ರಾಮನಗರ: ಜಲ ಮಾಲಿನ್ಯ ಮತ್ತು ನಿಯಂತ್ರಣ ಕಾಯ್ದೆ 1974 ನದಿ ಮೂಲ ಮಾಲಿನ್ಯವಾಗದಂತೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಕಲ್ಯಾಣಿ, ಪ್ರತ್ಯೇಕ ಹೊಂಡ ವ್ಯವಸ್ಥೆ ಮಾಡಲಾಗಿದೆ. ಟ್ರ್ಯಾಕ್ಟರ್‌ಗಳಲ್ಲಿ ತಾತ್ಕಾಲಿಕ ವಿಸರ್ಜನೆ ವ್ಯವಸ್ಥೆ ಮಾಡಿದ್ದು, ಅವುಗಳಲ್ಲಿ ಮನೆ-ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಸ್ಥಳೀಯ ಸಂಸ್ಥೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬಹುದು. ನ್ಯಾಯಾಲಯದ ನಿರ್ದೇಶನ, ಇಲಾಖೆಗಳು ಹಾಗೂ ಸಮಿತಿಯು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ಕಾರ್ಯಕ್ರಮ ಆಯೋ ಜಕರಿಂದ ಮುಚ್ಚಳಿಕೆ ಪಡೆಯು ವುದು ಕಡ್ಡಾಯವಾಗಿದೆ ಎಂದು ಜಿಲ್ಲಾಢಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳದ ಅಗತ್ಯವಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಅರ್ಜಿದಾರರು ಸಿ.ಸಿ. ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಷರತ್ತನ್ನು ವಿಧೀಸಿ ಪರವಾನಗಿ ನೀಡಲು ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಪರಿಸರ ಸ್ನೇಹಿ ಮಣ್ಣಿನ ಹಾಗೂ ನೈಸರ್ಗಿಕ ಬಣ್ಣದ ಗಣೇಶ ಮೂರ್ತಿಗಳನ್ನು ಮಾತ್ರ ಬಳಸುವಂತೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಅನುಸರಿಸುವಂತೆ ಹಾಗೂ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿರುತ್ತದೆ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಬಗ್ಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದ ಪರವಾನಗಿ ನೀಡಲು ವಿವಿಧ ಇಲಾಖೆಗಳ (ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ, ಸಹಯೋಗದೊಂದಿಗೆ) ಏಕ ಗವಾಕ್ಷಿ ಅಡಿಯಲ್ಲಿ ಅನುಮತಿ ನೀಡುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಪರವಾನಗಿ ನೀಡುವಾಗ ಎಲ್ಲಾ ಇಲಾಖೆಗಳ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಕೋಮುಸೌಹಾರ್ದ ಸಭೆ ನಡೆಸಿ ಕ್ರಮ: ಪೊಲೀಸ್ ಇಲಾಖೆಯ ಸಹಯೋಗ ದೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಪಟ್ಟಣದ ಪ್ರಮುಖರೊಂದಿಗೆ, ಸಂಘ ಸಂಸ್ಥೆಗಳೊಂದಿಗೆ (ನಾಗರೀಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ, ಇತ್ಯಾದಿ) ಕೋಮುಸೌಹಾರ್ದ ಸಭೆಯನ್ನು ನಡೆಸಿ ಕ್ರಮ ವಹಿಸಲು ಸೂಚಿಸಲಾಗಿದೆ. ವಿಶೇಷವಾಗಿ ಹೈಟೆನ್ಷನ್ ತಂತಿ ಹಾದುಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ನೀಡದಿರುವುದು. ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆ ಮತ್ತು ಬೀದಿಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವಂತೆ ಪೆಂಡಾಲ್ ನಿರ್ಮಿಸದಂತೆ ಕ್ರಮವಹಿಸುವುದು ಎಂದು ತಿಳಿಸಲಾಗಿದೆ.
ಮೇಲ್ಕಂಡ ಎಲ್ಲಾ ಅಂಶಗಳ ಪಾಲನೆ ಹಾಗೂ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿಕೊಂಡು, ಏಕಗವಾಕ್ಷಿ ಸಮಿತಿಯ ಪರವಾನಗಿ ಇಲ್ಲದೇ ಗಣೇಶ ಮೂರ್ತಿಯನ್ನು ಸ್ಥಾಪಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿಲಾಗಿದೆ.