ಬೀದರ: ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಬೀದರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2018ರ ಚಟುವಟಿಕೆಗಳು ಬುಧವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಡಿಎಆರ್ ತಂಡ, ಮಾರ್ಕೇಟ್ ಠಾಣೆ ಉಪ ವಿಭಾಗದ ತಂಡ, ಮಹಿಳಾ ತಂಡ, ಬೆಮಳಖೇಡ ಠಾಣೆ ಉಪ ವಿಭಾಗದ ತಂಡ ಹಾಗೂ ಚಿಂತಾಕಿ ಠಾಣೆ ಉಪ ವಿಭಾಗದ ತಂಡಗಳಿಂದ ಪಥ ಸಂಚಲನ ನಡೆಯಿತು.
ಈ ಮಧ್ಯೆ ನಾಲ್ಕು ಜನ ಕ್ರೀಡಾಪಟುಗಳು ಪೊಲೀಸ್ ಧ್ವಜ ತೆಗೆದುಕೊಂಡು ಬಂದು ಗೌರವ ಸಲ್ಲಿಸಿದರು. ಬಳಿಕ ಕ್ರೀಡಾಕೂಟ ಕವಾಯತಿನ ನೇತೃತ್ವ ವಹಿಸಿದ್ದ ಆರ್‌ಪಿಐ ಶಶಿಧರ ಅವರು ಪೊಲೀಸ್ ಧ್ವಜವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಹಸ್ತಾಂತರಿಸಿದರು.
ಸಿಇಒ ಮಹಾಂತೇಶ ಬೀಳಗಿ ಮುಂದಿನ ಒಂದು ವರ್ಷದ ಅವಧಿಗೆ ಪೊಲೀಸ್ ಧ್ವಜದ ರಕ್ಷಣೆಗಾಗಿ ಧ್ವಜವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಅವರಿಗೆ ಹಸ್ತಾಂತರಿಸಿದರು. ವಿವಿಧ ಸ್ಪರ್ಧೆಯಲ್ಲಿ ಜಯಗಳಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ, ಹುಮನಾಬಾದ, ಭಾಲ್ಕಿ ಪೊಲೀಸ್ ಉಪಾಧೀಕ್ಷಕರಾದ
ಮಹೇಶ್ವರಪ್ಪ, ಎಸ್.ವೈ. ಹುಣಸಿಕಟ್ಟಿ, ವೆಂಕನಗೌಡ ಪಾಟೀಲ, ಡಿಎಆರ್ ಡಿವೈಎಸ್‌ಪಿ ಸುನೀಲ… ಕೊಡ್ಲಿ ಹಾಗೂ ವಿವಿಧ ಠಾಣೆಗಳ ಪಿಎಸ್‌ಐ ಮತ್ತು ಸಿಪಿಐಗಳು ಹಾಜರಿದ್ದರು.