Advertisement

ಕೆರೆಗಳ ಒತ್ತುವರಿ ತೆರವಿಗೆ ಜಿಲ್ಲಾಡಳಿತದಿಂದ ಕಾರ್ಯಯೋಜನೆ

04:03 PM Sep 13, 2020 | Suhan S |

ಚಾಮರಾಜನಗರ: ಜಿಲ್ಲೆಗಳ ಕೆರೆಗಳ ಅಭಿವೃದ್ಧಿಗಾಗಿ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಇದಕ್ಕಾಗಿ ಕಾಲಬದ್ಧ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುಂದಾಗಿದೆ.

Advertisement

ಕೆರೆಗಳ ಒತ್ತುವರಿ ತೆರವುಗೊಳಿಸುವ ಉದ್ದೇಶಕ್ಕಾಗಿಯೇ ಜಿಲ್ಲಾ ಹಾಗೂ ತಾಲೂಕು ಸಮಿತಿ ಕಾರ್ಯಪಡೆಯನ್ನು ರಚಿಸಲಾಗಿದೆ. ಜಿಲ್ಲಾ ಸಮಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಭೂ ದಾಖಲೆಗಳ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ತಾಲೂಕು ಸಮಿತಿಯಲ್ಲಿ ತಹಶೀಲ್ದಾರ್‌ ಅಧ್ಯಕ್ಷರಾಗಿದ್ದು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಸಮಿತಿಯು ಪೂರ್ವಭಾವಿ ಸಭೆ ನಡೆಸಿ ಕೆರೆಗಳ ವಿವರ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿದೆ. ಏಕ ಕಾಲದಲ್ಲಿ ನಗರ ಹಾಗೂ ಗ್ರಾಮೀಣ ಕೆರೆಗಳ ಸರ್ವೆ ಹಾಗೂ ಒತ್ತುವರಿ ತೆರವು ಕಾರ್ಯ ನಡೆಯಬೇಕಿರುವ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಪಂಚಾಯತ್‌ ರಾಜ್‌ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕ್ರಿಯಾ ಯೋಜನೆ: ಕೆರೆಗಳ ಒತ್ತುವರಿಗಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಿಲ್ಲಾಧಿಕಾರಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಒತ್ತುವರಿ ತೆರವು ಕಾರ್ಯಚರಣೆಗಾಗಿ ಪ್ರತಿ ತಾಲೂಕು ತಹಶೀಲ್ದಾರ್‌,ಭೂಮಾಪಕರಿಗೆ ಗುರಿ ನಿಗದಿಪಡಿಸಿದ್ದಾರೆ. ಈ ಪ್ರಕಾರ ಕಂದಾಯ ಇಲಾಖೆ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧ ಪಟ್ಟ ಕೆರೆಗಳ ಒಡೆತನದ ಇಲಾಖಾಸಿಬ್ಬಂದಿ ಸಮ್ಮುಖದಲ್ಲಿ ತಿಂಗಳ ಮೊದಲನೇ ಶನಿವಾರ ಒತ್ತುವರಿ ಕೆರೆಗಳನ್ನು ಅಳತೆ ಮಾಡಿ ಮೂರನೇ ಶನಿವಾರದಂದು ಒತ್ತುವರಿ ತೆರವುಗೊಳಿಸಿದ ಕೆರೆಗಳನ್ನು ಹಸ್ತಾಂತರಿಸಲಾಗುತ್ತಿದೆ.

267 ಕೆರೆಗಳ ಅಳತೆ: ಜಿಲ್ಲೆಯಲ್ಲಿ ಈಗಾಗಲೇ 267 ಕೆರೆಗಳ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಿ ಕಂದಾಯ ಇಲಾಖೆಯಿಂದ ಗಡಿ ನಿಗದಿ ಮಾಡಿ ಸಂಬಂಧಿಸಿದ ಒಡೆತನದ ಇಲಾಖೆಗೆ ಹಸ್ತಾಂತರಿಸಲಾಗಿದೆ. ಉಳಿದ ಕೆರೆಗಳ ಅಳತೆ, ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ‌ಯಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ರೈತ ಮುಖಂಡರು, ಪ್ರತಿನಿಧಿಗಳು ಕೆರೆಗಳ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರಂತೆ ಸರ್ಕಾರಿ ಸ್ವತ್ತು ಸಂರಕ್ಷಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ. ಕೆರೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಿರ್ದಾಕ್ಷಿಣ್ಯವಾಗಿಕಾನೂನು ಕ್ರಮ ಜರುಗಿಸಲಾಗುತ್ತದೆ. ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸಿ ಪೋಷಣೆಗಾಗಿ ಸಂಬಂಧಪಟ್ಟ ಒಡೆತನ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ. ಒತ್ತುವರಿ ತೆರವುಗೊಳಿಸಿದ ಬಳಿಕ ಕೆರೆ ಮಾಲೀಕತ್ವ ಹೊಂದಿರುವ ಇಲಾಖೆಗಳು, ಫ‌ಲಕಗಳನ್ನು ಅಳವಡಿಸಲು ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗಿಡ ಮರಗಳನ್ನು ನೆಡುವ ಮೂಲಕ ಉತ್ತಮವಾಗಿ ನಿರ್ವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next