Advertisement

ಐಕ್ಯಯಾನ ಭಾವಗಾನ; ಶತಮಾನದ ಕವಿಗೆ ಗಾಯನ ನಮನ

12:17 PM Mar 07, 2018 | |

ಸುಬ್ರಹ್ಮಣ್ಯ (ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆ): ನಾಲ್ಕು ದಿಕ್ಕುಗಳಿಂದ ಹಸಿರು ಹೊದಿಕೆ ಹಾಸಿರುವ, ನಾಗರಾಧನೆಯ ಪ್ರಮುಖ ನೆಲೆಬೀಡು ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೆ ದಿನ ಬಹುಸಂಸ್ಕೃತಿಯ ಏಕತೆ ಸಾರುವ ಭಾವಗಾನ, ಶತಮಾನದ ಕವಿಗಳಿಗೆ ಗಾಯನ, ಅಕ್ಷರದ ನುಡಿ ನಮನ, ನೆಲದ ಬಗೆಗಿನ ಗೋಷ್ಠಿ, ಕವಿಗೋಷ್ಠಿಗಳು ಬಿತ್ತರಗೊಂಡವು.

Advertisement

ಕೊಳಂಬೆ ಪುಟ್ಟಣ್ಣ ಗೌಡ ವೇದಿಕೆಯಲ್ಲಿ ಹಿರಿಯ-ಕಿರಿಯ ಬರೆಹಗಾರರು ಅಕ್ಷರ ಜಾತ್ರೆಯಲ್ಲಿ ಗಾಯನ, ಮಾತು, ಅಭಿನಯದ ಮೂಲಕ ಸಾಹಿತ್ಯದ ಬಹುಬಗೆಯ ಆಯಾಮಗಳನ್ನು ತೆರೆದಿಟ್ಟರು. ಕುಲ್ಕುಂದ ಶಿವರಾವ್‌ (ನಿರಂಜನ) ವೇದಿಕೆಯಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರು ಇವುಗಳಿಗೆ ಸಾಕ್ಷಿಯಾದರು. ಎರಡನೆ ದಿನ 3,000ಕ್ಕೂ ಮಿಕ್ಕಿ ಅಕ್ಷರ ಪ್ರೇಮಿಗಳು ಸಮ್ಮೇಳನಕ್ಕೆ ಆಗಮಿಸಿದ್ದರು.

ಆರು ವಿಚಾರಗೋಷ್ಠಿಗಳು
ಮಂಗಳವಾರ ವಿವಿಧ ಶೀರ್ಷಿಕೆಗಳಲ್ಲಿ ಆರು ವಿಚಾರ ಗೋಷ್ಠಿಗಳು ನಡೆದವು. ಸಾಹಿತ್ಯ-ಸಂಸ್ಕೃತಿ ವಿಕಾಸ, ತೌಳವ ಚಿಂತನೆ, ಕನ್ನಡ ಶಾಲೆಗಳ ಅಭಿವೃದ್ಧಿ ಪರಿಕಲ್ಪನೆ, ನಿರಂಜನ ಬದುಕು-ಬರಹ, ಸಂವಾದ-ಸಾಹಿತ್ಯದ ಪ್ರೇರಣೆಗಳು, ಸುಬ್ರಹ್ಮಣ್ಯದ ಇತಿಹಾಸ-ಸಾಂಸ್ಕೃತಿಕ ಸಂಪದ, ಕನ್ನಡ ಅನುಷ್ಠಾನ ವಿಚಾರದಲ್ಲಿ ವಿಷಯ ತಜ್ಞರು ಅಭಿಪ್ರಾಯ ಮಂಡಿಸಿದರು. ಭಾವಗಾನ, ಶತಮಾನದ ಕವಿ ಗೋಪಾಲಕೃಷ್ಣ ಅಡಿಗರಿಗೆ ಕವಿ ನಮನ, ಶತಮಾನದ ಕವಿ ಮಂದಾರ ಕೇಶವ ಭಟ್‌ ಅವರಿಗೆ ಕವಿ ನಮನ, ಯುವ ಕವಿಗೋಷ್ಠಿ ಹಾಗೂ ಸಾಧಕರಿಗೆ ಸಮ್ಮಾನ, ಸಾಂಸ್ಕೃತಿಕ ರಂಗದಲ್ಲಿ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತ್ತು.

ಬಿಡುವಿಲ್ಲದ ಕಾರ್ಯಕ್ರಮ
ಉದಯರಾಗದಿಂದ ತೊಡಗಿ ಸಂಜೆಯ ಸಾಂಸ್ಕತಿಕ ಕಾರ್ಯಕ್ರಮದ ತನಕ 125ಕ್ಕೂ ಅಧಿಕ ಕಲಾವಿದರು, ಸಾಹಿತಿಗಳು ನಾನಾ ರೂಪದಲ್ಲಿ ವೇದಿಕೆಯೇರಿ ಸಾಹಿತ್ಯದ ಕಂಪು ಪಸರಿಸಿದರು. ಮೂರು ದಿನವೂ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಒಂದೆಡೆ ವಿಚಾರ ಮಂಡನೆ ನಡೆದರೆ, ಇನ್ನೊಂದೆಡೆ ಬಗೆ-ಬಗೆಯ ಗೀತೆಗಳು ಮನ ತಣಿಸಿತ್ತು.

ಅತಿಥಿ ದೇವೋಭವ
ಮಂಗಳವಾರ ಅಕ್ಷರ ಪ್ರೇಮಿಗಳ ಉದರ ತಣಿಸಲು ನಾನಾ ಬಗೆಯ ಮೆನುಗಳನ್ನು ಸಿದ್ಧಪಡಿಸಲಾಗಿತ್ತು. ಬೆಳಗ್ಗೆ 350 ಮಂದಿಗೆ ಇಡ್ಲಿ, ವಡೆ, ಕಾಫಿ, ಚಹಾ, ಬೆಳಗ್ಗೆ 10ಕ್ಕೆ ಚಹಾ, ಬಿಸ್ಕತ್‌, ಮಧ್ಯಾಹ್ನ 1,500ಕ್ಕೂ ಮಿಕ್ಕಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅನ್ನ, ಸಾಂಬಾರು, ತೋವೆ, ಸಾರು, ಗುಜ್ಜೆ ಪಲ್ಯ, ಕಡ್ಲೆಬೇಳೆ ಪಾಯಸ, ಪೈನಾಪಲ್‌ ಶಿರಾ, ಮಜ್ಜಿಗೆ, ಸಂಜೆ 400 ಮಂದಿಗೆ ಚಹಾ, ಕಾಫಿ, ತಿಂಡಿ, ರಾತ್ರಿ ಸಾವಿರಕ್ಕೂ ಅಧಿಕ ಮಂದಿಗೆ ಅನ್ನ, ಸಾರು, ಸಾಂಬಾರು, ಪಾಯಸ, ಪಲ್ಯ, ಚಟ್ನಿ, ಮಜ್ಜಿಗೆ ಸವಿಯನ್ನು ಉಣಬಡಿಸಲಾಯಿತು.

Advertisement

ವಿದ್ಯಾರ್ಥಿಗಳೇ ಅಧಿಕ
ಸಮ್ಮೇಳನದಲ್ಲಿ ಎರಡನೇ ದಿನವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿದ್ದರು. ಸಭಾಂಗಣದಲ್ಲಿ ಶೇ. 75ಕ್ಕಿಂತ ಅಧಿಕ ಭಾಗ ವಿದ್ಯಾರ್ಥಿಗಳಿಂದಲೇ ತುಂಬಿತ್ತು. ಅಕ್ಷರ ಜಾತ್ರೆಯಲ್ಲಿ ಕಾಣಿಸಿಕೊಳ್ಳುವ ಮಧ್ಯ ವಯಸ್ಕರು, ಹಿರಿಯರ ಸಂಖ್ಯೆ ಕಡಿಮೆ ಇತ್ತು. ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವೀಕ್ಷಿಸಿದರು. ಆರ್ಟ್‌ ಗ್ಯಾಲರಿ, ಪುರಾತನ ಪರಿಕರ ಹಾಗೂ ಕತ್ತಿ, ಗುರಾಣಿ ತಯಾರಿ ಕೇಂದ್ರದಲ್ಲಿ ಅಕ್ಷರ ಪ್ರೇಮಿಗಳು ಕುತೂಹಲದಿಂದ ನೆರೆದು, ವಿಚಾರಿಸುತ್ತಿದ್ದರು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next