Advertisement
2013ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕ್ಷೇತ್ರದ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್ .ವಿ.ದೇಶಪಾಂಡೆ ಮಹಿಳಾ ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು, ಬರೋಬ್ಬರಿ 10 ವರ್ಷದಿಂದ ಕಾಮಗಾರಿ ನನೆಗುದಿಗೆ ಬಿದ್ದು ಸದ್ಯ ಉದ್ಘಾಟನೆ ಹಂತಕ್ಕೆ ಬಂದು ತಲುಪಿದೆ.
Related Articles
Advertisement
ಜಿಲ್ಲಾಡಳಿತಕ್ಕೆ ಚಾಟಿ ಬೀಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ: ಹಲವು ವರ್ಷಗಳ ಕಾಲ ಕುಂಟುತ್ತಾ ಸಾಗಿದ್ದ ಸರ್ಕಾರಿ ಮಹಿಳಾ ಪದವಿ ಕಾಲೇಜು ಕಟ್ಟಡ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ, ತಾತ್ಕಾಲಿಕ ಕಟ್ಟಡದಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಗಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ವೀರಪ್ಪ, ಖುದ್ದು ಕಾಲೇಜಿಗೆ ದಿಢೀರ್ ಭೇಟಿ ನೀಡಿ ಕಾಲೇಜು ಕಟ್ಟಡ ಕಾಮಗಾರಿ ಅನುದಾನ ಇಲ್ಲದೇ ಕುಂಟುತ್ತಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದನ್ನು ನೋಡಿ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದರು. ನ್ಯಾಯಮೂರ್ತಿಗಳ ಭೇಟಿ ಬಳಿಕ ಕಾಲೇಜು ಕಟ್ಟಡ ಕಾಮಗಾರಿ ಚುರುಕುಗೊಂಡು ಇದೀಗ ಉದ್ಘಾಟನೆ ಹಂತಕ್ಕೆ ಬಂದು ನಿಂತಿದೆ. ಇಷ್ಟೊತ್ತಿಗಾಗಲೇ ಉದ್ಘಾಟನೆಯಾಗಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಆಗಬೇಕಿದ್ದ ಕಾಲೇಜು ಕಟ್ಟಡ ಅದೇಕೋ ಉದ್ಘಾಟನೆ ವಿಚಾರದಲ್ಲಿ ವಿಳಂಬ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಉನ್ನತ ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ಇತ್ತಕಡೆ ಗಮನಹರಿಸಿ ಉದ್ಘಾಟನೆಗೆ ಮುಹೂರ್ತ ನಿಗದಿಪಡಿಸಬೇಕಿದೆ.
ವಿಜ್ಞಾನ ವಿಭಾಗ ಇಲ್ಲದೇ ಖಾಸಗಿ ಕಾಲೇಜುಗಳಿಗೆ ಸುಗ್ಗಿ!: ವಿಪರ್ಯಾಸದ ಸಂಗತಿ ಎಂದರೆ ಕಟ್ಟಡದ ಕೊರತೆ ಪರಿಣಾಮ ಮಹಿಳಾ ಪದವಿ ಕಾಲೇಜು ಜಿಲ್ಲಾ ಕೇಂದ್ರಕ್ಕೆ ಮಂಜೂರಾತಿಯಾಗಿ 10 ವರ್ಷ ದಾಟಿದೆ. ಆದರೆ ಇಲ್ಲಿವರೆಗೂ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಆರಂಭವಾಗಿಲ್ಲ. ಪ್ರಯೋಗಾಲಯ, ಕಟ್ಟಡಗಳ ಕೊರತೆಯಿಂದ ಕೇವಲ ಬಿ.ಎ., ಬಿ.ಕಾಂ ಪದವಿಗೆ ಪ್ರವೇಶ ನೀಡಲಾಗುತ್ತಿದೆ. ಇದರಿಂದ ಬಿಎಸ್ಸಿ ಓದುಬೇಕು ಎಂಬ ಹಂಬಲ ಇರುವ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಕಟ್ಟಿ ಪ್ರವೇಶ ಪಡೆಯುವಂತಾಗಿದೆ. ಮಹಿಳಾ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ವ್ಯಾಸಂಗಕ್ಕೆ ಅವಕಾಶ ಇಲ್ಲದೇ ಇರುವುದು ಜಿಲ್ಲಾ ಕೇಂದ್ರದಲ್ಲಿ ತಲೆಎತ್ತಿರುವ ಖಾಸಗಿ ಪದವಿ ಕಾಲೇಜುಗಳಿಗೆ ಸುಗ್ಗಿಯಾಗಿದೆ. ಕೆಲ ಬಡ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಕಲಾ ಹಾಗೂ ವಾಣಿಜ್ಯ ಪದವಿಗೆ ಪ್ರವೇಶ ಪಡೆಯುತ್ತಿದ್ದಾರೆ.
ಕಾಲೇಜು ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸದ್ಯದಲೇ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ದಿನಾಂಕ ನಿಗದಿಪಡಿಸಿ ಹೊಸ ಕಟ್ಟಡ ಉದ್ಘಾಟನೆ ನೆರವೇರಿಸಲಾಗುವುದು. ಕಾಲೇಜಿನಲ್ಲಿ 530 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರಯೋಗಾಲಯ ಮತ್ತಿತರ ಮೂಲ ಸೌಕರ್ಯದ ಕೊರತೆಯಿಂದ ಬಿ.ಎಸ್ಸಿ ಕೋರ್ಸ್ ಇಲ್ಲ. – ಚಂದ್ರಯ್ಯ, ಪ್ರಾಂಶುಪಾಲರು, ಮಹಿಳಾ ಪದವಿ ಕಾಲೇಜು ಚಿಕ್ಕಬಳ್ಳಾಪುರ
– ಕಾಗತಿ ನಾಗರಾಜಪ್ಪ