Advertisement

ಬಾಗಲಕೋಟೆ: ಫಲಾನುಭವಿಗಳಿಗೆ ಸಾಲ ವಿಳಂಬ ಮಾಡಬೇಡಿ-ಶಶಿಧರ ಕುರೇರ

05:22 PM Jun 27, 2024 | Team Udayavani |

■ ಉದಯವಾಣಿ ಸಮಾಚಾರ
ಬಾಗಲಕೋಟೆ: ಸರಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಗಾಗಿ ಬಾಕಿ ಇರುವ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಜಿಪಂ ಸಿಇಒ ಶಶಿಧರ ಕುರೇರ, 15 ದಿನಗಳ ಗಡುವು ನೀಡಿದರು.

Advertisement

ಜಿಪಂ ಸಭಾ ಭವನದಲ್ಲಿ ಬುಧವಾರ ಜಿಲ್ಲಾ ಅಗ್ರಣಿ ಬ್ಯಾಂಕ್‌ನಿಂದ ಜರುಗಿದ ಬ್ಯಾಂಕರ್ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳಿಗೆ ಬ್ಯಾಂಕುಗಳು ಸಾಲ ಕೊಡದೇ ಇದ್ದರೆ ಹೇಗೆ. ಹೀಗಾದರೆ ಯೋಜನೆಗಳು ಹೇಗೆ ಅನುಷ್ಠಾನಗೊಳ್ಳಬೇಕು ಎಂದು ಪ್ರಶ್ನಿಸಿದರು. ಕಾಟಾಚಾರಕ್ಕೆ ಸಭೆಗೆ ಬರಬೇಡಿ, ಕೇವಲ ಸಭೆ ನಡೆಸುವುದು, ನಿರ್ದೇಶನ ನೀಡುವುದು ಆಗುತ್ತಿದೆ. ಯಾವುದೇ ರೀತಿಯ ಕೆಲಸವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿನ ವರ್ಷಗಳ ಅರ್ಜಿಗಳು ಶೇ.50 ರಷ್ಟು ಬಾಕಿ ಉಳಿದಿವೆ. ಎಸ್‌ಬಿಐ ಬ್ಯಾಂಕಿಗೆ ಹೆಚ್ಚಿನ ಅರ್ಜಿ ಬಾಕಿ ಇದ್ದು, ಕೂಡಲೇ ವಿಲೆಯಾಗಬೇಕು. ಕಳೆದ 6 ತಿಂಗಳುಗಟ್ಟಲೇ ಅರ್ಜಿಗಳನ್ನು ಇಟ್ಟುಕೊಂಡರೆ ಹೇಗೆ. ಅರ್ಹತೆ ಇದ್ದವರಿಗೆ ಸಾಲ ವಿತರಿಸಬೇಕು. ದಾಖಲಾತಿ ಸರಿಯಾಗಿ ಇರದಿದ್ದರೆ ರಿಜೆಕ್ಟ್ ಮಾಡಲು ತಿಳಿಸಿದರು.

ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು 15 ದಿನಗಳ ಒಳಗಾಗಿ ಎಲ್ಲ ಅರ್ಜಿಗಳ ವಿಲೆ ಮಾಡಬೇಕು. ಬಾಕಿ ಉಳಿದಲ್ಲಿ ಸಂಬಂಧಿಸಿದ ಬ್ಯಾಂಕ್‌ಗಳ ಮೇಲಧಿಕಾರಿಗಳಿಗೆ ಶಿಸ್ತು ಕ್ರಮಕ್ಕಾಗಿ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಅಗ್ರಣೀಯ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ ಮಾತನಾಡಿ, ಆದ್ಯತಾ ವಲಯದಲ್ಲಿ ಕೃಷಿಗೆ ಸಂಬಂಧಿಸಿದಂತೆ ಶೇ. 100.56 ಸಾಧನೆ ಮಾಡಲಾಗಿದೆ. ಬೆಳೆ ಸಾಲದಲ್ಲಿ ಶೇ. 98.27, ಇತರೆ ಕೃಷಿ ಸಾಲದಲ್ಲಿ ಶೇ. 107.67, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಶೇ. 91.24 ರಷ್ಟು, ಇತರೆ ಆದ್ಯತಾ ವಲಯಕ್ಕೆ ಶೇ. 64.16 ಸಾಲ ವಿತರಣೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

Advertisement

ಭಾರತೀಯ ರಿಸರ್ವ್‌ ಬ್ಯಾಂಕಿನ ಅಗ್ರಣೀಯ ಜಿಲ್ಲಾ ಅಧಿಕಾರಿ ಜಯಶ್ರೀ ಮಾತನಾಡಿ, ಆರ್ಥಿಕ ಸಾಕ್ಷರತೆಯನ್ನು ಉತ್ತೇಜಿಸುವ ಉದ್ದೇಶದಿಂದ 2024ರ ಆರ್ಥಿಕ ಸಪ್ತಾಹವನ್ನು ಜೂನ್‌ 26 ರಿಂದ ಮಾರ್ಚ 1, 2024ವರೆಗೆ ಸರಿಯಾಗಿ ಪ್ರಾರಂಭಿಸಿ-ಆರ್ಥಿಕವಾಗಿ ಸಾರ್ಟ್‌ ಆಗಿರಿ ಎಂಬ ವಿಷಯದ ಮೇಲೆ ಆಚರಿಸಲಾಗುತ್ತಿದೆ. ಈ ವರ್ಷ ಯುವ ವಯಸ್ಕರನ್ನು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಆರ್ಥಿಕ ಶಿಸ್ತು ರೂಢಿಸಿಕೊಳ್ಳುವ ಪ್ರಯೋಜನಗಳ ಬಗ್ಗೆ ಅರಿವು
ಮೂಡಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಸಾಲ ಯೋಜನೆಯ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ನಬಾರ್ಡನ ಡಿಡಿಎಂ ಮಂಜುನಾಥ ರೆಡ್ಡಿ, ಕೆನರಾ ಬ್ಯಾಂಕಿನ ರಿಸನಲ್‌ ಮ್ಯಾನೇಜರ್‌ ಶೈಲಜಾ ಕೆ.ಎಂ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ರಿಜಿನಲ್‌ ಮ್ಯಾನೇಜರ್‌ ರಾಜಶೇಖರ, ಜಿಲ್ಲಾ ಪಂಚಾ ಯತಿಯ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next