ಕಲಬುರಗಿ: ಜಿಲ್ಲೆಯಾದ್ಯಂತ ಯುವಕ ಮತ್ತು ಯುವತಿಯರಲ್ಲಿ ಮತದಾನದ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಕಲಬುರಗಿ ಆಟ-ನೋಟ 18-18 ಜಿಲ್ಲಾ ಮಟ್ಟದ ಪಂದ್ಯಗಳು ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದವು.
ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಯುವಕ ಮತ್ತು ಯುವತಿಯರಿಗೆ ಆಟಗಳ ಮೂಲಕ ಮತದಾನ ಜಾಗೃತಿ ಮೂಡಿಸಲು ಕಲಬುರಗಿ ಆಟ-ನೋಟ 18-18 ಕಬಡ್ಡಿ ಮತ್ತು ಕುಂಟೆಬಿಲ್ಲೆ ಆಟಗಳನ್ನು ಪ್ರಾರಂಭಿಸಲಾಗಿತ್ತು.
ಈ ಪಂದ್ಯಗಳು ಗ್ರಾಮ ಮಟ್ಟದಿಂದ ಪ್ರಾರಂಭವಾಗಿ ಹೋಬಳಿಮಟ್ಟ, ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆದವು.
ಜಿಲ್ಲೆಯ ಎಲ್ಲ ಮತದಾರರಲ್ಲಿ ಕಡ್ಡಾಯ ಮತದಾನ ಹಾಗೂ ನೈತಿಕ ಮತದಾನದ ಜಾಗೃತಿ ಮೂಡಿಸಲು ಮತದಾನದ ದಿನದವರೆಗೆ ಅಂದರೆ ಮೇ 12ರ ವರೆಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ದಿನಕ್ಕೊಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಮತದಾನಕ್ಕೆ ಕೇವಲ ಆರು ದಿನಗಳು ಬಾಕಿ ಇದ್ದು, ಸ್ವೀಪ್ ಸಮಿತಿ ಎಲ್ಲ ಸದಸ್ಯರು ಉತ್ಸಾಹದಿಂದ ಗ್ರಾಮೀಣ ಮತ್ತು ನಗರ ಪ್ರದೆಶಗಳಲ್ಲಿ ಮತದಾನದ ಜಾಗೃತಿ ಮೂಡಿಸುವಲ್ಲಿ ತೊಡಗಿದ್ದಾರೆ.
ಜಿಲ್ಲಾ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ. ನಾಡಿಗೇರ, ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೊಡ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.