Advertisement

“ಅತಿಥಿ ಉಪನ್ಯಾಸಕರಿಗೆ ಡೈವೋರ್ಸ್‌ ಕೊಡ್ತಿದಾರೆ’

06:00 AM Dec 14, 2018 | Team Udayavani |

ವಿಧಾನಪರಿಷತ್ತು: ಅತಿಥಿ ಉಪನ್ಯಾಸಕರ ಹುದ್ದೆಗಳು ಖಾಯಂ ಆಗುತ್ತವೆ ಎಂದು ನಂಬಿ ಅವರನ್ನು ಮದುವೆ ಮಾಡಿಕೊಂಡವರು, ಇದೀಗ ಆ ಉಪನ್ಯಾಸಕರಿಗೆ ವಿವಾಹ ವಿಚ್ಛೇದನ ನೀಡುತ್ತಿದ್ದಾರೆ. ಇನ್ನಾದರೂ ಅವರ ಬಗ್ಗೆ ಸರ್ಕಾರ ಗಮನ ಹರಿಸಬೇಕು.’ – ಗುರುವಾರ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅವರು ಅತಿಥಿ ಉಪನ್ಯಾಸಕರ ಸಂಕಷ್ಟದ ಕುರಿತು
ಸರ್ಕಾರದ ಗಮನ ಸೆಳೆದ ಪರಿ ಇದು.ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ ಸದಸ್ಯರಾದ ಭೋಜೆಗೌಡ, ಬಿಜೆಪಿಯ ಆಯನೂರು ಮಂಜುನಾಥ ಸೇರಿ ಅನೇಕರು ಅತಿಥಿ ಉಪನ್ಯಾಸಕರ ಕುರಿತು ಸರ್ಕಾರ ನಿರ್ಲಕ್ಷ್ಯವಹಿಸಬಾರದು. ಕೂಡಲೇ ಕ್ರಮ ಕೈಗೊಂಡು ಕರ್ನಾಟಕ ವಿಶ್ವವಿದ್ಯಾಲಯದ ಮಾದರಿಯಲ್ಲಿ ತಿಂಗಳಿಗೆ 25 ಸಾವಿರ ರೂ.ಕೊಡಬೇಕೆಂದು ಆಗ್ರಹಿಸಿದರು.

Advertisement

ಮಧ್ಯ ಪ್ರವೇಶಿಸಿ ಮಾತನಾಡಿದ ಮರಿತಿಬ್ಬೇಗೌಡ, ರಾಜ್ಯದಲ್ಲಿ ಅತಿಥಿ ಉಪನ್ಯಾಸಕರ ಸ್ಥಿತಿ ಗಂಭೀರವಾಗಿದೆ. ಎಂ.ಎ. ಪಿಎಚ್‌ಡಿ, ನೆಟ್‌, ಸ್ಲೆಟ್‌ ಪಾಸಾಗಿ ಉಪನ್ಯಾಸಕ ವೃತ್ತಿಯಲ್ಲಿದ್ದಾರೆ ಎಂದು ಹೆಮ್ಮೆಯಿಂದ ಮದುವೆ ಮಾಡಿಕೊಂಡವರು. ಇದೀಗ ಅವರ ದುಃಸ್ಥಿತಿ ನೋಡಿ ಅವರಿಗೆ ಡೈವೋರ್ಸ್‌ ಕೊಡುತ್ತಿದ್ದಾರೆ. ಕೂಡಲೇ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅತಿಥಿ ಉಪನ್ಯಾಸಕರ ಬಗ್ಗೆ ಮಾನವೀಯತೆಯಿಂದ ಕ್ರಮ ವಹಿಸುತ್ತೇನೆಂದು ಭರವಸೆ ನೀಡಿದರು.

ರಾಜ್ಯದ 19 ವಿವಿಗಳಲ್ಲಿ 6636 ಹುದ್ದೆಗಳು ಖಾಲಿ !
ರಾಜ್ಯದ 19 ವಿವಿಗಳಲ್ಲಿ ಒಟ್ಟು 6636 ಹುದ್ದೆಗಳು ಖಾಲಿಯಾಗಿದ್ದು, ಅವುಗಳನ್ನು ನಿಯಮಾನುಸಾರ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಬಿಜೆಪಿ ಸದಸ್ಯ ಅ.ದೇವೇಗೌಡ ಅವರು ಕೇಳಿದ ಪ್ರಶ್ನೆಗೆ
ಲಿಖೀತ ಉತ್ತರ ನೀಡಿರುವ ಸಚಿವರು, ರಾಜ್ಯದ ಎಲ್ಲಾ ವಿವಿಗಳಲ್ಲಿಯೂ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿಯಿವೆ. ಒಟ್ಟು 12,306 ಹುದ್ದೆಗಳು ಸರ್ಕಾರದಿಂದ ಮಂಜೂರಾಗಿವೆ. ಈ ಪೈಕಿ 2,044 ಬೋಧಕ ಮತ್ತು 3,626 ಬೋಧಕ ಹುದ್ದೆಗಳು
ಭರ್ತಿಮಾಡಲಾಗಿದೆ. ಇನ್ನುಳಿದಂತೆ 6,636 ಹುದ್ದೆಗಳು ಖಾಲಿಯಾಗಿದ್ದು, ನಿಯಮಗಳ ಅನುಸಾರ ಭರ್ತಿಗೆ ಅನುಮತಿ
ನೀಡಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next