ಧಾರವಾಡ: ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ವೃದ್ಧೆಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಕ್ಯಾನ್ಸರ್ ಪೀಡಿತ ಮೊಮ್ಮಗನಿಗೆ ಬೆಂಗಳೂರಿನಿಂದ ಔಷಧಿ ತರಿಸಿಕೊಟ್ಟಿದ್ದಾರೆ.
ನಗರದ ಚರಂತಿಮಠ ಗಾರ್ಡನ್‌ನ ಜೈ ಜಿನೇಂದ್ರ ಕಾಲೋನಿಯ ನಿವಾಸಿ ಶಕುಂತಲಾ ಎಂಬ ವಯೋವೃದ್ಧ ಮಹಿಳೆಯೊಬ್ಬರು 4-5 ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಕ್ಯಾನ್ಸರ್ ಪೀಡಿತನಾಗಿರುವ ತನ್ನ 27 ವರ್ಷದ ಮೊಮ್ಮಗ ಸುನೀಲ ಅವಾರಿಗೆ ಔಷಧಿ ತೆಗೆದುಕೊಂಡು ಬರಲು ವಾಹನ ಪಾಸ್ ಪಡೆಯಲು ಬಂದಾಗ, ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಸಮಸ್ಯೆ ನಿವೇದಿಸಿಕೊಂಡಿದ್ದರು. ಆಗ ಜಿಲ್ಲಾಧಿಕಾರಿಗಳು ಪಾಸ್ ವಿತರಣೆ ವಿಭಾಗದ ಸಿಬ್ಬಂದಿ ಕರೆದು ಅಜ್ಜಿಗೆ ಸಹಾಯ ಮಾಡಲು ಸೂಚಿಸಿದ್ದರು.
ಕ್ಯಾನ್ಸರ್ ಪೀಡಿತ ಮೊಮ್ಮಗನಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 30 ಸಾವಿರ ರೂ. ಮೌಲ್ಯದ ಔಷಧ , ಮಾತ್ರೆಗಳು ಬೇಕಾಗುತ್ತವೆ. ಕಿದ್ವಾಯಿಯಲ್ಲಿ ಈ ಮಾತ್ರೆಗಳು ಅಲ್ಲಿನ ವೈದ್ಯರಾದ ಡಾ| ಶ್ಯಾಮಸುಂದರ ಅವರ ಸಹಾಯದಿಂದ ತಮಗೆ ಉಚಿತವಾಗಿ ಸಿಗುತ್ತಿವೆ. ಪ್ರತಿ ತಿಂಗಳು ಆ ವೈದ್ಯರೇ ಬಸ್ ಚಾರ್ಜ್ ಸಹ ನೀಡಿ ಉಪಕರಿಸುತ್ತಿರುವುದನ್ನು ಅಜ್ಜಿ ವಿವರಿಸಿದ್ದಾಳೆ. ಈಗ ತನಗೆ ಬಾಡಿಗೆ ಕಾರು ತೆಗೆದುಕೊಂಡು ಬೆಂಗಳೂರಿಗೆ ಹೋಗಿ ಔಷಧ ತರುವ ಸಾಮರ್ಥ್ಯವೂ ಇಲ್ಲ ಎಂಬುದನ್ನು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗೆ ಹೇಳಿದ್ದಾಳೆ. ಮಾನವೀಯತೆಯಿಂದ ಈ ಪ್ರಕರಣದಲ್ಲಿ ಸಹಾಯ ಮಾಡಲು ನಿರ್ಧರಿಸಿದ ಸಿಬ್ಬಂದಿ, ಅನಿವಾರ್ಯ ಕಾರಣದಿಂದ ಬೆಂಗಳೂರಿಗೆ ಹೋಗಲು ಪಾಸ್ ಕೇಳಲು ಬಂದ ಜಿಲ್ಲಾ ಖಜಾನೆ ಸಿಬ್ಬಂದಿ ಮೂಲಕ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಔಷಧ ತರಿಸಿಕೊಟ್ಟಿದ್ದಾರೆ.
ಉಚಿತ ಪರೀಕ್ಷೆ: ಔಷಧ ಬಂದ ನಂತರ ಅದನ್ನು ನೇರವಾಗಿ ರೋಗಿಗೆ ಕೊಡುವ ಮೊದಲು ರಕ್ತ ಪರೀಕ್ಷೆಯೊಂದು ಕಡ್ಡಾಯವಾಗಿತ್ತು. ಆಗ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಡಾ| ಉಮೇಶ ಹಳ್ಳಿಕೇರಿ ಅವರನ್ನು ಸಂಪರ್ಕಿಸಿದಾಗ ಅವರೂ ಕೂಡ ಉಚಿತವಾಗಿ ಪರೀಕ್ಷೆ ಮಾಡಿ ವರದಿ ನೀಡಿದ ನಂತರ, ಆ ವರದಿಯನ್ನು ಬೆಂಗಳೂರಿನ ತಜ್ಞ ವೈದ್ಯರಾದ ಡಾ| ಶಾಮಸುಂದರ್ ಅವರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ, ಅವರ ಸಲಹೆ ಪಡೆದ ನಂತರ ರೋಗಿಗೆ ಔಷಧಿ ತೆಗೆದುಕೊಳ್ಳಲು ಸಾಧ್ಯವಾಗಿದೆ.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಅವರ ಕಚೇರಿಯ ಪಾಸ್ ವಿತರಣಾ ವಿಭಾಗದ ನೋಡಲ್ ಅಧಿಕಾರಿ ದೀಪಕ ಮಡಿವಾಳರ, ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ಕೆ.ಎ. ಜಂಗೂರ, ಧರಣೇಂದ್ರ ಕಸಮಾಳಗಿ, ಇಸ್ಮಾಯಿಲ್ ಮಳಲಿ, ಜಿ.ಬಿ. ಪಾಟೀಲ, ಅರವಿಂದ, ಸುನೀಲ, ಅಶೋಕ ನಿಂಗೋಳಿ ಮತ್ತಿತರರು ಮುತುವರ್ಜಿ ವಹಿಸಿ ಮೊಮ್ಮಗನ ಚಿಕಿತ್ಸೆಗೆ ನೆರವಾಗಿದ್ದನ್ನು ಶಕುಂತಲಾ ಸ್ವತಃ ಜಿಲ್ಲಾ ಧಿಕಾರಿಯನ್ನು ಭೇಟಿಯಾಗಿ ಮನದುಂಬಿ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದ್ದರು.