Advertisement
ಕಂಟ್ರೋಲ್ ರೂಂ ಸ್ಥಾಪನೆ, ನೋಡಲ್ ಅಧಿಕಾರಿ ನೇಮಕ: ಮಳೆ ಕೊರತೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಬರ ನಿರ್ವಹಿಸುವ ಸಲುವಾಗಿ 2 ತಿಂಗಳ ಹಿಂದೆಯೇ ಕಂಟ್ರೋಲ್ ರೂಂ ರಚಿಸಿ, ದೂರವಾಣಿ ಸಂಖ್ಯೆ ಪ್ರಕಟಿಸಲಾಗಿದೆ. ಪ್ರತಿ ಹೋಬಳಿಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
Related Articles
Advertisement
ಶುದ್ಧ ನೀರಿನ ಘಟಕ: ಜಿಲ್ಲೆಗೆ 1110 ಶುದ್ಧ ನೀರಿನ ಘಟಕಗಳು ಮಂಜೂರಾಗಿದ್ದು, ಈ ಪೈಕಿ 1059 ಪೂರ್ಣಗೊಂಡಿದೆ. ಹೀಗೆ ಪೂರ್ಣಗೊಂಡಿರುವ ಶುದ್ಧ ನೀರಿನ ಘಟಕಗಳ ಪೈಕಿ 1039 ಘಟಕಗಳು ಜನರಿಗೆ ಕುಡಿಯುವ ನೀರನ್ನು ನೀಡುತ್ತಿದೆ. ಸುಮಾರು 38 ಘಟಕಗಳು ನಿರ್ಮಾಣ ಹಂತದಲ್ಲಿವೆ. 13 ಶುದ್ಧ ನೀರಿನ ಘಟಕಗಳು ವಿವಿಧ ಸಮಸ್ಯೆಗಳಿಂದಾಗಿ ಇನ್ನೂ ಆರಂಭವೇ ಆಗಿಲ್ಲ. ಈ ಪೈಕಿ ಬಹುತೇಕ ಜಾಗದ ಸಮಸ್ಯೆ ಪ್ರಮುಖವಾಗಿದೆ. ಕೆಲವೆಡೆ ನೀರಿನ ಅಲಭ್ಯತೆಯೂ ಇದೆ. ಸುಮಾರು 20 ಶುದ್ಧ ನೀರಿನ ಘಟಕಗಳಲ್ಲಿ ನೀರಿನ ಅಲಭ್ಯತೆ, ಕೆಲವಾರು ತಾಂತ್ರಿಕ ಕಾರಣಗಳಿಂದಾಗಿ ದುರಸ್ತಿ ನಡೆಯುತ್ತಿದೆ.
ಕುಡಿವ ನೀರಿಗೆ ಆದ್ಯತೆ: ಬರ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಜಲ ಮೂಲಗಳಾದ ಕೆರೆ ಕುಂಟೆಗಳು ಬತ್ತಿವೆ. ಕೊಳವೆ ಬಾವಿಗಳಲ್ಲಿಯೂ ನೀರು ಖಾಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತು ಕೊಳವೆ ಬಾವಿ ಕೊರೆಸಲು, ಪಂಪು ಮೋಟಾರು ಅಳವಡಿಸಲು, ಪೈಪ್‌ಲೈನ್ ಹಾಕಿಸಲು ಹಾಗೂ ಮೋಟಾರು ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ. ಸದ್ಯಕ್ಕೆ ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 23 ಗ್ರಾಮಗಳಲ್ಲಿ ನೀರಿಗೆ ಅಭಾವ ಕಂಡು ಬಂದಿದೆ.
ಖಾಸಗಿ ಕೊಳವೆ ಬಾವಿಗಳಿಂದ ಹಾಗೂ ಟ್ಯಾಂಕರ್ ಮೂಲಕ ನೀರು ಖರೀದಿಸಿ ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 180 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ನಗರ ಪಟ್ಟಣ ಪ್ರದೇಶಗಳಲ್ಲಿ ಜಿಲ್ಲೆಯಲ್ಲಿ 166 ವಾರ್ಡುಗಳಿದ್ದು, 48 ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ಪ್ರತಿ ನಿತ್ಯ 76 ಟ್ರಿಪ್‌ಗ್ಳಲ್ಲಿ ನೀರು ಪೂರೈಕೆಯಾಗುತ್ತಿದೆ.
ಇದಕ್ಕಾಗಿ ಸ್ಥಳೀಯ ಸಂಸ್ಥೆಗಳಿಂದಲೇ 14 ಟ್ಯಾಂಕರ್ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾರ್ಡುಗಳಲ್ಲಿ ನೀರಿನ ಸಮಸ್ಯೆ ಎದುರಾದರೆ ಅದನ್ನು ಎದುರಿಸಲು ಸಿದ್ಧವಿರುವಂತೆ ಸೂಚಿಸಲಾಗಿದೆ. ಹೀಗಾಗಿ ಜಿಪಂ ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತಾಂಗವನ್ನು ಸಜ್ಜುಗೊಳಿಸಲಾಗುತ್ತಿದೆ.
ಅನುದಾನದ ಲಭ್ಯತೆ: ಕುಡಿಯುವ ನೀರು -ಬರ ನಿರ್ವಹಣೆಗೆ ಈಗಾಗಲೇ ಜಿಲ್ಲಾಧಿಕಾರಿಗಳ ಸಿಆರ್‌ಎಫ್ ಖಾತೆಯಲ್ಲಿ 6 ಕೋಟಿ ರೂ., ಲಭ್ಯವಿದೆ. ಇದೀಗ ಸರ್ಕಾರ ಪ್ರತಿ ತಾಲೂಕಿಗೆ ಒಂದು ಕೋಟಿಯಂತೆ 5 ಕೋಟಿ ರೂ. ಬಿಡುಗಡೆ ಮಾಡಿದ್ದು ಒಟ್ಟು 11 ಕೋಟಿ ರೂ.ಅನುದಾನವಿದೆ. ಇದರೊಂದಿಗೆ ಟಾಸ್ಕ್ ಫೋರ್ಸ್ ನಿಧಿಗೆ ಸರ್ಕಾರದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 1 ಕೋಟಿ ರೂ., ಬಿಡುಗಡೆಯಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ 14 ನೇ ಹಣಕಾಸು ಯೋಜನೆ ಅನುದಾನ ಬಳಸಿಕೊಳ್ಳಲಾಗುತ್ತಿದೆ. ನಗರ-ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ನಗರೋತ್ಥಾನ ನಿಧಿ ಹಣವನ್ನು ಕುಡಿವ ನೀರು ಪೂರೈಕೆಗೆ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಎಸ್‌ಎಫ್ಸಿ ಅನುದಾನ ಮತ್ತು ಸ್ಥಳೀಯ ಸಂಸ್ಥೆಗಳ ನಿಧಿ ಬಳಸಿಕೊಳ್ಳಲಾಗುತ್ತಿದೆ. ಸದ್ಯಕ್ಕೆ ಇವೆಲ್ಲಾ ಅನುದಾನವನ್ನು ಗಮನಿಸಿದಾಗ ಕೋಲಾರ ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲವೆನ್ನಲಾಗುತ್ತಿದೆ.
ಗುಳೇ ತಡೆಯಲು ಕ್ರಮ: ಜಿಲ್ಲೆಯಿಂದ ಯಾವುದೇ ವ್ಯಕ್ತಿ ಕೆಲಸ ಇಲ್ಲ, ಕೂಲಿ ಇಲ್ಲ ಎಂದು ಗುಳೇ ಹೋಗದಂತೆ ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳಿಗೆ ಬದಲಾಗಿ 150 ದಿನಗಳ ಕೆಲಸ ನೀಡಲು ಸೂಚಿಸಲಾಗಿದೆ. ಯಾವುದೇ ವ್ಯಕ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ಫಾರಂ ಸಂಖ್ಯೆ 5 ರಲ್ಲಿ ಬೇಡಿಕೆಯಿಡುವ ಎಲ್ಲರಿಗೂ ಉದ್ಯೋಗ ಕಲ್ಪಿಸಲು ಸೂಚಿಸಲಾಗಿದೆ. ಯಾವುದೇ ವ್ಯಕ್ತಿ ಕೆಲಸ ಸಿಗದೆ ಕೂಲಿ ಇಲ್ಲದೆ ಕೋಲಾರ ಜಿಲ್ಲೆಯಿಂದ ಗುಳೇ ಹೋದರೆ ಅದಕ್ಕೆ ಆಯಾ ವ್ಯಾಪ್ತಿಯ ಗ್ರಾಪಂ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಲಾಗಿದೆ.
ಮೇವು ನಿರ್ವಹಣೆ: ಜಿಲ್ಲೆಯಲ್ಲಿ ಹಾಲು ಉತ್ಪಾದಿಸುವ ಹೈಬ್ರಿಡ್ ರಾಸುಗಳನ್ನು ರೈತರು ಹೆಚ್ಚಾಗಿ ಸಾಕುತ್ತಿದ್ದಾರೆ. ಹೀಗಾಗಿ ಗೋಶಾಲೆಗಳಿಗೆ ಗೋವುಗಳನ್ನು ಬಿಡುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ಗೋ ಶಾಲೆ ತೆರೆದಿಲ್ಲ. ಹೀಗಾಗಿ ಆಯಾ ರೈತರೇ ಮೇವು ಬೆಳೆದುಕೊಳ್ಳಲು ಅನುಕೂಲವಾಗುವಂತೆ 83,076 ಮೇವಿನ ಕಿಟ್ ನೀಡಲಾಗಿದೆ. ಕೋಚಿಮುಲ್ 26,440 ಮೇವಿನ ಕಿಟ್ ನೀಡುವುದರ ಜೊತೆಗೆ ಮೇವು ಬೆಳೆಯಲು ಪ್ರತಿ ಎಕರೆಗೆ 2 ಸಾವಿರ ರೂ., ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 8370 ಹೆಕ್ಟೇರ್‌ನಲ್ಲಿ ಮೇವು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆಯುವ ಮೇವನ್ನು ರೈತರು ತಮ್ಮ ಬಳಕೆಗೆ ಇಟ್ಟುಕೊಂಡು ಉಳಿದ ಮೇವನ್ನು ಆಯಾ ತಾಲೂಕುಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಮೇವು ಬ್ಯಾಂಕಿಗೆ ಮಾರಾಟ ಮಾಡಿ ದಾಸ್ತಾನು ಮಾಡಬೇಕಾಗಿದೆ. ಜೊತೆಗೆ ತೋಟಗಾರಿಕೆ ಇಲಾಖೆ ಸಸ್ಯ ಕ್ಷೇತ್ರಗಳ 20 ಎಕರೆಯಲ್ಲಿ ಮೇವು ಬೆಳೆಯಲಾಗಿದೆ. ಇದರಿಂದ 300 ಟನ್‌ಗಳಷ್ಟು ಮೇವು ಉತ್ಪಾದನೆಯಾಗಲಿದೆಯೆಂದು ನಿರೀಕ್ಷಿಸಲಾಗುತ್ತಿದೆ.
ಕೆ.ಸಿ.ವ್ಯಾಲಿ ಯೋಜನೆ ವ್ಯಾಪ್ತಿಯಲ್ಲಿ ಒಳಪಡುವ ಕೆರೆಗಳ 300 ಎಕರೆ ಎಚ್ಚುಕಟ್ಟು ಪ್ರದೇಶದಲ್ಲಿ ಮಿನಿ ಕಿಟ್‌ಗಳಿಂದ ಹಸಿರು ಮೇವು ಉತ್ಪಾದನೆಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಹೆಚ್ಚುವರಿ ಇನ್ನೂ 50 ಸಾವಿರ ಮೇವಿನ ಕಿಟ್ ಸರಬರಾಜು ಮಾಡುವಂತೆ ಪಶುಪಾಲನಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸದ್ಯಕ್ಕೆ ಮುಂದಿನ 13 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನಿದೆ.
* ಕೆ.ಎಸ್.ಗಣೇಶ್