ವಿಜಯಪುರ: ಸಂಭವನೀಯ ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಾದ ಹಳ್ಳಿಗಳ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಜಿಲ್ಲಾಡಳಿತ ಅಗತ್ಯ ಸಿದ್ಧತೆಗೆ ಮುಂದಾಗಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ತಾಲೂಕಿನ ದೂಳಖೇಡ, ಶಿರಾಡೋಣ ಸೇರಿ ಇತರೆ ಚೆಕ್ ಪೋಸ್ಟ್‌ಗಳನ್ನು ಬಲಪಡಿಸಲು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ಪ್ರಮುಖವಾಗಿ ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಧಿಕಾರಿ ಸುನೀಲಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಭವನೀಯ ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಗಳು ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಭಾಗದ ಜಿಲ್ಲೆಗಳ ಹಿರಿಯ ಅ ಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್‌ಗಳನ್ನು ಬಲಪಡಿಸಿ ಪ್ರಯಾಣಿಕರ ತಪಾಸಣೆ, ಗಡಿ ಭಾಗದ ಗ್ರಾಮಗಳ ಎಲ್ಲ ಅರ್ಹ ವ್ಯಕ್ತಿಗಳಿಗೆ ಲಸಿಕೆ ಹಾಕಿಸುವ ಕುರಿತು ಯೋಜನೆ ರೂಪಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವವರಿಗೆ ಈ ಕೆಳಕಾಣಿಸಿದ ಕ್ರಮಗಳನ್ನು ಕೈಗೊಳ್ಳಲಾಗುವುದು. 72 ಗಂಟೆಗಳ ಮುಂಚೆ ಪಡೆದಿರುವ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದಲ್ಲಿ ಅಂಥವರಿಗೆ ಮುಂದಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಒಂದೊಮ್ಮೆ ನಿಗದಿಗಿಂತ ಮೊದಲೇ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದಿದ್ದರೂ ಲಸಿಕೆ ಪಡೆದಿದ್ದು ಸೋಂಕಿನ ಲಕ್ಷಣ ಇಲ್ಲದವರಿಗೆ ಮುಂದಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ.
ಲಸಿಕೆ ಪಡೆದಿದ್ದರೂ ಕೋವಿಡ್ ಸೋಂಕಿನ ಲಕ್ಷಣ ಇದ್ದಲ್ಲಿ ಸ್ಥಳದಲ್ಲೇ ರ್ಯಾಟ್ ಪರೀಕ್ಷೆ ಮಾಡಿ, ಪಾಸಿಟಿವ್ ಬಂದಲ್ಲಿ ಟ್ರೈಯೆಸಿಂಗ್ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ನೆಗೆಟಿವ್ ವರದಿ ಬಂದಲ್ಲಿ ಆರ್‌ಟಿಪಿಸಿಆರ್ ಟೆಸ್ಟ್‌ಗಾಗಿ ಗಂಟಲು ದ್ರವ ಸಂಗ್ರಹಿಸಿ, ಪೂರ್ಣ ವಿಳಾಸ ಪಡೆದು ಫಲಿತಾಂಶ ಬರುವವರೆಗೆ ಹೋಂ-ಕ್ವಾರೈಂಟನ್‌ನಲ್ಲಿ ಇರಲು ಸೂಚಿಸಿ ಮುಂದಿನ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ಪಾಸಿಟಿವ್ ಬಂದಲ್ಲಿ ಟ್ರೈಯೆಸಿಂಗ್ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಒಂದೊಮ್ಮೆ ನೆಗೆಟಿವ್ ವರದಿ ಇಲ್ಲದಿದ್ದಲ್ಲಿ ಲಸಿಕೆ ಪಡೆಯದಿದ್ದಲ್ಲಿ ರ್ಯಾಟ್ ಪರೀಕ್ಷೆ-ಆರ್ ಟಿಪಿಸಿಆರ್ ಪರೀಕ್ಷೆ ನಡೆಸಿ ಕೋವಿಡ್ ನಿಯಮದಂತೆ ಕ್ರಮ ಕೈಗೊಳ್ಳಲಾಗುತ್ತದೆ ಮಾಹಿತಿ ನೀಡಿದ್ದಾರೆ.
ಒಂದೊಮ್ಮೆ ಪ್ರಯಾಣಿಕರು ವಿಜಯಪುರ ಜಿಲ್ಲೆಯವರಾಗಿದ್ದು ಲಸಿಕೆ ಪಡೆಯದಿದ್ದಲ್ಲಿ ಅಂಥವರ ವಿಳಾಸ ಖಚಿತ ಪಡಿಸಿಕೊಳ್ಳಲಾಗುತ್ತದೆ. ನಂತರ ಸಮೀಪದ ಪಿಎಚ್‌ಸಿ ಲಸಿಕಾ ಕೇಂದ್ರಕ್ಕೆ ಮೊಬೈಲ್ ಲಸಿಕಾ ತಂಡಕ್ಕೆ ಕಳುಹಿಸಿ ಲಸಿಕೆ ನೀಡಲಾಗುತ್ತದೆ ಎಂದು ವಿವರ ನೀಡಿದ್ದಾರೆ. ಜಿಲ್ಲೆಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಪ್ರಯಾಣಿಸುವವರಿಗೆ ಸರ್ಕಾರ ರೂಪಿಸಿರುವ ಕೋವಿಡ್ ನಿಯಮಗಳಂತೆ ಕ್ರಮ ಕೈಗೊಳ್ಳಲಾಗುವುದು. ಲಸಿಕೆ ಪಡೆದಿರುವ ಪ್ರಮಾಣ ಪತ್ರ ಇದ್ದು ಕೋವಿಡ್ ಸೋಂಕಿನ ಲಕ್ಷಣ ಇಲ್ಲದಿದ್ದಲ್ಲಿ ಅಂಥವರಿಗೆ ಮುಂದಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಎಂದು ವಿವರಿಸಿದ್ದಾರೆ.