Advertisement

Student; ಹಾಸ್ಟೆಲ್‌ಗ‌ಳಲ್ಲಿ ಗುಣಮಟ್ಟದ ಆಹಾರಕ್ಕೆ ಜಿಲ್ಲಾ ಹಂತದಲ್ಲಿ ಟೆಂಡರ್‌: ತಂಗಡಗಿ

11:12 PM Jan 23, 2024 | Team Udayavani |

ಮಣಿಪಾಲ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್‌ಗ‌ಳಲ್ಲಿದ್ದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿ.ಪಂ. ಸಭಾಂಗಣದಲ್ಲಿ ಉಭಯ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನ ಸಭೆ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ ಎಂಬ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿದ್ದೇವೆ. ಹಾಗೆಯೇ ಓಲ್ಡ್‌ ಸ್ಟಾಕ್‌ಗಳನ್ನು ಹಾಸ್ಟೆಲ್‌ಗೆ ಪೂರೈಕೆ ಮಾಡಬಾರದು ಎಂಬ ನಿರ್ದೇಶನವನ್ನು ಆಹಾರ ಇಲಾಖೆಯ ಅಧಿಕಾರಿಗಳಿಗೂ ನೀಡಿದ್ದೇವೆ ಎಂದರು.

ಹೊಸದಾಗಿ 150 ಹಾಸ್ಟೆಲ್‌ಗ‌ಳನ್ನು ರಾಜ್ಯದಲ್ಲಿ ತೆರೆಯಲಿದ್ದೇವೆ. ತಲಾ 75 ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್‌ ಇರಲಿದೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಕರಾವಳಿ ಜಿಲ್ಲೆಗಳಲ್ಲಿ ಸದ್ಯಕ್ಕೆ ಹಾಸ್ಟೆಲ್‌ ಕೊರತೆ ದೊಡ್ಡಮಟ್ಟಿಗೆ ಇಲ್ಲ. ಈಗ ಇರುವ ಹಾಸ್ಟೆಲ್‌ಗ‌ಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಭರ್ತಿಗೆ ನಗರ ಪ್ರದೇಶದಲ್ಲಿ ಸಂಯೋಜನೆ ವ್ಯವಸ್ಥೆ (ಗ್ರಾಮೀಣ ಭಾಗದಲ್ಲಿ ಖಾಲಿ ಇದ್ದಲ್ಲಿ ನಗರ ಪ್ರದೇಶದಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು) ರೂಪಿಸಲು ತಿಳಿಸಲಾಗಿದೆ ಎಂದರು.

6 ಸಾವಿರ ಬೋರ್‌ವೆಲ್‌
ಗಂಗಾ ಕಲ್ಯಾಣ ಯೋಜನೆಯಡಿ ಹಿಂದಿನ 19 ಸಾವಿರ ಬೋರ್‌ವೆಲ್‌ಗ‌ಳಲ್ಲಿ 6000 ಬೋರ್‌ವೆಲ್‌ಗ‌ಳನ್ನು ಈಗಾಗಲೇ ಪೂರ್ಣಗೊಳಿಸಿದ್ದೇವೆ. ಬೋರ್‌ವೆಲ್‌ಗ‌ಳಿಗೆ ನೀಡುತ್ತಿದ್ದ ಅನುದಾನವನ್ನು 1.20 ಲಕ್ಷದಿಂದ 3.25ಲಕ್ಷ ರೂ.ಗಳಿಗೆ ಏರಿಸಿದ್ದೇವೆ ಎಂದು ಹೇಳಿದರು.

ನೋಟಿಸ್‌ ಜಾರಿಗೆ ನಿರ್ದೇಶನ
ಸಮುದಾಯ ಭವನ ಮಂಜೂರಾತಿ ಪಡೆದ ಸಂಸ್ಥೆಗಳು ನಿರ್ದಿಷ್ಟ ದಾಖಲೆಗಳನ್ನು ಒದಗಿಸಲೇ ಬೇಕು. ಸಮುದಾಯ ಭವನಕ್ಕೆ ಮೊದಲ ಕಂತಿನ ಹಣ ಬಿಡುಗಡೆಯಾದರೂ ದಾಖಲಾತಿ ನೀಡದೇ ಇರುವ ಎಲ್ಲ ಸಂಸ್ಥೆಗಳಿಗೂ ತತ್‌ಕ್ಷಣವೇ ನೋಟಿಸ್‌ ಜಾರಿ ಮಾಡಬೇಕು. ದಾಖಲಾತಿ ಪರಿಶೀಲಿಸದೇ ಅನುದಾನ ನೀಡುವುದನ್ನು ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

Advertisement

ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಿರುವ ಅನುದಾನದ ಸದ್ಬಳಕೆಯಾಗಿದೆಯೇ ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿಗಳು 20 ಲಕ್ಷ ರೂ.ಗಳನ್ನು ರಸ್ತೆ ಕಾಮಗಾರಿ ಹಾಗೂ 35 ಲಕ್ಷ ರೂ.ಗಳನ್ನು ತಳಪಾಯ ನಿರ್ಮಾಣಕ್ಕೆ ನೀಡಿದ್ದೇವೆ. ಇದರ ವಿನಿಯೋಗವಾಗಿದೆ. ಬೇರೆ ಯಾವುದೇ ಅನುದಾನವನ್ನು ಇಲಾಖೆಯಿಂದ ನೀಡಿಲ್ಲ ಎಂದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌., ಜಿಪಂ ಸಿಇಒ ಪ್ರತೀಕ್‌ ಬಯಾಲ್‌, ಜಿ.ಪಂ. ಉಪ ಕಾರ್ಯದರ್ಶಿ ರಾಜು ಮೊಗವೀರ, ದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು, ಹಿಂದುಳಿದ ವರ್ಗದ ಜಂಟಿ ನಿರ್ದೇಶಕ ಸಿ.ಕೆ.ಜಗದೀಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಮರೇಗೌಡ ಪಾಟೀಲ್‌, ಕರ್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ| ಪ್ರಕಾಶ್‌ ಆರ್‌. ಪಾಗೋಜಿ, ಸಚಿವರ ಆಪ್ತ ಕಾರ್ಯದರ್ಶಿ ಮಧುಸೂದನ್‌ ಶೆಟ್ಟಿ ಉಪಸ್ಥಿತರಿದ್ದರು.

ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಸರಕಾರ ಬದ್ಧವಾಗಿದೆ. ನಾಮಫ‌ಲಕಗಳು ಶೇ. 60ರಷ್ಟು ಕನ್ನಡ ಹಾಗೂ ಶೇ.40ರಷ್ಟು ಅನ್ಯಭಾಷೆಯಲ್ಲಿ ಇರಬಹುದು. ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು.
-ಶಿವರಾಜ ತಂಗಡಗಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next