ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಿಂದ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿದೆ. ಪ್ರವಾಹ ನಿಯಂತ್ರಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ನದಿ ತೀರದ ಜನ ಧೈರ್ಯದಿಂದ ಇರಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಗುರುವಾರ ನಿಪ್ಪಾಣಿ ತಾಲೂಕಿನ ಹುನ್ನರಗಿ, ಜತ್ರಾಟ, ಭೀವಶಿ, ಯಡೂರ ಮುಂತಾದ ನದಿ ತೀರದ ಗ್ರಾಮಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಜೊತೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ದೂಧಗಂಗಾ ನದಿಗೆ ನೀರಿನ ಪ್ರಮಾಣ ಹೆಚ್ಚಿದ್ದರಿಂದ ನಿಪ್ಪಾಣಿ ತಾಲೂಕಿನ ಜತ್ರಾಟ, ಭೀವಶಿ ಹಾಗೂ ಹುನ್ನರಗಿ ಗ್ರಾಮಗಳಲ್ಲಿ ತುರ್ತಾಗಿ ಗಂಜಿ ಕೇಂದ್ರಗಳನ್ನು ತೆರೆಯಲು ಸೂಚನೆ ನೀಡಿದ್ದು, ಹಿಂದಿನ ಪ್ರವಾಹದಲ್ಲಿ ಗುರ್ತಿಸಿರುವ ಜಾಗಗಳನ್ನು ಹೊರತು ಪಡಿಸಿ ಸುರಕ್ಷಿತ ಇರುವ ಸ್ಥಳಗಳನ್ನು ಗುರ್ತಿಸಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದರು.
ರಾಜ್ಯಕ್ಕೆ ಮಳೆ ನೀರು ಹರಿದು ಬರುತ್ತಿದ್ದು, ಮಹಾರಾಷ್ಟ್ರದ ಕೋಯ್ನಾ, ರಾಧಾನಗರಿ, ವಾರಣಾ, ಕಾಳಮ್ಮವಾಡಿ ಡ್ಯಾಮ್‌ಗಳಿಂದ ಇನ್ನೂ ನೀರು ಬಿಡುಗಡೆ ಮಾಡಿಲ್ಲ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. 25 ಬೋಟುಗಳನ್ನ ನಿಯೋಜನೆ ಮಾಡಲಾಗಿದ್ದು, ಒಂದು ಎನ್.ಡಿ.ಆರ್.ಎಫ್ ತಂಡ ಕೂಡ ಯಡೂರದಲ್ಲಿ ಇದೆ. ಅಲ್ಲದೆ ಕೃಷ್ಣಾ ನದಿ ತಟದ ಗ್ರಾಮಗಳಿಗೆ ಹೆಚ್ಚಿನ ನೀರು ಬಂದ್ರೆ ಅಲ್ಲಿಯೂ ಸಹ ಗಂಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಯಾರೂ ಕೂಡ ಆತಂಕ ಪಡದೆ ತಮ್ಮ ಸುರಕ್ಷಿತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ದರ್ಶನ ಎಚ್.ವಿ, ಎಸಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ್ ಸುಭಾಸ ಸಂಪಗಾವಿ, ತಾಪಂ ಇಒ ಇತರರಿದ್ದರು.