Advertisement

ಜಿಲ್ಲಾ ಗೃಹರಕ್ಷಕ ದಳ ಅತ್ಯಂತ ಕ್ರಿಯಾಶೀಲ: ಜಿಲ್ಲಾಧಿಕಾರಿ

11:03 AM Dec 09, 2017 | |

ಮೇರಿಹಿಲ್‌: ಜಿಲ್ಲಾ ಗೃಹರಕ್ಷಕ ದಳವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತರ ಜಿಲ್ಲಾ ಘಟಕಗಳಿಗಿಂತ ಭಿನ್ನವಾಗಿದೆ. ಒಖೀ ಚಂಡಮಾರುತ ಸಹಿತ ಇತರ ಅವಘಡಗಳ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳವು ಜಿಲ್ಲಾಡಳಿತದೊಂದಿಗೆ ಹೊಂದಾಣಿಕೆಯಿಂದ ಸೇವೆ ನೀಡಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು. ಅವರು ಶುಕ್ರವಾರ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಜರಗಿದ ಅಖಿಲ ಭಾರತ ಗೃಹರಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿದರು.

Advertisement

ತಾವು ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಅಲ್ಲಿನ ಗೃಹರಕ್ಷಕ ದಳವನ್ನು ಹತ್ತಿರದಿಂದ ಕಂಡಿದ್ದು, ಇಲ್ಲಿನ ಗೃಹರಕ್ಷಕ ದಳದ ಸೇವೆ ತೃಪ್ತಿ ನೀಡಿದೆ. ಗೃಹರಕ್ಷಕ ದಳದಲ್ಲಿ ಸೇವೆ ನೀಡುತ್ತಿರುವ ಹೋಮ್‌ಗಾರ್ಡ್‌ಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.

ಗೃಹರಕ್ಷಕ ದಳ ಮಾಜಿ ಕಮಾಂಡೆಂಟ್‌ ಬಿ.ಕೆ. ಶಿವಪ್ರಸಾದ್‌ ಮಾತನಾಡಿ, ಒಂದು ಅವಘಡ ನಡೆದಾಗ ತತ್‌ಕ್ಷಣ ಅಲ್ಲಿಗೆ ತಲುಪಿ ಸೇವೆ ನೀಡಬೇಕಾಗಿರುವುದರಿಂದ ಗೃಹ ರಕ್ಷಕ ದಳದ ಸೇವೆಗೆ ವಿಶೇಷ ಮೌಲ್ಯವಿದೆ ಎಂದರು.

ಜಿಲ್ಲಾ ಕಮಾಂಡೆಂಟ್‌ ಡಾ| ಮುರಲಿಮೋಹನ್‌ ಚೂಂತಾರು ಅವರು ಜಿಲ್ಲೆಯ ಗೃಹರಕ್ಷಕ ದಳದ ಸೇವೆಯನ್ನು ವಿವರಿಸಿದರು. ಈ ಬಾರಿ 250 ಮಂದಿ ಗೃಹರಕ್ಷಕ ಸಿಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಷಾ, ಸೆಕೆಂಡ್‌ ಕಮಾಂಡೆಂಟ್‌ ಮಹಮ್ಮದ್‌ ಇಸ್ಮಾಯಿಲ್‌ ವೇದಿಕೆಯಲ್ಲಿದ್ದರು. ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರಪತಿ ಪದಕ ಪಡೆದ ಉಪ ಕಮಾಂಡೆಂಟ್‌ ರಮೇಶ್‌, ಗೃಹರಕ್ಷಕ ದಳ ಘಟಕದ ಸುರೇಶ್‌ ಶೇಟ್‌, ಅಬ್ದುಲ್‌ ರವೂಫ್‌ ಅವರನ್ನು ಸಮ್ಮಾನಿಸಲಾಯಿತು. ಕಚೇರಿ ಅಧಿಕಾರಿ ಉಷಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಉಪ ಕಮಾಂಡೆಂಟ್‌ ರಮೇಶ್‌ ಸ್ವಾಗತಿಸಿದರು. ಜಯಾನಂದ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next