ್ತೆ, ಸಂಪಿಗೆ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿಗಿಂತ ಬಹಳ ಕಡಿಮೆ ಇತ್ತು. ಕೆಲವೆಡೆ ಸಿಗ್ನಲ್ ದೀಪಗಳು ಸ್ಥಗಿತಗೊಂಡಿದ್ದು, ವಾಹನ ಸಂಚಾರ ತಗ್ಗಿರುವುದನ್ನು ತೋರುವಂತಿತ್ತು. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವ ಕಾರಣ ಬಿಎಂಟಿಸಿ ಸಂಸ್ಥೆಯು ಬಸ್‌ಗಳ ಸಂಚಾರ, ಟ್ರಿಪ್ ಸಂಖ್ಯೆಯನ್ನು ಕಡಿತಗೊಳಿಸಿತ್ತು. ಆದರೆ ಸೇವೆಗೆ ನಿಯೋಜನೆಗೊಂಡಿದ್ದ ಬಹಳಷ್ಟು ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನದ ಹೊತ್ತಿನಲ್ಲಿ ಕೆಲ ಬಸ್‌ಗಳು ಖಾಲಿಯಿದ್ದುದು ಕಂಡುಬಂತು.
ನಮ್ಮ ಮೆಟ್ರೋದಲ್ಲೂ ಶುಕ್ರವಾರ ಎಂದಿನ ಪ್ರಯಾಣಿಕರ ಸಂದಣಿ ಕಂಡುಬರಲಿಲ್ಲ. ರಜೆಯಿದ್ದ ಕಾರಣ ಕುಟುಂಬ ಸಮೇತರಾಗಿ ಸಾಕಷ್ಟು ಮಂದಿ ಮೆಟ್ರೋ ಪ್ರಯಾಣ ಅನುಭವ ಪಡೆದು ಸಂತಸದಲ್ಲಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದಿಂದ ಇತರೆ ಪ್ರದೇಶಗಳಿಗೆ ತೆರಳುವವರು ಹಾಗೂ ಇತರೆ ಪ್ರದೇಶಗಳಿಂದ ನಗರಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಿದ್ದ ಕಾರಣ ಹೆದ್ದಾರಿ ಗಳಲ್ಲಿನ ಟೋಲ್‌ಗೇಟ್‌ಗಳಲ್ಲೂ ವಾಹನ ದಟ್ಟಣೆ ತಗ್ಗಿತ್ತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಬಳಿಯ ಟೋಲ್‌ಗೇಟ್, ಪೀಣ್ಯ ಹಾಗೂ ನೆಲಮಂಗಲ ಬಳಿಯ ಟೋಲ್‌ಗೇಟ್‌ಗಳಲ್ಲಿ ವಾಹನ ಸಂಚಾರ ಕಡಿಮೆಯಿತ್ತು. “ನೈಸ್’ ರಸ್ತೆಯ ಟೋಲ್‌ಗೇಟ್‌ಗಳಲ್ಲೂ ಎಂದಿನ ವಾಹನ ದಟ್ಟಣೆ ಕಾಣಲಿಲ್ಲ. ಹಬ್ಬದ ಹಿನ್ನೆಲೆ ಮಾಲ್‌ಗಳಲ್ಲೂ ಗ್ರಾಹಕರ ಸಂಖ್ಯೆ ಕಡಿಮೆಯಿತ್ತು. ಮಲ್ಟಿಫ್ಲೆಕ್ಸ್‌ಗಳಿರುವ ಮಾಲ್‌ಗಳಲ್ಲಿ ಸಿನಿಪ್ರಿಯರಿಂದಾಗಿ ಕಳೆಗಟ್ಟಿದ್ದು ಹೊರತು ಪಡಿಸಿದರೆ ಮಾಲ್‌ಗಳಲ್ಲಿ ಉಡುಪು ಸೇರಿದಂತೆ ಇತರೆ ವಸ್ತುಗಳ ಖರೀದಿ ಭರಾಟೆ ಕಂಡುಬರಲಿಲ್ಲ.
ಸಂಜೆ ವೇಳೆ ಪಟಾಕಿ ಸಿಡಿಸುವುದು ಹೆಚ್ಚಾಗಿರುವುದರಿಂದ ಮಾಲಿನ್ಯ ಕಾರಣಕ್ಕೂ ಬಹಳಷ್ಟು ಜನ ಮನೆಗಳಿಂದ ಹೊರಬಂದಿರಲಿಲ್ಲ. ಸಂಜೆ ಹೊತ್ತಿಗೆ ಹಲವು ಪ್ರದೇಶಗಳಲ್ಲಿ ಮಕ್ಕಳು, ವಯಸ್ಕರು ಪಟಾಕಿ ಸಿಡಿಸಲು ಮುಂದಾಗಿದ್ದರಿಂದ ಜನ, ವಾಹನ ಸಂಚಾರ ಇನ್ನಷ್ಟು ವಿರಳವಾಗಿತ್ತು. ಶುಕ್ರವಾರ ದೀಪಾವಳಿ ಹಬ್ಬದ ಕೊನೆಯ ದಿನವಾಗಿದ್ದರಿಂದ ಪಟಾಕಿ ಸಿಡಿಸುವುದು ಜೋರಾಗಿತ್ತು. ಶುಕ್ರವಾರ ಮಧ್ಯರಾತ್ರಿವರೆಗೆ ಪಟಾಕಿಗಳನ್ನು ಸಿಡಿಸಿ, ಬಾಣ ಬಿರುಸುಗಳನ್ನು ಹಾರಿಸುವ ಮೂಲಕ ಬೆಳಕಿನ ಹಬ್ಬದ ಆಚರಣೆಗೆ ತೆರೆಬಿತ್ತು.