Advertisement
1948ರ ಜುಲೈ 23ರಂದು ಕುಂಬಳೆಯ ಪೆರ್ಣೆಯಲ್ಲಿ ಮಾಲಿಂಗ ಮುಕಾರಿ-ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ್ ರಾವ್ ಬಾಲ್ಯದಿಂದಲೇ ಯಕ್ಷಗಾನದ ಸೆಳೆತ ಹೊಂದಿದ್ದರು. ಸೂರಂಬೈಲು ಸರಕಾರಿ ಶಾಲೆಯಲ್ಲಿ 4ನೇ ತರಗತಿ ಪೂರೈಸಿ, ಆರ್ಥಿಕವಾಗಿ ಸಂಕಷ್ಟದ ಕಾರಣ ಶಿಕ್ಷಣವನ್ನು ಮೊಟಕುಗೊಳಿಸಿದರು. ಅನಂತರ ಕೈಮಗ್ಗ ನೇಯ್ಗೆಯ ವೃತ್ತಿಯಲ್ಲಿ ತೊಡಗಿಕೊಂಡರು. ಈ ಸಮಯದಲ್ಲೇ ಕುಂಬ್ಳೆ ಚಂದ್ರಶೇಖರ ಹಾಗೂ ಕಮಲಾಕ್ಷ ಅವರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆ ಕಲಿತರು.
Related Articles
Advertisement
ಪುರುಷ, ಸ್ತ್ರೀ ಎರಡೂ ಪಾತ್ರಗಳನ್ನೂ ಏಕರೀತಿಯಲ್ಲಿ ನಿರ್ವಹಿಸುವ ಶ್ರೀಧರ ರಾಯರ ಕಲಾಪ್ರಜ್ಞೆ ಮೆಚ್ಚುವಂತಹುದು. ಈಶ್ವರ, ಶ್ರೀರಾಮ, ಶ್ರೀಕೃಷ್ಣ, ಮನ್ಮಥ, ದೇವವ್ರತ ಮುಂತಾದ ಪುಂಡುವೇಷಗಳು, ಅರ್ಜುನ, ಭೀಷ್ಮ, ಬ್ರಹ್ಮ, ಕೌರವ, ಕರ್ಣ ಮುಂತಾದ ಕೋಲು ಕಿರೀಟಗಳಲ್ಲಿ ವಿಜೃಂಭಿಸಿದಂತೆ, ದಾಕ್ಷಾಯಣಿ, ಸೀತಾ, ದಮಯಂತಿ, ಶ್ರೀದೇವಿ, ಮಾಯಾಪೂತನಿ, ಮಾಯಾ ಶೂರ್ಪನಖಿ, ಚಿತ್ರಾಂಗದೆ ಮುಂತಾದ ಸ್ತ್ರೀ ಪಾತ್ರಗಳಲ್ಲೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕೆಲವೊಂದು ಪ್ರಸಂಗಗಳಲ್ಲಿ ಬರುವ ಕುರುಡಿ, ಮೂಕಿ, ಹುಚ್ಚಿ ಮುಂತಾದ ಸ್ತ್ರೀ ಪಾತ್ರಗಳನ್ನು ಶ್ರೀಧರ ರಾಯರಷ್ಟು ಸಮರ್ಥವಾಗಿ ನಿರ್ವಹಿಸುವವರೇ ಇರಲಿಲ್ಲ. ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿಯ ಪಾತ್ರವಂತೂ ಸದಾ ನೆನಪಿನಲ್ಲೇ ಉಳಿಯುವಂಥದ್ದು. ಈ ಪಾತ್ರವನ್ನು ಧರ್ಮಸ್ಥಳ ಖಾವಂದರೇ ತುಂಬಾ ಮೆಚ್ಚಿಕೊಂಡಿದ್ದರು ಎಂದು ಶ್ರೀಧರ ರಾಯರು ಹಿಂದೊಮ್ಮೆ ನನ್ನಲ್ಲಿ ಹೇಳಿದ್ದರು. ಬಡಗುತಿಟ್ಟಿನ ನಾಟ್ಯವನ್ನೂ ಕಲಿಯಬೇಕೆಂಬ ಆಸಕ್ತಿಯಿಂದ ಶಿವರಾಮ ಕಾರಂತರ ಯಕ್ಷಗಾನ ಕೇಂದ್ರ ಸೇರಿ ನಾಟ್ಯಕ್ಕೆ ಮೆರುಗು ನೀಡುವಲ್ಲಿ ಸಫಲರಾಗಿದ್ದಾರೆ.
ಸಾಮಗ, ಅಳಿಕೆ, ಬೋಳಾರ, ಹೊಸಹಿತ್ಲು, ಬೆಟ್ಟಂಪಾಡಿ, ಅಡ್ಕಸ್ಥಳ ಮುಂತಾದವರೊಂದಿಗೆ ಜತೆ ವೇಷ ಮಾಡಿ ಯಶಸ್ವಿಯೂ ಆಗಿದ್ದರು. ಆಂಗ್ಲ ಭಾಷೆಯ ಯಕ್ಷಗಾನದಲ್ಲೂ ಶ್ರೀಧರ ರಾಯರು ದಾಕ್ಷಾಯಣಿಯ ಪಾತ್ರ ಮಾಡಿದ್ದರು. ನೂರಾರು ಕಡೆಗಳಲ್ಲಿ ಸಂಮಾನ ಪಡೆದಿದ್ದು ದುಬಾೖ, ಬಹ್ರೈನ್ ಸಹಿತ ಇನ್ನಿತರ ವಿದೇಶಗಳಲ್ಲಿ ಪಾತ್ರ ನಿರ್ವಹಿಸಿ ಸಮ್ಮಾನಿಸಲ್ಪಟ್ಟಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದ ಅವರು ದಿಲ್ಲಿಯಲ್ಲಿ ರಾಷ್ಟ್ರಪತಿಗಳಿಂದ ಪ್ರತಿಷ್ಠಿತ ಗೌರವವನ್ನೂ ಸ್ವೀಕರಿಸಿದ್ದರು.
ಸ್ವಲ್ಪ ಮಟ್ಟಿನ ಹಾಸ್ಯ ಪ್ರವೃತ್ತಿಯ ಶ್ರೀಧರರಾಯರು ಸಹಕಲಾವಿದರೊಂದಿಗೆ ಮಿತ್ರರಂತೆಯೇ ವ್ಯವಹರಿಸಿ ಅಜಾತಶತ್ರು ಎನಿಸಿ, ಕಿರಿಯ ಕಲಾವಿದರಿಗೆ ಹೇಳಿಕೊಡುವ ಔದಾರ್ಯ ಹೊಂದಿದ್ದರು. ಧರ್ಮಸ್ಥಳ ಮೇಳದಲ್ಲಿ 4 ದಶಕಗಳಿಗೂ ಹೆಚ್ಚಿನ ಕಾಲ ಸೇವೆಗೈದಿರುವ ಶ್ರೀಧರ ರಾಯರು ಯಕ್ಷರಂಗದಿಂದ ನಿವೃತ್ತರಾಗುವ ತನಕವೂ ಧರ್ಮಸ್ಥಳ ಮೇಳದಲ್ಲೇ ತಿರುಗಾಟ ನಡೆಸಿದ್ದರು. 76 ವರ್ಷದ ಶ್ರೀಧರ ರಾಯರು ಹಿಂದಿನ ಹಾಗೂ ಇಂದಿನ ಕಲಾವಿದರ ನಡುವಿನ ಕೊಂಡಿಯಂತಿದ್ದರು. ಅವರ ನಿಧನವು ನಿಜಾರ್ಥದಲ್ಲಿ ಯಕ್ಷರಂಗಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ.
-ಎಂ. ಶಾಂತಾರಾಮ ಕುಡ್ವ, ಮೂಡುಬಿದಿರೆ