ಮಂಗಳೂರು/ಉಡುಪಿ: ಕರಾವಳಿಯಲ್ಲಿ ಶನಿವಾರದಿಂದ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬಕ್ಕಾಗಿ ಜನ ಬಿರುಸಿನ ಸಿದ್ಧತೆ ನಡೆಸುತ್ತಿದ್ದು, ವಿವಿಧೆಡೆ ಖರೀದಿ ಪ್ರಕ್ರಿಯೆಯೂ ಶುಕ್ರವಾರ ಜೋರಾಗಿತ್ತು.
ಲಕ್ಷ್ಮೀಪೂಜೆ ಹಿನ್ನೆಲೆಯಲ್ಲಿ ಜನ ಹೂ, ಹಣ್ಣು ಖರೀದಿಯಲ್ಲಿ ತೊಡಗಿದ್ದರು. ಆಪೆ¤àಷ್ಟರಿಗೆ ಉಡುಗೊರೆ ನೀಡಲು ಸಿಹಿತಿಂಡಿ ಖರೀದಿಯೂ ಜೋರಾಗಿತ್ತು. ದೇಗುಲಗಳಲ್ಲಿ ಲಕ್ಷ್ಮೀಪೂಜೆ, ವಾಹನ ಪೂಜೆ ಸಹಿತ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿದ್ದು, ಸಿದ್ಧತೆಗಳು ಅಂತಿಮಗೊಂಡಿವೆ. ಮನೆಮನೆಗಳಲ್ಲಿಯೂ ಬೆಳಕಿನ ಹಬ್ಬವನ್ನು ಸ್ವಾಗತಿಸಲು ಜನ ಲೈಟಿಂಗ್ಸ್ ಅಳವಡಿಸಿ ಹಬ್ಬವನ್ನು ಆಕರ್ಷಣೀಯ ಗೊಳಿಸಲು ಅಣಿಯಾಗಿದ್ದಾರೆ.
ನಾಡಿನ ವಿವಿಧ ಭಾಗಗಳಿಂದ ತರಕಾರಿಗಳು ಮಾರುಕಟ್ಟೆಗೆ ಬಂದಿರುವುದರಿಂದ ನವರಾತ್ರಿ, ಗಣೇಶ ಚತುರ್ಥಿಯಂತೆ ತರಕಾರಿಗಳ ಬೆಲೆ ಏರಿಕೆ ಕಂಡುಬರಲಿಲ್ಲ. ಹೂವುಗಳೂ ವಿವಿಧ ಕಡೆಗಳಿಂದ ಆಗಮಿಸಿದ್ದು ಪೂಜೆಗಾಗಿ ಹೂವುಗಳ ಖರೀದಿ ನಡೆಯಿತು. ಮಣ್ಣಿನ ಮತ್ತು ಗೋಮಯದ ಹಣತೆ, ಸಾಂಪ್ರದಾಯಿಕ ಗೂಡು ದೀಪಗಳ ಮಾರಾಟವೂ ನಡೆಯಿತು. ಇದೇ ಮೊದಲ ಬಾರಿಗೆಂಬಂತೆ ಕೊರೊನೋತ್ತರದಲ್ಲಿ ಜನರು ಮಾರುಕಟ್ಟೆಗೆ ಭಾರೀ ಸಂಖ್ಯೆಯಲ್ಲಿ ತೆರಳಿದ್ದು ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ದಟ್ಟಣೆ ಕಂಡುಬಂತು. ಆಯುರ್ವೇದ ಕಾಲೇಜುಗಳಲ್ಲಿ ಶುಕ್ರವಾರ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಧನ್ವಂತರಿ ಜಯಂತಿಯನ್ನು ಆಚರಿಸಲಾಯಿತು.
ಉಡುಪಿ ಶ್ರೀಕೃಷ್ಣಮಠದಲ್ಲಿ ಶುಕ್ರವಾರ ರಾತ್ರಿ ಜಲಪೂರಣ- ಗಂಗಾಪೂಜೆಯನ್ನು ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಸಲಾಯಿತು. ಇದೇ ರೀತಿ ಮನೆಗಳಲ್ಲಿಯೂ ಜಲಪೂರಣವನ್ನು ನಡೆಸಲಾಯಿತು. ಶನಿವಾರ ಬೆಳಗ್ಗೆ ತೈಲಾಭ್ಯಂಗವನ್ನು ನಡೆಸಲಾಗುತ್ತದೆ. ಮನೆ ಹೊರಗೆ ಗೂಡುದೀಪಗಳಲ್ಲಿ ದೀಪಗಳನ್ನಿ ರಿಸುವುದು ಶನಿವಾರದಿಂದ ಆರಂಭ ವಾಗಲಿದೆ. ಕೆಲವೆಡೆ ಶನಿವಾರ ಸಂಜೆ, ಕೆಲವೆಡೆ ರವಿವಾರ ಸಂಜೆ ಬಲೀಂದ್ರ ಪೂಜೆಯನ್ನು ನಡೆಸಲಾಗುತ್ತದೆ. ರವಿವಾರ, ಸೋಮವಾರ ಗೋಪೂಜೆ ನಡೆಯುತ್ತವೆ.
ಬಿರುಸಿನ ವ್ಯವಹಾರ
ಸರಕಾರವು ಹಸುರು ಪಟಾಕಿಯನ್ನೇ ಉಪಯೋಗಿಸಬೇಕು ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಹಸುರು ಪಟಾಕಿಗಳ ಮಾರಾಟ ಬಿರುಸಾಗಿತ್ತು. ಗೋಮಯ ಹಣತೆಗಳು, ಸಾದಾ ಮಣ್ಣಿನ ಹಣತೆಗಳಿಗಾಗಿ ಜನರು ಹೆಚ್ಚು ಬೇಡಿಕೆ ಮಂಡಿಸುತ್ತಿರುವುದು ಕಂಡುಬಂತು. ಚೀನೀ ಉತ್ಪನ್ನಗಳ ಬಳಕೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಗೂಡುದೀಪಗಳನ್ನು ಜನರು ಹೆಚ್ಚು ಖರೀದಿಸುತ್ತಿದ್ದುದು ಕಂಡುಬಂತು. ಶುಕ್ರವಾರ ಸಂಜೆಯ ವೇಳೆಗೆ ದ.ಕ. ಮತ್ತು ಉಡುಪಿಯ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ದೀಪಾವಳಿಗೆ ನಾಲ್ಕು ಹನಿಯಾದರೂ ಮಳೆಯಾಗುತ್ತದೆ ಎಂಬ ವಾಡಿಕೆಯ ಮಾತಿಗೆ ಬಲ ನೀಡಿತ್ತು.