Advertisement

ದೀಪಾವಳಿ ತರುವ ಪುಳಕವೇ ಬೇರೆ

12:30 AM Nov 08, 2018 | Team Udayavani |

ದೀಪಾವಳಿ ಪ್ರತಿ ವರ್ಷವೂ ಬರುತ್ತಿದ್ದುದು ತದಡಿಯ ಸಮುದ್ರದಂಚಿನಿಂದ ನಮ್ಮೂರಿನ ತನಕವೂ ಇರುವ ಗುಡ್ಡಗಳ ನಡುವಿನ ಕಣಿವೆಯ ಮುಖಾಂತರ, ಅಲ್ಲಿಂದ ಬೀಸುವ ಮೂಡುಗಾಳಿಯನ್ನೇರಿ. ಹಾಗೆ ನೋಡಿದರೆ ಮಳೆಗಾಲ ಕೂಡ ಹಾದು ಬರುವ ದಾರಿಯೂ ಅದೇ. ಮಳೆಗಾಲ ಆರಂಭವಾಗುವಾಗ ಮೊದಲು ರೋ ಎಂದು ಅಲ್ಲಿ ಬೀಳುವ ಮಳೆ ಮನೆಯ ಎದುರಿನ ಗುಡ್ಡದಿಂದ ಕಾಣಿಸುತ್ತದೆ. ಹತ್ತು ನಿಮಿಷಗಳ ನಂತರ ಇಲ್ಲಿ ಮಳೆ ಹನಿ ಆರಂಭವಾಗುವುದು. ಮಳೆ ಬರುವುದು ಹೀಗೆ  ದೃಗೋಚರ ವಾಗುತ್ತದೆ. ಆದರೆ ದೀಪಾವಳಿ ಬರುವುದು ಅದೃಶ್ಯವಾಗಿ. ಹೂವು ಅರಳುವ ಹಾಗೆ. ಗಂಧ ಸೂಸುವ ಹಾಗೆ. ಅದನ್ನು ಅನುಭವಿಸಿಯೇ ನೋಡಬೇಕು.

Advertisement

ಕಥೆ ಮುಗಿದ ಮೇಲೆ ನಾಟಕದ ಪಾತ್ರಗಳು ಪರದೆಯ ಹಿಂದೆ ಹೋದ ರೀತಿಯಲ್ಲಿಯೇ ಈಗ ಮಳೆ ಹಿಂದಾಗುತ್ತದೆ. ಪೂರ್ತಿಯಾಗಿ ಹೋಗಿಬಿಡುತ್ತದೆಂದೇನೂ ಅಲ್ಲ. ತೆಳ್ಳಗಿನ ಶಾವಿಗೆ ಕಡ್ಡಿಯಂತಹ ಮಳೆ ಈಗಲೂ ಬರಬಹುದು. ಕೆಲವೊಮ್ಮೆ ಹುಡುಗಾಟವಾಡಲು ಕೂಡ ಮಳೆ ಬರಬಹುದು. ಗದ್ದೆ ಕೊಯ್ದು ಮುಗಿದ ಮೇಲೆ ಕೆಲ ಸಮಯ ಭತ್ತದ ಕುತ್ರಿ ಎಲ್ಲವೂ ಗದ್ದೆಯಲ್ಲಿಯೇ ಇರುತ್ತದಲ್ಲ! ಅದಕ್ಕೆ. ರೈತನನ್ನು ಗಡಿಬಿಡಿಯಲ್ಲಿ ಹಾಕಲು, ಕೆಲ ತಾಸು ಕಂಗಾಲು ಕೆಡವಲು ಮಳೆಸುರಿದು ಬಿಡುತ್ತದೆ. ಮಳೆಯ ಉದ್ದೇಶ ಪೂರ್ತಿ ಬೆಳೆಯನ್ನು ಹಾಳು ಮಾಡುವುದಲ್ಲವೇ ಅಲ್ಲ. ಮಾರನೆಯ ದಿನ ಮತ್ತೆ ನೀಲಿ ಬಿಸಿಲಿನ ಕೋಲು ಬಂದು ಬಿಡುತ್ತದೆ. ಭತ್ತದಕೇಯಿ ಈಗ ಒಣಗಿಕೊಳ್ಳುತ್ತದೆ. ರೈತನಿಗೆ ತೊಂದರೆಯೇನೂ ಆಗುವುದಿಲ್ಲ. ಕೆಲ ಕಾಲದ ಆತಂಕ ಅಷ್ಟೆ. ಮಳೆಯ ಆಟ ಗೆಳೆಯ ಗೆಳೆಯರ ನಡುವಿನ ಹುಡುಗಾಟದ ಹಾಗೆ. ಹಬ್ಬದ ಪಾಡ್ಯದ ದಿನ ಮಳೆ ಬಂದಿದ್ದೂ ಇದೆ. ದೇವರಿಗೆ, ಹಿರಿಯರಿಗೆ ಹಾಗೂ ಹುಲಿ ದೇವರಿಗೆ ಮನೆಯಲ್ಲಿ ಎಷ್ಟು ಆಕಳುಗಳಿವೆಯೋ ಅಷ್ಟು ಕಾಯಿ ಇಟ್ಟು ಕೈ ಮುಗಿದು ಬರುವಾಗ ಮೈಯೆಲ್ಲಾ ಒದ್ದೆಯಾಗುವುದೂ ಇದೆ.
ಹಬ್ಬ ಯಾವಾಗ ಎಂದು ಪಂಚಾಂಗದಲ್ಲಿ ಕ್ಯಾಲೆಂಡರ್‌ನಲ್ಲಿ ಇರುತ್ತದೆ. ಅದೆಲ್ಲ ಸರಿ. ಆದರೆ ಪ್ರಕೃತಿಯ ಒಳ ಮನಸ್ಸು ಸೂಕ್ಷ್ಮವಾಗಿ ತಿಳಿದವರಿಗೆ ಗೊತ್ತಿದೆ. ದೀಪಾವಳಿ ಬರುವ ಲಕ್ಷಣಗಳು ಬಹಳ ದಿನಗಳ ಮೊದಲಿನಿಂದಲೇ ಕಾಣಲಾರಂಭಿಸುತ್ತದೆ. 

ತೋಟದಲ್ಲಿ ಹೊಸದಾಗಿ ನೆಟ್ಟ ಎಲೆ ಬಳ್ಳಿ ಕುಡಿ ಮೊದಲ ಚಿಗುರು ಹೊರ ಹಾಕಿರುತ್ತದೆ. ನೆಟ್ಟ ಹೊಸಬಾಳೆ ಕೂಡ ಹಾಗೇ. ಹೆಡೆಗಳನ್ನು ಅರ್ಧ ಕತ್ತರಿಸಿ ನೆಟ್ಟಬಾಳೆಗೆ ಈಗ ಒಂದು ಉದ್ದ ಬಿಳಿ ಸುಳಿ ಹೊರಬಂದು ಮೊದಲು ಬೆತ್ತದ ಕೋಲಿನಂತಿದ್ದಿದ್ದು ಈಗ ಸುರುಳಿ ಬಿಚ್ಚಿಕೊಂಡು ಎಲೆಯಾಗಲು ಆರಂಭಿಸಿರುತ್ತದೆ. ಬೇಣದ ಮೇಲೆ ಬೆಳೆದಿರುವ ಕರಡ ಗೊಂಡೆಗೊಂಡೆ ಕಟ್ಟಿಕೊಳ್ಳಲಾರಂಭಿಸುತ್ತದೆ. ಹಕ್ಕಿಗಳು ಮಳೆಗಾಲದಲ್ಲಿ ಎಲ್ಲಿ ಅಡಗಿ ಕುಳಿತಿದ್ದವೋ ಏನೋ! ಈಗ ಕೆರೆಯ ತುಂಬ ಅವುಗಳ ಕಲರವ. ಮೆಣಸಿನ‌ ಹಕ್ಕಿಗೆ ಹಬ್ಬ ಆರಂಭವಾಗಿಯೇ ಬಿಟ್ಟಿರುತ್ತದೆ. ಏಕೆಂದರೆ ಕಾಳುಮೆಣಸು ಈಗ ಕೆಂಪು ಕೆಂಪು ಹಣ್ಣಾಗಿರುತ್ತದೆ. ಉದ್ದ ಬಾಲದ ಹಸಿರು ಗಿಳಿಗೂ ತುಂಬ ಪ್ರೀತಿ ಅದು. ಆಕಾಶಕ್ಕೆ ಹೋದ ಒಗ್ಗೆರೆ ಅಡಿಕೆ ಮರದ ಚಂಡೆಯ ತುಂಬ ಹಣ್ಣಡಿಕೆ ತುಂಬಿಕೊಂಡು ಯಕ್ಷಗಾನದ ಕಿರೀಟದಂತೆ ಕಾಣುತ್ತದೆ. ಕಾಲೇಜಿಗೆ ಹೋಗುವ, ಬಸ್ಸಿನಿಂದ ಇಳಿದು ಒಂದೇ ಕ್ಷಣ ಹಿಂದೆ ತಿರುಗಿ ನೋಡುವ ಹುಡುಗಿಯ ಕಣ್ಣಂಚಿನಲ್ಲಿಯೂ ಈಗ ಬೇರೆಯೇ ಮಿರುಗು.ಆಕೆಯ ಕಣ್ಣುಗಳು ಮುಂದೆ ಬರಲಿರುವ ಸಂಭ್ರಮವನ್ನು ಹೇಳಿಯೇ ಬಿಡುತ್ತವೆ. ದೀಪಾವಳಿಯ ಮರುದಿನ ಆಕೆಯ ಜಾತಕ ಮದುವೆಗಾಗಿ ಹೊರ ಹಾಕಬೇಕೆಂದು, ಬೆಂಗಳೂರಿನಲ್ಲಿರುವ ಬೆತ್ತಗೇರಿಯ ಹುಡುಗನಿಗೆ ಪ್ರಪೋಸಲ್‌ ಕೊಡಬೇಕೆಂದು ತಂದೆ-ತಾಯಿ ಮಾತನಾಡುತ್ತಿದುದು ಆಕೆಯ ಕಿವಿಗೆ ಬಿದ್ದಿದೆ. ಆತ ಸುಂದರಾಂಗ ಎಂಬ ವಿಚಾರ ಈಗಾಗಲೇ ಅವಳು ಸಂಗ್ರಹಿಸಿಬಿಟ್ಟಿದ್ದಾಳೆ. ಫೇಸ್‌ಬುಕ್‌ನಲ್ಲಿ ನೋಡಿಬಿಟ್ಟಿದ್ದಾಳೆ. ಸಂಭ್ರಮ ಅವಳ ಶರೀರವನ್ನೆಲ್ಲ ತುಂಬಿಕೊಂಡುಬಿಟ್ಟಿದೆ.ದೀಪಾವಳಿ ಅರಳಿಕೊಳ್ಳುವುದು ಮಾತಿನಲ್ಲಿ, ಕಲ್ಪನೆಯಾಗಿ. 

“”ದೇವರೇ, ಹಬ್ಬ ಬಂದೇ ಹೋಯಿತು. ಅಂಗಳಕ್ಕೆ ಮಣ್ಣು ಹಾಕಬೇಕು. ನೆಲ ಮಾಡಬೇಕು. ಗೊಬ್ಬರ ಹೊರುವುದು ಹಬ್ಬದ ಮರುದಿನವೇ ಬಿತ್ತು. ಆದರೆ ಈಗ ಹಂತಿಯನ್ನಾದರೂ ಕಿತ್ತು, ಸ್ವತ್ಛ ಮಾಡಲೇಬೇಕು. ಆಚೆ ಮನೆ ಈಚೆ ಮನೆಯದೆಲ್ಲಾ ಕೆಲಸ ಮುಗಿದು ಹೋಗಿದೆ. ಅಡಿಕೆ ಸುಲಿಯಬೇಕು. ಹಬ್ಬಕ್ಕೆ ದುಡ್ಡು ಬೇಕಲ್ಲ! ವಿಜಯ ದಶಮಿಯ ಮೂಹೂರ್ತಕ್ಕೆ ಅಡಿಕೆ ಹಾಕಲೇ ಬೇಕು. ಮನೆಯಂಗಳಕ್ಕೆ ಬಿಸಿಲಿನ ಕೋಲು ಮುಟ್ಟದಿದ್ದರೂ ರಸ್ತೆಯಲ್ಲಾದರೂ ಹಾಕಿಕೊಂಡು ಒಣಗಿಸಬೇಕು. ಹಾಗೆಯೇ ಭತ್ತ ಬೆಳೆದವರಿಗಂತೂ ಹಬ್ಬಕ್ಕೆ ಹೊಸ ಅಕ್ಕಿ ರೆಡಿಯಾಗಬೇಕು. ಮೇಲಾಗಿ ಮಳೆಗಾಲದಲ್ಲಿ ಮನೆ ಸುತ್ತ ಬೆಳೆದ ಕಳೆ ಕಿತ್ತು ಹಾಕಿ ಕುಟಾರೆ ಬೇಲಿಯಾದರೂ ತಾಗಿಸಿ ಸ್ವತ್ಛಗೊಳಿಸಬೇಕು”. ಹಬ್ಬಕ್ಕೆ ಕಜ್ಜಾಯ ಏನು ಮಾಡಬೇಕೆಂಬ ಚರ್ಚೆಯೂ ನಡೆದಿರುತ್ತದೆ. ಮೊದಲನೆಯ ದಿನ ದೊಡ್ಡ ಮಗೆಕಾಯಿ ಹಾಕಿ ಸಿಹಿ ದೋಸೆ. ಅದಕ್ಕೆ ತುಪ್ಪ ಹಾಕಿ ತಿನ್ನುವುದು. ಅದನ್ನೂ ಮಾಡಲೇಬೇಕು. ಅಮವಾಸ್ಯೆಯ ದಿನ ಪಾಯಸ ಮಾಡಿದರೂ ನಡೆಯುತ್ತದೆ. ಇನ್ನು ಪಾಡ್ಯದ ದಿನ ಹೋಳಿಗೆಯನ್ನೇ ಮಾಡುವ ಆಲೋಚನೆ ಇದೆ. ಹೋಳಿಗೆಯ ಹಾಗೆ ಬೇರೆ ಅಲ್ಲ, ಎಂದು ಯಜಮಾನಿಯ ಹೇಳಿಕೆ. ಕಿರಿಯ ಮಗನಿಗೆ ಪ್ರೀತಿ ಕಜ್ಜಾಯ ಅದೇ. ಈಗ ಬೆಂಗಳೂರಿನಲ್ಲಿದ್ದರೂ ಹಬ್ಬದ ದಿನ ಹೋಳಿಗೆ ಮಾಡು ಎಂದು ಆತ ಹೇಳಿಬಿಟ್ಟಿದ್ದಾನೆ. ದೊಡ್ಡ ಮಗನಿಗೆ ಏನಾದರೂ ನಡೆಯುತ್ತದೆ. ಅವನಿಗೆ ಖಾಸ್‌ ಇಲ್ಲ. ಸೊಸೆಯನ್ನೊಂದು ಮಾತು ಕೇಳಿ ನೋಡಬೇಕು.

ಹಬ್ಬದ ದಿನ ಬಂದಂತೆ ಮಾತು ಎತ್ತರವಾಗುತ್ತದೆ. ಅಡಿಗೆ ಮನೆಯ ಮಾತು ಹೊರಗಿನ ಹಳ್ಳಿಗೂ ಕೇಳಿಸುತ್ತದೆ. ಒಂದು ಸೀರೆ ತೆಗೆದುಕೊಂಡು ಬನ್ನಿ ಎಂದು ಹೇಳಿದರೆ ಗಂಡ ಎರಡೆರಡು ಸೀರೆ ತಂದುಬಿಟ್ಟಿದ್ದಾನೆ. ಸೆರಗು ಸ್ವಲ್ಪ ಬೇರೆ ಬಣ್ಣದ್ದಿರಬಹುದಿತ್ತು. ಆದರೂ ಗಂಡಸರಿಗೂ ಇಷ್ಟರ ಮಟ್ಟಿಗೆ ಸೀರೆ ಆರಿಸಲು ಬರುತ್ತದೆ ಎಂದರೆ ದೊಡ್ಡ ವಿಷಯ. ಎಲ್ಲರಿಗೂ ಹೊಸ ಬಟ್ಟೆ, ಸತ್ಯನಾರಾಯಣ ಸ್ಟೋರ್‌ನಿಂದ.

Advertisement

ಹೀಗೆ ಮನೆಯನ್ನೆಲ್ಲ ಮಾತು ತುಂಬಿಕೊಳ್ಳುತ್ತಾ ಹೋದರೆ ದೀಪಾವಳಿ ಬಂದು ಅಂಗಳದಲ್ಲಿ, ತುಳಸಿಕಟ್ಟೆಯ ಬಳಿ ನಾಚಿ ನಿಲ್ಲುತ್ತದೆ. ಅದನ್ನು ಪೂಜೆ ಮಾಡಿ ಸಿಂಡ್ಲೆಕಾಯಿ ಇಟ್ಟು, ಜಮಟೆ ಬಾರಿಸಿ “”ಹೋಂಡೇ ಹೋಂಡೇ” ಎಂದು ಹೇಳುತ್ತ ಒಳಕರೆದು ತರಬೇಕು. ದೀಪಾವಳಿ ಈಗ ಮೂರು ದಿನ ಉಳಿದುಕೊಳ್ಳುತ್ತದೆ.

ಇಂದಿನ ದಿನಗಳಲ್ಲಿ ದೀಪಾವಳಿ ಬರುವುದು ಬೇರೆ ರೀತಿ. ಯಾಕೋ ಅದು ತದಡಿ ದಾರಿಯಲ್ಲಿ ಬರುವುದು ಬಿಟ್ಟಿದೆ. ಈಗ ಅದು ಬರುವುದು ಪೇಪರ್‌ಗಳಲ್ಲಿ ಬರುವ ನೂರೆಂಟು ರೀತಿಯ ಡಿಸ್‌ಕೌಂಟ್‌ ಆಗಿ, ಸುಂದರಿಯರು ಜಾಹೀರಾತುಗಳ ತುಂಬೆಲ್ಲ ಬಗೆ ಬಗೆಯಲ್ಲಿ ನಿಲ್ಲುವ ಸೀರೆಯಾಗಿ, ವಜ್ರವಾಗಿ, ಆಭರಣಗಳಾಗಿ. ಕಾಲ ಬದಲಾದರೂ ದೀಪಾವಳಿಗೆ ಅದೇ ಸಂಭ್ರಮ. ಮಾರುಕಟ್ಟೆಯ ವಿವಿಧ ರೀತಿಯ ಸ್ವೀಟುಗಳ, ಡ್ರೆç ಫ್ರುಟ್ಸ್‌ಗಳ ಸಂಭ್ರಮವೂ ಮೊದಲಿನ ಸಡಗರಕ್ಕೆ ಸೇರಿಕೊಂಡಿದೆ. ಕೂದಲು ಇಳಿಬಿಟ್ಟು, ದಪ್ಪ ಕಪ್ಪು ಕನ್ನಡಕ ಹಾಕಿದ  ಸುಂದರಿಯರು, ಬ್ಲೀಚ್‌ ಮಾಡಿದ ಮುಖದ ಗಂಡಂದಿರು, ಹಿಂದಿನ ಸೀಟಿನ ಮುದ್ದುಗಲ್ಲದ ಮಕ್ಕಳು ಈಗ ದೀಪಾವಳಿಯೆಂದರೆ ಹೊರಬಿದ್ದು ಅಂಗಡಿಗಳಲ್ಲಿ ಮುತ್ತಿಕೊಳ್ಳುತ್ತಾರೆ. ದೀಪಾವಳಿ ದೀಪಾವಳಿಯೇ. ಎಲ್ಲೆಲ್ಲಿಯೂ ದೀಪದ ಮನೆಗಳು.

ಮೊದಲು ಸೀರೆಯುಟ್ಟು ಬರುತ್ತಿದ್ದ ದೀಪಾವಳಿ ಈಗ ಫ್ಯಾಶನೆಬಲ್‌ ಆದ ಬಣ್ಣ ಬಣ್ಣಗಳ ಬಟ್ಟೆಗಳಲ್ಲಿ ಬರುತ್ತದೆ. ದೀಪಾವಳಿ ಎಂದರೆ ದೀಪಾವಳಿಯೇ. ಅದು ತರುವ ಪುಳಕವೇ ಬೇರೆ.

– ಡಾ.ಆರ್‌.ಜಿ.ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next