Advertisement

ರಾಜ್ಯ ಸರ್ಕಾರ ವಜಾಗೊಳಿಸಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ

10:00 PM Nov 04, 2019 | Team Udayavani |

ಚಾಮರಾಜನಗರ: ರಾಜ್ಯದಲ್ಲಿದ್ದ ಮೈತ್ರಿ ಸರ್ಕಾರ ಪತನಗೊಳ್ಳಲು ಕೇಂದ್ರ ಸಚಿವ ಅಮಿತಾ ಶಾ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣರಾಗಿರುವುದು ಆಡಿಯೋ ಮೂಲಕ ಬಹಿರಂಗಗೊಂಡಿದೆ. ಕೂಡಲೇ ಕೇಂದ್ರ ಗೃಹ ಸಚಿವರು ರಾಜೀನಾಮೆ ನೀಡಬೇಕು. ರಾಜ್ಯಪಾಲರು ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಸೋಮವಾರ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುಂಭಾಗ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌ ನೇತೃತ್ವದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರ‌ಪ್ಪ ವಿರುದ್ಧ ಘೋಷಣೆಗಳನ್ನು ಕೂಗಿ, ಕೆಲ ಕಾಲ ರಸ್ತೆ ತಡೆ ನಡೆಸಿ, ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ವಾಮ ಮಾರ್ಗದ ಮೈತ್ರಿ ಸರ್ಕಾರ ಪತನ: ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಳ್ಳಲು ಬಿಜೆಪಿ ನೇರ ಕಾರಣವಾಗಿತ್ತು. ನಮ್ಮ ಪಕ್ಷದ 15 ಶಾಸಕರನ್ನು ಬಲವಂತದಿಂದ ರಾಜೀನಾಮೆ ಕೊಡಿಸಿ, ಮುಂಬೈ ಹೋಟೆಲ್‌ನಲ್ಲಿ ತಿಂಗಳುಗಟ್ಟಲೆ ವಾಸ್ತವ್ಯ ಹೂಡುವಂತೆ ಮಾಡಿದ್ದರು. ವಾಮ ಮಾರ್ಗದ ಮೂಲಕ ಸರ್ಕಾರವನ್ನು ಬೀಳಿಸಿ, ಬಿಜೆಪಿ ಸರ್ಕಾರ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತಾ ಶಾ ಹಾಗೂ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣರಾಗಿದ್ದಾರೆ ಎಂಬುದು ಆಡಿಯೋ ಮೂಲಕ ಜಗಜ್ಜಾಹೀರಾಗಿದೆ. ಸ್ವತಃ ಯಡಿಯೂರಪ್ಪ ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿರುವ ಆಡಿಯೋ ಮೂಲಕ ಬಹಿರಂಗವಾಗಿದೆ ಎಂದು ಆರೋಪಿಸಿದರು.

ಅಮಿತ್‌ ಶಾ ರಾಜೀನಾಮೆ ನೀಡಲಿ: ಜನತಂತ್ರ ಸರ್ಕಾರವನ್ನು ಬೀಳಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್‌ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅನೈತಿಕ ಮಾರ್ಗದಲ್ಲಿ ಅಲ್ಪಮತವಿದ್ದರೂ ಸರ್ಕಾರ ನಡೆಸಲು ಮುಂದಾಗಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ರಾಷ್ಟ್ರಪತಿಯವರು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಕ್ಕಾಗಿ ಆಡಳಿತ ದುರ್ಬಳಕೆ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಮಹದೇವ್‌ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕೇಂದ್ರ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಕ್ಷಮೆ ಯಾಚಿಸಿಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಆರ್‌. ಮಹದೇವ್‌, ಚಿಕ್ಕಮಹದೇವ್‌, ಮುಖಂಡರಾದ ಕಾಗಲವಾಡಿ ಶಿವಸ್ವಾಮಿ, ಜಿಪಂ ಸದಸ್ಯ ಕೆರೆಹಳ್ಳಿ ನವೀನ್‌, ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ಕೆಪಿಸಿಸಿ ಸದಸ್ಯ ಸೈಯದ್‌ ರಫಿ,

Advertisement

ಬ್ಲಾಕ್‌ ಅಧ್ಯಕ್ಷರಾದ ಗುರುಸ್ವಾಮಿ, ಮಹಮದ್‌, ಅರುಣ್‌, ತಾಪಂ ಸದಸ್ಯರಾದ ಪಿ. ಕುಮಾರ ನಾಯಕ, ಮಹದೇವ ಶೆಟ್ಟಿ, ಉಮೇಶ್‌, ಅಯುಬ್‌ಖಾನ್‌, ಚೇತನ ದೊರೆರಾಜ್‌. ಮಸಗಾಪುರ ರಾಜು, ಹೆಬ್ಬಸೂರು ರಂಗಸ್ವಾಮಿ, ನಾಗವಳ್ಳಿ ನಾಗಯ್ಯ, ವೀರಭದ್ರ ಸ್ವಾಮಿ, ಪ್ರಸಾದ್‌, ಮುತ್ತಿಗೆ ದೊರೆ, ನಾಗರಾಜಮೂರ್ತಿ, ಮಹದೇವ ನಾಯಕ, ಕಾಮಿಲ್‌ ಖಾನ್‌, ಅಹಮದ್‌ ಇಮ್ರಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next