Advertisement
ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಕಕ್ಯಾನ ನಿವಾಸಿ ಯೋಧ ಸುದರ್ಶನ ಗೌಡ ಅವರ ಮನೆಯಲ್ಲಿ ಬೆಳಗಿದ ತಿಬಿಲೆ ಹಣತೆಯ ಬೆಳಕಿನ ಪ್ರಭೆಯೊಂದಿಗೆ ಮನೆ ಪ್ರಕಾಶಿಸುತ್ತಿತ್ತು. ಮನೆ ಮಂದಿಯ ಮನಸ್ಸು ಬೆಸೆಯಿತು. ಸಂಭ್ರಮ ಪಸರಿಸಿತ್ತು..! ಅಲ್ಲಿ ಹಣತೆ, ಪಟಾಕಿಯ ಬೆಳಕಿನ ಜತೆ ಸುದರ್ಶನರ ಹಾಜರಿಯೂ ಮನೆ ಮಂದಿಯ ಸಡಗರವನ್ನು ಇಮ್ಮಡಿ ಸಿತ್ತು. ಪಂಜ-ಗುತ್ತಿಗಾರು ರಸ್ತೆಯಲ್ಲಿ 3 ಕಿ.ಮೀ. ದೂರ ಸಾಗಿದಾಗ ಮುಖ್ಯ ರಸ್ತೆ ಸನಿಹದ ಅವರ ಹೊಸ ಮನೆಯಲ್ಲಿ ಗುರುವಾರ ರಾತ್ರಿಯ ಸಂಭ್ರಮ.
Related Articles
Advertisement
ನಾಲ್ಕೈದು ವರ್ಷದ ಹಿಂದಿನ ದೀಪಾವಳಿಗೆ ಬಂದಿದ್ದ ಮಗ ಸುದರ್ಶನ ಈ ಬಾರಿ ಬರುವ ಬಗ್ಗೆ ಹೇಳಿದ್ದ. ನ. 3ಕ್ಕೆ ವಿಮಾನ ಕೈಕೊಟ್ಟಿತಂತೆ. ಪುಣ್ಯಕ್ಕೆ ಮತ್ತೆ ನ.7ಕ್ಕೆ ಅವಕಾಶ ಸಿಕ್ಕಿತ್ತು ಎನ್ನುವ ಅಮ್ಮಕ್ಕರಿಗೆ ಮಗನ ಆಗಮನ ತುಸು ಹೆಚ್ಚೇ ಖುಷಿ ತಂದಿದೆ. ಮಗ ಬಂದದ್ದು ಹಬ್ಬಕ್ಕೆ ಸಡಗರ ಬಂದಿತು ಎನ್ನುತ್ತಲೇ ಹಬ್ಬದ ಊಟದ ಮೆನು ಓದಿದರು.
ಇಲ್ಲಿ ಮರ ಹಾಕುವ ಸಂಪ್ರ ದಾಯ ಇಲ್ಲ. ಹಣತೆ ಹಚ್ಚಿ, ಗೋಪೂಜೆ ಮಾಡಿದ್ದೇವೆ. ಸಿಹಿ ಊಟ ಇದೆ. ಇದು ವರ್ಷಂಪ್ರತಿ ನಡೆಸುವ ಆಚರಣೆ. ಹೆಚ್ಚಾಗಿ ಮನೆಯವರು ಮಾತ್ರ ಇರುತ್ತೇವೆ. ಈ ಬಾರಿ ಸೊಸೆ ಮನೆ ಯವರೂ ಬಂದಿದ್ದಾರೆ ಎಂದರು ಅಮ್ಮಕ್ಕ.
ಪತಿ ದೂರದ ಶ್ರೀನಗರದಲ್ಲಿದ್ದರು. ಅಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಐದು ತಿಂಗಳಿನಿಂದ ಮನೆಗೆ ಬಂದಿರಲಿಲ್ಲ. ಪತಿಯ ಆಗಮನ ಸಂಭ್ರಮ ತಂದಿರು ವುದು ನಿಜ. ಪುಟ್ಟ ಮಗನಂತೂ ಸಿಕ್ಕಾಪಟ್ಟೆ ಕುಣಿಯುತ್ತಿದ್ದಾನೆ ಎಂದವರು ಪತ್ನಿ ಲಾವಣ್ಯ.ಸೈನ್ಯಕ್ಕೆ ಸೇರಿ ಇದು 17ನೇ ವರ್ಷ. ಪ್ರತಿ ದೀಪಾವಳಿಗೆ ಬರಬೇಕು ಎಂದು ಕೊಳ್ಳುತ್ತೇವೆ, ಆದರೆ ಆಗುತ್ತಿಲ್ಲ. ನಾಲ್ಕೈದು ವರ್ಷದ ಹಿಂದೆ ಬಂದಿದ್ದೆ. ನ. 3ಕ್ಕೆ ಬರಲು ಸಿದ್ಧತೆ ಆಗಿತ್ತು. ಸಂಜೆ 3 ಗಂಟೆಗೆ ವಿಮಾನ ಹತ್ತಬೇಕಿತ್ತು. ಆವತ್ತು ಮಧ್ಯಾಹ್ನವೇ ವಿಪರೀತ ಮಂಜು ಇದ್ದ ಕಾರಣ ಸಾಧ್ಯವಾಗಲಿಲ್ಲ. ನ.7ಕ್ಕೆ ಅದೃಷ್ಟ ಕೈ ಹಿಡಿಯಿತು. ಉತ್ತರ ಕರ್ನಾಟಕ, ಬೇರೆ ರಾಜ್ಯಗಳಲ್ಲಿ ನ.6ಕ್ಕೆ ಹಬ್ಬ ಮುಗಿದಿದೆ. ನಮ್ಮಲ್ಲಿ ನ.7, 8 ಕ್ಕೆ ಆದ ಕಾರಣ ಹಬ್ಬದ ಸಂಭ್ರಮ ಸಿಕ್ಕಿದೆ.ಮನೆ ಮಂದಿ ಜತೆ ಸೇರಿ ಹಬ್ಬ ಆಚರಿಸುವುದು ಅಂದರೆ ಅದು ವರ್ಣಾನತೀತ ಅನುಭವ ಎನ್ನುತ್ತಲೇ ಗೋಪೂಜೆಗೆ ಅಣಿಯಾದರು ಯೋಧ ಸುದರ್ಶನ ಗೌಡ. ಅಂಗಳದಲ್ಲಿದ್ದ ದೀಪಗಳಲ್ಲೂ ಹೊಸ ಉತ್ಸಾಹ ಎದ್ದು ಕಾಣುತ್ತಿತ್ತು ಅವರ ಪುಟ್ಟ ಮಗುವಿನಲ್ಲಿದ್ದಂತೆಯೇ. ಅಣ್ಣ ಹಬ್ಬಕ್ಕೆ ಬಂದಿರುವುದೇ ಖುಷಿ. ಆದಕ್ಕಿಂತ ಬೇರೆ ಏನು ಬೇಕು? ಈ ದೀಪಾವಳಿ ಅಣ್ಣ, ಅತ್ತಿಗೆ, ಪುಟ್ಟ ಮಗು ಜತೆ. ಬೇರೇನೂ ಹೇಳಲು ತೋಚದು.
-ಸುಬ್ರಹ್ಮಣ್ಯ, ಯೋಧನ ಸಹೋದರ ಕಿರಣ್ ಪ್ರಸಾದ್ ಕುಂಡಡ್ಕ