Advertisement
ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ವಾಸ್ತವ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಖಾಲಿ ಹಾಗೂ ನಿರ್ವಹಣೆ ಇಲ್ಲದ ನೂರಾರು ಸೈಟ್‌ಗಳು ಜನರ ಜೀವಕ್ಕೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುತ್ತಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳದ ನಗರಸಭೆ ವಿರುದ್ಧ ಸ್ಥಳೀಯರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ದಶಕದ ಹಿಂದೆ ಖರೀದಿಸಿ, ಮರಗಳನ್ನು ನೆಟ್ಟು ಬೇಲಿ ಹಾಕಿ, ಮತ್ತೆ ಹಿಂದಿರುಗದೇ ನಿವೇಶನದ ನಿರ್ವಹಣೆ ಮಾಡದ ನೂರಾರು ಸೈಟ್‌ಗಳು ನಗರಸಭೆ ವ್ಯಾಪ್ತಿಯಲ್ಲಿದೆ.
ಮನೆಗಳ ಮಧ್ಯೆ ಖಾಲಿ ಉಳಿಸಿಕೊಂಡ ನಿರ್ವಹಣೆ ಕಾಣದ ಸೈಟ್‌ಗಳಲ್ಲಿ ಆಳೆತ್ತರದ ಪೊದೆಗಳು, ಹಾವು ಸೇರಿದಂತೆ ವಿಷ ಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಮನೆಯಂಗಳದಲ್ಲಿ ಆಟವಾಡುವ ಮಕ್ಕಳ ಹಾಗೂ ಹಿರಿಯ ನಾಗರಿಕರ ಜೀವಕ್ಕೆ ಕಂಟಕವಾಗಿ ಪರಿಣಿಮಿಸುತ್ತಿದೆ. ಕೆಲವಡೆ ಖಾಲಿ ಸೈಟ್‌ಗಳು ಕಸದಿಂದ ತುಂಬಿ ಹೋಗಿದ್ದು, ಸಾಂಕ್ರಾಮಿಕ ರೋಗಗಳ ತಾಣವಾಗಿ ಪರಿಣಮಿಸಿದೆ. ಸಾರ್ವಜನಿಕ ಆಸ್ತಿಗೆ ಹಾನಿ!
ಸೈಟ್‌ಗಳಲ್ಲಿ ಬೆಳೆದು ನಿಂತಿರುವ ಬೃಹತ್ ಆಕಾರದ ಮರಗಳಿಂದ ಸರಕಾರಿ ಆಸ್ತಿಗೆ ಹಾನಿಯಾಗುತ್ತಿದೆ. ಖಾಲಿ ನಿವೇಶನದ ಮಾಲಕರು 10ವರ್ಷಗಳ ಹಿಂದೆ ನೆಟ್ಟ ಗಿಡಗಳು ಬೆಳೆದು ನಿಂತು ಸಮೀಪದ ವಿದ್ಯುತ್ ಕಂಬಗಳಿಗೆ ಹಾನಿಯುಂಟು ಮಾಡುತ್ತಿದೆ. ಮಳೆಗಾಲ, ಗಾಳಿ, ಮಳೆಗೆ ಭಾರಿ ಗಾತ್ರದ ಮರಗಳು ಬೇರು ಸಹಿತ ಬಿದ್ದು ಮನೆಗಳು ಹಾನಿಯಾಗಿವೆ. ಇಂತಹ ಘಟನೆ ಪರ್ಕಳ ಮಾರುತಿ ನಗರದ ಮೂರನೇ ಕ್ರಾಸ್ ತಿರುವಿನಲ್ಲಿ ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
Related Articles
Advertisement
ಕೈಚೆಲ್ಲಿದ ಸ್ಥಳೀಯಾಡಳಿತನಿರ್ವಹಣೆಯಿಲ್ಲದ ಖಾಲಿ ನಿವೇಶನದಲ್ಲಿ ಬೆಳೆದು ನಿಂತ ಮರಗಳ ತೆರವಿನ ಬಗ್ಗೆ ನಗರಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಅವರಲ್ಲಿ ಆ ನಿವೇಶನದ ಮಾಲಕರ ಪಹಣಿ, ವಿಳಾಸ, ದೂರವಾಣಿ ಸಂಖ್ಯೆ ಲಭ್ಯವಿಲ್ಲ ಎನ್ನುವ ಉತ್ತರ ಕೇಳಿ ಬರುತ್ತಿವೆ ಎನ್ನುತ್ತಾರೆ ಸ್ಥಳೀಯರು. ಜತೆಗೆ 2020ರಲ್ಲಿ ನಗರದ ಹಳೆಯ ಹಾಗೂ ಸ್ವಾತಂತ್ರ್ಯ ಪೂರ್ವದ ರಾಯಲ್ ಮಹಲ್ ಮುರಿದು ಬಿದ್ದ ಸಂದರ್ಭದಲ್ಲಿ ಅಧಿಕಾರಿಗಳು 35 ವಾರ್ಡ್‌ಗಳಲ್ಲಿ ವಾಸವಿಲ್ಲದ, ಹಳೆಯದಾದ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ಆದರೆ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ. ತೆರವು ಅಗತ್ಯ
ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರ ಜೀವ ಹಾಗೂ ಸರಕಾರಿ ಆಸ್ತಿಗೆ ಹಾನಿಯಾಗುವ ಮರ, ಪೊದೆಗಳು ಇದ್ದಲ್ಲಿ ಅದನ್ನು ನಗರಸಭೆ ಸಾರ್ವಜನಿಕ ಹಿತಾಸಕ್ತಿಯಿಂದ ತೆರವುಗೊಳಿಸಲು ಮುಂದಾಗಬೇಕು. ಬೃಹತ್ ಗಾತ್ರದ ಮರಗಳನ್ನು ತೆರವುಗೊಳಿಸಿ ಅದರ ವೆಚ್ಚವನ್ನು ಸ್ಥಳದ ಮಾಲಕರಿಂದ ಸಂಗ್ರಹಿಸಬೇಕಾಗಿದೆ. ಮಾಲಕರು ಒಂದಲ್ಲ ಒಂದು ದಿನ ಮನೆ ನಿರ್ಮಾಣಕ್ಕೆ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ನಗರಸಭೆಗೆ ಭೇಟಿ ಮಾಡಬೇಕಾಗುತ್ತದೆ. ಈ ವೇಳೆ ಅವರಿಂದ ಬಡ್ಡಿ ಸಮೇತ ಶುಲ್ಕ ಸಂಗ್ರಹಿಸುವ ಅವಕಾಶ ನಗರಸಭೆಗಿದೆ. ಆರ್ಥಿಕ ವಿಚಾರ ನಿರ್ಣಯ ಅಗತ್ಯ
ಖಾಲಿ ಸೈಟ್‌ನಲ್ಲಿ ಬೆಳೆದಿರುವ ಮರ, ಪೊದೆ ಹಾಗೂ ಹಳೆ ಕಾಲದ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ನಗರಸಭೆ ನಿಧಿ ಬಳಕೆ ಮಾಡಬೇಕು. ಇದಕ್ಕೆ ಜನಪ್ರತಿನಿಧಿಗಳು ನಿಗದಿ ಸ್ಥಳ ಹಾಗೂ ಕಟ್ಟಡವನ್ನು ಗುರುತಿಸಿ, ತೆರವುಗೊಳಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದಾಗ ಮಾತ್ರ ನಗರಸಭೆ ನಿಧಿ ಬಳಸಿಕೊಂಡ ಕೆಲಸ ಮಾಡಲು ಸಾಧ್ಯ.
– ಮೋಹನ್ ರಾಜ್
ಎಎಇ, ನಗರಸಭೆ, ಉಡುಪಿ