ಗೌರಿಬಿದನೂರು: ವೈದ್ಯಕೀಯ ಸೇವೆ ಮೂಲಕ ತಾಲೂಕಿನಲ್ಲಿ ಮನೆ ಮಾತಾಗಿರುವ ಮಾನಸ ಸಮೂಹಗಳ ಸಂಸ್ಥೆಗಳ ಅಧ್ಯಕ್ಷ ಡಾ.ಎಚ್.ಎಸ್.ಶಶಿಧರ್ ಅಧಿಕೃತವಾಗಿ ಬಿಜೆಪಿ ಸೇರ್ಪಯಾಗುವ ಮೂಲಕ ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ ಎಂದು ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎನ್.ಎಂ. ರವಿನಾರಾಯಣ ರೆಡ್ಡಿ ಹೇಳಿದರು.
ತಾಲೂಕಿನ ಐತಿಹಾಸಿಕ ಕ್ಷೇತ್ರ ವಿದುರಾ ಶ್ವತ್ಥದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ ಬಳಿಕ ಮಾನಸ ಆಸ್ಪತ್ರೆಯ ಡಾ.ಎಚ್.ಎಸ್.ಶಶಿಧರ್ ಮತ್ತು ಅವರ ಅಪಾರ ಸಂಖ್ಯೆಯ ಬೆಂಬಲಿಗರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡ ಬಳಿಕ ಮಾತನಾಡಿದರು.
ಆನೆ ಬಲ: ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಲೂರು, ಯಲಹಂಕ, ವಿಜಯಪುರ ಸೇರಿ ವಿವಿಧೆಡೆ ಮಾನಸ ಆಸ್ಪತ್ರೆ ಶಾಖೆಗಳನ್ನು ಪ್ರಾರಂಭಿಸಿ 30 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಶಶಿಧರ್ ಅಂದಿನ ಲೋಕಸಭೆ ಸದಸ್ಯ ವಿ.ಕೃಷ್ಣರಾವ್ ಮತ್ತು ಡಾ. ಎಚ್.ನರಸಿಂಹಯ್ಯ ಅವರ ಆಶೀರ್ವಾದ ದೊಂದಿಗೆ ಮಾನಸ ಆಸ್ಪತ್ರೆ ಆರಂಭಿಸಿ, ಮೆಡಿಕಲ್ ಕೌನ್ಸಿಲ್‌ನಿಂದ ಡಾ.ಬಿ.ಸಿ.ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂತಹ ಸೇವಾ ಮನೋಭಾವವುಳ್ಳ ಡಾ.ಶಶಿಧರ್ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದರಿಂದ ಆನೆ ಬಲ ಬಂದಂತಾಗಿದೆ ಎಂದರು.
ಮೋದಿ ಆದರ್ಶ ಪಾಲನೆ: ಡಾ.ಎಚ್.ಎಸ್. ಶಶಿಧರ್ ಮಾತನಾಡಿ, ಪ್ರಧಾನಿ ಮೋದಿ ಅವರು ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಅವರ ಆದರ್ಶ ಹಾಗೂ ಅವರ ಜನಪರ ಕಾಳಜಿ ಮೆಚ್ಚಿ ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಸೇರ್ಪಡೆ ಯಾಗುತ್ತಿದ್ದೇನೆ. ತಾಲೂಕಿನಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರು, ಮುಖಂಡರ ಪರಿಶ್ರಮದಿಂದಾಗಿ ಸದೃಢವಾಗಿ ಸಂಘಟನೆ ಬೆಳೆದಿದೆ. ಅದಕ್ಕೆ ಮತ್ತಷ್ಟು ಪುಷ್ಟಿ ತುಂಬುವ ಕೆಲಸ ಮಾಡುತ್ತೇನೆ. ಈ ಬಾರಿ ತಾಲೂಕಿನಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸೇರ್ಪಡೆ: ಪಿಕಾರ್ಡ್ ಬ್ಯಾಂಕ್ ನಿರ್ದೇಶಕಿ ಜ್ಞಾನೇಶ್ವರಿ ಅರುಣ್ ಕುಮಾರ್, ದೇವರಾಜ್, ನಂದೀಶ್, ಪ್ರಕಾಶ್, ಗಂಗಾ ರೆಡ್ಡಿ, ಆದಿನಾರಾಯಣಪ್ಪ, ಶಿವಣ್ಣ, ಬಿ.ಎಸ್. ಅಶ್ವತ್ಥನಾರಾಯಣ, ಗಂಗಾಧರ, ಪಿಳ್ಳಿ ಅಂಜಿ, ಸಂಜಯ್ ಕುಮಾರ್,ನಾಗೇಶ್, ಕಿರಣ್, ಹೇಮಂತ್, ಮೇಸ್ತ್ರಿ ಕೃಷ್ಣಪ್ಪ, ಬಾಲಕೃಷ್ಣ ಕೃಷ್ಣಾರೆಡ್ಡಿ, ನರಸಿಂಹಮೂರ್ತಿ, ರಾಮಾಂಜಿ, ಕೃಷ್ಣಾರೆಡ್ಡಿ, ಲಕ್ಷ್ಮೀನರಸಪ್ಪ ಮತ್ತಿತರರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ವಿಭಾ ಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಮುರಳೀಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ ಕೃಷ್ಣಮೂರ್ತಿ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ರಂಗನಾಥ್, ರಾಜ್ಯ ಸಮಿತಿ ಸದಸ್ಯರಾದ ಶ್ರೀರಾಮರೆಡ್ಡಿ, ಜೆ.ವಿ.ಹನುಮೇಗೌಡ, ತಾಲೂಕು ಅಧ್ಯಕ್ಷ ರಮೇಶ್ ರಾವ್ ಶೆಟ್ಟಿ, ನಗರ ಘಟಕದ ಅಧ್ಯಕ್ಷ ಎ.ಮೋಹನ್, ಮುಖಂಡರಾದ ಜಯಣ್ಣ, ಹರೀಶ್, ಕೋಡಿರ್ಲಪ್ಪ, ವೇಣು ಇತರರಿದ್ದರು.
ಡಾ.ಎಚ್.ಎಸ್.ಶಶಿಧರ್ ಬಿಜೆಪಿ ಸೇರ್ಪಡೆ ಸಮಾರಂಭಕ್ಕೆ ತಾಲೂಕಿನ, ವಿವಿಧ ಗ್ರಾಮಗಳಿಂದ ಸ್ವಯಂಪ್ರೇರಿತರಾಗಿ ನಾಗರಿಕರು ಆಗಮಿಸಿ ಶುಭ ಕೋರಿದರು. 30 ವರ್ಷಗಳಿಂದ ತಾಲೂಕಿ ನಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡು ಬಂದಿದ್ದೇನೆ. ಜತೆಗೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಏನಾದರೂ ಮಾಡ ಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. 2023ರ ವಿಧಾನಸಭಾ ಚುನಾವಣೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಿಜೆಪಿ ಸಚಿವರು, ಮುಖಂಡರ ಆಶೀರ್ವಾದದಿಂದ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ.
–ಡಾ.ಎಚ್.ಎಸ್.ಶಶಿಧರ್, ಖ್ಯಾತ ವೈದ್ಯರು