ಗದಗ: 2022-23ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸೆ. 20ರಿಂದ ಆರಂಭಗೊಳ್ಳಲಿದ್ದು, ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
ಗದಗ ಜಿಲ್ಲೆಯಲ್ಲಿ ಸೆ. 20ರಂದು ಬೆಳಿಗ್ಗೆ 9ಕ್ಕೆ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಖೋಖೋ, ನೆಟ್‌ಬಾಲ್, ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣ ಕುಸ್ತಿ ಮನೆಯಲ್ಲಿ ಬೆಳಿಗ್ಗೆ 9ಕ್ಕೆ ಟೇಕ್ವಾಂಟೋ ಸ್ಪರ್ಧೆ ಜರುಗಲಿವೆ.
ಬೆಳಗಾವಿ ಜಿಲ್ಲೆಯಲ್ಲಿ ಸೆ. 20ರಂದು ಬೆಳಿಗ್ಗೆ 9ಕ್ಕೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜುಡೋ(ಆಯ್ಕೆ), ಬಾಕ್ಸಿಂಗ್(ಆಯ್ಕೆ), ಭಾರ ಎತ್ತುವುದು(ಆಯ್ಕೆ), ಜಿಮ್ನಾಸ್ಟಿಕ್(ಆಯ್ಕೆ), ಆರ್ಚರಿ(ಆಯ್ಕೆ), ಸೆ. 21ರಂದು ವಾಲಿಬಾಲ್, ಬಾಸ್ಕೆಟ್ ಬಾಲ್, ಕುಸ್ತಿ, ಟೇಬಲ್ ಟೆನ್ನಿಸ್, ಟೆನ್ನಿಸ್, ಈಜು, ಕಬಡ್ಡಿ ಸ್ಪರ್ಧೆಗಳು ಜರುಗಲಿವೆ.
ಧಾರವಾಡ ಜಿಲ್ಲೆಯಲ್ಲಿ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸೆ. 21ರಂದು ಬೆಳಿಗ್ಗೆ 9ಕ್ಕೆ ಅಥ್ಲೇಟಿಕ್ಸ್, ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ಜರುಗಲಿವೆ.
ಬಾಗಲಕೋಟಿ ಜಿಲ್ಲೆಯಲ್ಲಿ ಸೆ. 21ರಂದು ಬೆಳಿಗ್ಗೆ 9ಕ್ಕೆ ಬಿ.ವಿ.ವಿ. ಸಂಘದ ಮೈದಾನದಲ್ಲಿ ಫುಟ್ ಬಾಲ್, ಹಾಕಿ, ಮುಧೋಳದ ರನ್ನ ತಾಲೂಕು ಕ್ರೀಡಾಂಗಣದಲ್ಲಿ ಹ್ಯಾಂಡ್ ಬಾಲ್, ಜಿಲ್ಲಾ ಕ್ರೀಡಾಂಗಣ ನವನಗರದಲ್ಲಿ ಬಾಲ್ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ಕ್ರೀಡೆಗಳು ಜರುಗಲಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.