Advertisement

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

03:53 PM Nov 08, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಕಬ್ಬು ಬೆಳೆಗೆ ಸೂಕ್ತ ಪರಿಹಾರ ಹಾಗೂ ಬಾಕಿ ಕೇಳಿ ಹೋರಾಟ ನಡೆಸುತ್ತಿರುವ ರೈತರ ಸಮಸ್ಯೆ ಆಲಿಸದ ಜಿಲ್ಲಾಡಳಿತ ಕನಿಷ್ಠ ಸೌಜನ್ಯಕ್ಕೂ ರೈತರೊಂದಿಗೆ ಮಾತುಕತೆ ನಡೆಸಿಲ್ಲ. ಬುಧವಾರ ಮಧ್ಯಾಹ್ನದಿಂದ ಹೋರಾಟ ನಡೆಸುತ್ತಿರುವ ರೈತರನ್ನು ಸತಾಯಿಸಿರುವ ಜಿಲ್ಲಾಡಳಿತ ಅನ್ನದಾತ ಬೆವರಿನ ಹನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

Advertisement

ರೈತರನ್ನು ಭೇಟಿಯಾಗದ ಜಿಲ್ಲಾಧಿಕಾರಿ:
ಬುಧವಾರ ಮಧ್ಯಾಹ್ನ ಪ್ರತಿಭಟನೆ ಮೂಲಕ ತಹಶೀಲ್ದಾರ್‌ ಕಚೇರಿಗೆ ಆಗಮಿಸಿದ ರೈತರು, ಜಿಲ್ಲಾಧಿಕಾರಿಗಳು ನಮ್ಮೊಂದಿಗೆ ಚರ್ಚೆಗೆ ಆಗಮಿಸಿ ನಮ್ಮ ಅಳಲು ಆಲಿಸಬೇಕು ಎಂಬ ಬೇಡಿಕೆ ಮುಂದಿಟ್ಟರು. ಆದರೆ, ರೈತರ ಕೂಗನ್ನು ಕೇಳಿಸಿಕೊಳ್ಳದ ಜಿಲ್ಲಾಡಳಿತ ಕೆಳಹಂತದ ಅಧಿಕಾರಿಗಳಿಂದ ರೈತರನ್ನು ಸಂತೈಸಿ ಸಾಗಹಾಕಲು ಮುಂದಾಯಿತು.

ಆದರೆ ಪಟ್ಟುಬಿಡದ ರೈತರು ತಾಲೂಕು ಆಡಳಿತ ಕಚೇರಿಯಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ ಅಹೋರಾತ್ರಿ ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳು ರೈತರೊಂದಿಗೆ ಮುಧೋಳದಲ್ಲಿ ಸಭೆ ನಡೆಸಿದ್ದರೆ ರೈತರು ರಾತ್ರಿ ಧರಣಿಯಿಂದ ಹಿಂದೆ ಸರಿಯುತ್ತಿದ್ದರು.

ತಾನು ನೀಡಿರುವ ಬೆಳೆಗೆ ಸೂಕ್ತ ಬೆಲೆ, ಕಾನೂನು ರೀತಿಯಾಗಿ ನಮಗೆ ಬರಬೇಕಾದ ಬಾಕಿ ಹಣ ಕೇಳಿಕೊಂಡು ತಾಲೂಕು ಆಡಳಿತ
ಭವನದೆದುರು ಚಾತಕ ಪಕ್ಷಿಯಂತೆ ಧರಣಿ ನಡೆಸುತ್ತಿರುವ ರೈತರ ಕೂಗು ಜಿಲ್ಲಾಡಳಿತಕ್ಕೆ ಕೇಳಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿ:
ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ಮಧ್ಯೆ ಜಿಲ್ಲಾಧಿ ಕಾರಿಗಳು ಸಂಪರ್ಕ ಸೇತುವೆ ರೀತಿಯಲ್ಲಿ ಕೆಲಸ ಮಾಡಬೇಕು. ಕಬ್ಬು ಹಂಗಾಮು ಆರಂಭಕ್ಕೆ ದಿನಗಣನೆ ಶುರುವಾದಾಗ ಜಾನ ಮೌನ ತಾಳುತ್ತಿರುವ ಜಿಲ್ಲಾಡಳಿತದ ನಡೆಯಿಂದ ರೈತರು ಕಂಗಾಲಾಗಿದ್ದಾರೆ. ಸೂಕ್ತ ಸಮಯದಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡದಿದ್ದರೆ ಹೋರಾಟಗಾರರು ಬೀದಿಗಿಳಿದು ಆಕ್ರೋಶ ಹೊರಹಾಕುವುದರಲ್ಲಿ ಯಾವುದೇ ಸಂದೇಹವಿಲ್ಲ.

Advertisement

ಮುಧೋಳದ ಹೋರಾಟದ ಇತಿಹಾಸ ಬಲ್ಲವರಿಗೆ ಹೋರಾಟದ ಬಿಸಿಯ ಅನುಭವವಿದ್ದೆ ಇರುತ್ತದೆ. ಮುಂದಿನ ಹೋರಾಟಕ್ಕೆ ಆಸ್ಪದ ನೀಡದೆ ಜಿಲ್ಲಾಡಳಿತ ಕೂಡಲೇ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಸಬೇಕು ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

ಮುಧೋಳಕ್ಕೆ ಬರಲು ಹಿಂದೇಟು: ಸಭೆ ಸಮಾರಂಭಗಳಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ಅಧಿಕಾರಿಗಳು ಬರಬೇಕು.
ಅವರಿದ್ದಲ್ಲಿಗೆ ತೆರಳಿ ಅವರ ಸಮಸ್ಯೆ ಆಲಿಸಬೇಕು ಎಂದೆಲ್ಲ ಭಾಷಣ ಬಿಗಿಯುವ ಮೇಲಧಿ ಕಾರಿಗಳು ತಾವು ಆಡುವ ಮಾತಿಗೂ ಮಾಡುವ ಕೃತಿಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಾರೆ.

ರೈತರು ಕಬ್ಬಿನ ಬೆಳೆಗೆ ಸಂಬಂಧಿಸಿದ ಸಭೆಗಳು ಮುಧೋಳದಲ್ಲಿಯೇ ನಡೆಯಬೇಕು. ಎಂಬ ಬೇಡಿಕೆಯನ್ನು ಸುತಾರಾಂ ಒಪ್ಪದ ಜಿಲ್ಲಾಡಳಿತ ಮುಧೋಳ ನಗರಕ್ಕೆ ಬರಲು ಒಪ್ಪುತ್ತಿಲ್ಲ. ನಿಮ್ಮ ಅಗತ್ಯತೆ ಇದೆ, ಬೇಕಿದ್ದರೆ ನೀವೆ ಇಲ್ಲಿಗೆ ಬನ್ನಿ ಎಂಬ ನಡುವಳಿಕೆ ತೋರ್ಪಡಿಸುತ್ತಿದೆ.

ರಾಜಕೀಯ ಶಕ್ತಿಕೇಂದ್ರವಾಗಿರುವ ಮುಧೋಳ ನಗರಕ್ಕೆ ಸಣ್ಣಪುಟ್ಟ ಕಾರ್ಯಕ್ಕೂ ಓಡೋಡಿ ಬರುವ ಜಿಲ್ಲಾಡಳಿತ, ರೈತರ ಸಮಸ್ಯೆ ಎಂದಾಗ ಮಾತ್ರ ಕಣ್ಣು, ಬಾಯಿ, ಕಿವಿ ಮುಚ್ಚಿಕೊಳ್ಳುತ್ತದೆ. ಕಬ್ಬಿನ ಸಮಸ್ಯೆ ಸ್ಥಳೀಯ ಮಟ್ಟದಲ್ಲಿಯೇ ಚರ್ಚೆಯಾದರೆ ಅದಕ್ಕೊಂದು ಅರ್ಥವಿರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಭೆಗಳನ್ನು ಮುಧೋಳದಲ್ಲಿಯೇ ನಡೆಸಿದರೆ
ಉತ್ತಮ.

ಸುಳಿಯದ ಜನಪ್ರತಿನಿಧಿಗಳು: ನಗರದಲ್ಲಿ ಕಬ್ಬು ಹೋರಾಟ ದಿನೇ ದಿನೇ ಬಿಸಿಯೇರುತ್ತಿದ್ದರೂ ಸ್ಥಳೀಯ ಸಚಿವರು ಹಾಗೂ ಸಕ್ಕರೆ ಸಚಿವರು ರೈತರತ್ತ ಸುಳಿಯುತ್ತಿಲ್ಲ. ಕಳೆದ ಸಭೆಯಲ್ಲಿ ಅಧಿಕಾರಿಗಳು ಒಂದು ವಾರದೊಳಗೆ ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ.

ರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾರ್ಯೋ ನ್ಮುಖರಾಗಿರುವ ಸಚಿವರು ಚುನಾವಣೆ ಮುಗಿಯುವವರೆಗೆ ಕ್ಷೇತ್ರದತ್ತ ತಲೆಹಾಕುತ್ತಾರೆ ಎಂಬ ಯಾವ ವಿಶ್ವಾಸವೂ ಉಳಿದಿಲ್ಲ. ಈ ಮಾತಿಗೆ ಪುಷ್ಠಿ ನೀಡುವಂತೆ ಅಧಿ
ಕಾರಿಗಳು ನ. 13-14ರಂದು ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗುವುದು ಎಂದು ರೈತರ ಮುಂದೆ ಹೇಳಿಕೆ ನೀಡುತ್ತಿದ್ದಾರೆ.

ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ: ಒಂದು ಅಂದಾಜಿನ ಪ್ರಕಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಸಫಲವಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಇನ್ನು ಸಚಿವರು ಚುನಾವಣೆ ಬಳಿಕ ಸಭೆ ಕರೆದರೆ ಕಾರ್ಖಾನೆಗಳು ಆರಂಭದ ಹುಮ್ಮಸ್ಸಿನಲ್ಲಿರುತ್ತವೆ. ಆಗ ರೈತರು ಕಬ್ಬು ಹಾಳಾಗುತ್ತದೆ ಎಂಬ ಚಿಂತೆಗೊಳಗಾಗುತ್ತಾರೆ. ಅವಧಿ ಮುಗಿದ ಬಳಿಕ ಸಭೆ ನಡೆಸುವುದಕ್ಕಿಂತ ಸಚಿವರು ಈಗಲೇ ಬಿಡುವು ಮಾಡಿಕೊಂಡು ಸಭೆ ನಡೆಸಿ ಅನ್ನದಾತರಿಗೆ ನ್ಯಾಯ ದೊರಕಿಸಿ
ಕೊಡಬೇಕಾಗಿದೆ.

ಸಕ್ಕರೆ ಸಚಿವ ಶಿವಾನಂದ ಪಾಟೀಲ ಈ ಮೊದಲು ನ.15ರಿಂದ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಆದೇಶ ನೀಡಿದ್ದರು. ಆದರೆ ದಿಢೀರನೆ ತಮ್ಮ ನಿರ್ಧಾರ ಬದಲಿಸಿದ ಸಚಿವರು ನ.8ರಿಂದಲೇ ಕಾರ್ಖಾನೆ ಆರಂಭಕ್ಕೆ ಮರು ಆದೇಶ ಮಾಡುತ್ತಾರೆ. ಇನ್ನು ತಮ್ಮ ಆದೇಶ ಸಮರ್ಥನೆಗೆ ಉತ್ತರ ನೀಡಿರುವ ಸಕ್ಕರೆ ಸಚಿವರು ರಾಜ್ಯದಲ್ಲಿ ಹೆಚ್ಚು ಮಳೆ ಬಿದ್ದು ಕಬ್ಬು ಬೆಳೆ ಹಾನಿಯಾಗುತ್ತದೆ ಎಂಬ ಸಬೂಬು ನೀಡಿದ್ದಾರೆ.

ಆದರೆ ಕೆಲವೇ ಕೆಲವು ಜನರು ನೀಡಿರುವ ಅರ್ಜಿಯನ್ನು ಪರಿಗಣಿಸಿರುವ ಸಕ್ಕರೆ ಸಚಿವರು ಘಟಪ್ರಭೆಯಿಂದ ಸಾವಿರಾರು ಎಕರೆ
ಬೆಳೆಹಾನಿಯಾದ ರೈತರ ಬಗ್ಗೆ ಮಾತನಾಡದಿರುವುದು ಸೋಜಿಗದ ಸಂಗತಿಯೇ ಸರಿ. ಸಚಿವರ ದಿಢೀರ್‌ ನಿರ್ಧಾರದ ಹಿಂದೆ ಅದ್ಯಾವ ಸಕ್ಕರೆ ಮಾಫಿಯಾ ಕೆಲಸ ಮಾಡಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.

“ಬಾಕಿ ನೀಡುವವರೆಗೆ ಕಾರ್ಖಾನೆ ಆರಂಭಕ್ಕಿಲ್ಲ ಅನುಮತಿ’

ಮುಧೋಳ: ಕಬ್ಬಿಗೆ ಬೆಲೆ ನಿಗದಿ ಹಾಗೂ ಹಿಂದಿನ ಬಾಕಿ ನೀಡಬೇಕು ಎಂದು ಒತ್ತಾಯಿಸಿ ರೈತರು ಮಡೆಸುತ್ತಿದ್ದ ಧರಣಿ ಎರಡನೇ ದಿನಕ್ಕೆ ಕಾಲಿಟ್ಟ ಪರಿಣಾಮ ಗುರುವಾರ ಸಂಜೆ ರೈತರು  ತಾಲೂಕು ಆಡಳಿತ ಭವನಕ್ಕೆ ಬೀಗ ಜಡಿದು ಕಚೇರಿ ಸಿಬ್ಬಂದಿಗೆ ದಿಗ್ಬಂದನ ಹಾಕಿ ಆಕ್ರೋಶ ಹೊರಹಾಕಿದರು.

ಬುಧವಾರ ಸಂಜೆ ಉಪವಿಭಾಗಾಕಾರಿ ಶ್ವೇತಾ ಬೀಡಿಕರ ಅವರು ರೈತರನ್ನು ಭೇಟಿಯಾಗಿ ನ.7ರಂದು ಜಿಲ್ಲಾಧಿಕಾರಿಗಳ
ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂಬ ಭರವಸೆ ನೀಡಿದ್ದರು. ಅವರ ಮಾತಿಗೆ ಒಪ್ಪಿ ಹೋರಾಟಗಾರರು ಗುರುವಾರ ಸಂಜೆವರೆಗೆ ತಾಲೂಕು ಆಡಳಿತ ಭವನದ ಎದುರು ಶಾಂತರೀತಿಯಿಂದ ಧರಣಿ ನಡೆಸುತ್ತಿದ್ದರು. ಸಂಜೆಯಾದರೂ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸಂದೇಶ ಬಾರದಿದ್ದಾಗ ಆಕ್ರೋಶಗೊಂಡ ರೈತರು ಕಚೇರಿ ಬಿಡುವಿನ ವೇಳೆಯಲ್ಲಿ ಕಟ್ಟಡದ ಎಲ್ಲ ಗೇಟ್‌ಗಳನ್ನು ಬಂದ್‌ ಮಾಡಿದರು.

ಬಳಿಕ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ ಬಂದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಬಾಕಿ ಹಣ ನೀಡಲು ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಬಾಕಿ ನೀಡಿದ ಮೇಲೆಯೇ ಕಾರ್ಖಾನೆ ಆರಂಭಗೊಳ್ಳುತ್ತವೆ. ನ.13 ಅಥವಾ 14ರಂದು ಸಚಿವರು ಹಾಗೂ ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ಎಲ್ಲ ಸಮಸ್ಯೆಯ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ರೈತರು, ಬಾಕಿ ನೀಡುವುದು ಹಾಗೂ ಸಭೆ ಮುಗಿಯುವವರೆಗೆ ಕಾರ್ಖಾನೆ ಆರಂಭಿಸಬಾರದು. ಸಭೆಯನ್ನು
ಮುಧೋಳದಲ್ಲಿಯೇ ಆಯೋಜಿಸಬೇಕು ಎಂದು ತಿಳಿಸಿದರು. ಸಭೆ ನಡೆಯುವ ಮುಂಚೆಯೇ ಕಾರ್ಖಾನೆ ಆರಂಭಿಸಿದರೆ
ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದರು.

ಉಪವಿಭಾಗಾಧಿಕಾರಿ ಮಾತನಾಡಿ, ಸಭೆ ನಡೆಯುವವರೆಗೆ ಹಾಗೂ ಬಾಕಿ ನೀಡುವವರೆಗೆ ಕಾರ್ಖಾನೆ ಆರಂಭವಾಗದಂತೆ
ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ನಂತರ ಧರಣಿಯನ್ನು ಹಿಂಪಡೆದುಕೊಂಡರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ರೈತ
ಮುಖಂಡರಾದ ಹನಮಂತ ನಬಾಬ, ವೆಂಕಣ್ಣ ಮಳಲಿ, ನಾಗೇಶ ಗೋಲಶೆಟ್ಟಿ, ಸುರೇಶ ಚಿಂಚಲಿ ಸೇರಿದಂತೆ ಇತರರು ಇದ್ದರು.

ಕಚೇರಿ ಆವರಣದಲ್ಲೆ ಅಡುಗೆ: ಬುಧವಾರ ರಾತ್ರಿಯಂತೆ ಗುರುವಾರ ಮಧ್ಯಾಹ್ನವೂ ಸಹ ರೈತರು ತಹಶೀಲ್ದಾರ್‌ ಕಚೇರಿ ಎದುರಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು.

ಕಬ್ಬು ಬೆಳೆಗಾರರ ಸಮಸ್ಯೆ ಇರುವ ಜಾಗವಾಗಿರುವ ಮುಧೋಳದಲ್ಲಿಯೇ ಜಿಲ್ಲಾಧಿಕಾರಿಗಳು ಸಭೆ ನಡೆಸಿದರೆ ಹೆಚ್ಚು
ಪರಿಣಾಮಕಾರಿಯಾಗಿರುತ್ತದೆ. ನಮ್ಮ ಸಮಸ್ಯೆಯನ್ನು ಅರಿತು ಅವುಗಳ ನಿವಾರಣೆ ಜಿಲ್ಲಾಡಳಿತ ಮುಂದಾಗಬೇಕು.
ಬಸವಂತಪ್ಪ ಕಾಂಬಳೆ, ರೈತ ಸಂಘದ 
ಜಿಲ್ಲಾಧ್ಯಕ್ಷ

■ ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next