ಬೆಂಗಳೂರು: ಯುಗಾದಿ ಬಳಿಕ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ ಕುರಿತು ಜಿಲ್ಲಾವಾರು ಮುಖಂಡರ ಸಭೆ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಒಬೇದುಲ್ಲಾ ಜೆಡಿಎಸ್ ಸೇರ್ಪಡೆ ಬಳಿಕ ಮಾತನಾಡಿದ ಅವರು, ಪ್ರತಿ ವಿಧಾನಸಭೆ ಕ್ಷೇತ್ರದ ಮುಖಂಡರ ಸಭೆ ನಡೆಸಲಾಗುವುದು. ಕಾರ್ಯಕರ್ತರು ಹಾಗೂ ನಾಯಕರು ಜತೆಗೂಡಿ ಒಟ್ಟಾಗಿ ವಿಶ್ವಾಸದಿಂದ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಪಂಚರತ್ನ ಯೋಜನೆಯ ಪ್ರಣಾಳಿಕೆ ಈ ಹಿಂದೆ ಯಾವ ಸರ್ಕಾರಗಳು ಜನರ ಮುಂದೆ ಇಟ್ಟಿರಲಿಲ್ಲ. ಕುಮಾರಸ್ವಾಮಿ ಇಟ್ಟಿದ್ದು ಜನ ಬೆಂಬಲಿಸಿದ್ದಾರೆ ಎಂದು ಹೇಳಿದರು.
ಒಬೇದುಲ್ಲಾ ಅವರು ನನ್ನ ಹಳೆಯ ಸ್ನೇಹಿತರು, ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ನಿಮ್ಮ ಜತೆ ಇರುತ್ತೇನೆ ಎಂದು ಬಂದಿದ್ದಾರೆ. ಅವರಿಗೆ ಸ್ವಾಗತ ಕೋರಿದ್ದೇನೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಒಬೇದುಲ್ಲಾ ಅವರು ಮುಸ್ಲಿಂ ಸಮುದಾಯದಲ್ಲಿ ತಮ್ಮದೇ ಆದ ಹೆಸರು ಹೊಂದಿದ್ದಾರೆ. ವಿ.ಪಿ.ಸಿಂಗ್ ಒಡನಾಡಿಯಾಗಿದ್ದವರು ಎಂದು ತಿಳಿಸಿದರು. ಅಲ್ಪಸಂಖ್ಯಾತ ಸಮುದಾಯ ಜೆಡಿಎಸ್ ಜತೆ ಇದೆ. ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.