Advertisement

ತುಂಬೆ ಡ್ಯಾಂನಲ್ಲಿ ಡ್ರೆಜ್ಜಿಂಗ್ ಗೆ ಜಿಲ್ಲಾಡಳಿತ ನಿರ್ಧಾರ

10:10 AM Nov 12, 2018 | |

ಮಹಾನಗರ: ಇದೇ ಮೊದಲ ಬಾರಿಗೆ ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಸಂಗ್ರಹವಾಗಿರುವ ಬೃಹತ್‌ ಪ್ರಮಾಣದ ಹೂಳು ಸಹಿತ ಮರಳನ್ನು ತೆಗೆಯಲು ಜಿಲ್ಲಾಡಳಿತ ಮುಂದಾಗಿದೆ. ಈ ಮೂಲಕ ತುಂಬೆ ಡ್ಯಾಂನಲ್ಲಿ ಹೆಚ್ಚು ನೀರು ಸಂಗ್ರಹಕ್ಕೆ ಎದುರಾಗಿದ್ದ ಅಡಚಣೆ ಯನ್ನು ನಿವಾರಿಸುವ ಪ್ರಯತ್ನ ನಡೆದಿದೆ.

Advertisement

ಡ್ಯಾಂನ ಆಳದಲ್ಲಿ ತುಂಬಿರುವ ಬೃಹತ್‌ ಪ್ರಮಾಣದ ಮರಳನ್ನು ತುರ್ತಾಗಿ ಡ್ರೆಜ್ಜಿಂಗ್‌ ಮೂಲಕ ವಿಲೇವಾರಿ ಮಾಡಲು ಕೇಂದ್ರ ಪರಿಸರ ಇಲಾಖೆ ಇತ್ತೀಚೆಗೆ ಜಿಲ್ಲಾಡಳಿತಕ್ಕೆ ಅನುಮತಿ ನೀಡಿತ್ತು. ಈ ಸಂಬಂಧ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಮನಪಾ ಅಧಿಕಾರಿಗಳನ್ನು ಒಳಗೊಂಡ ಮೇಲುಸ್ತುವಾರಿ ಸಮಿತಿಯೊಂದನ್ನು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ರಚನೆ ಮಾಡಿದ್ದಾರೆ. ಆ ಸಮಿತಿ ಮೂಲಕ ಟೆಂಡರ್‌ ಕರೆಯಲು ಅನುಮತಿ ನೀಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದ ಅನಂತರ ನಿಯಮಾವಳಿಗಳ ಪ್ರಕಾರ ಡ್ರೆಜ್ಜಿಂಗ್‌ ನಡೆಸಲು ಅನುಮತಿ ದೊರೆಯಲಿದೆ.

ತುಂಬೆ ಡ್ಯಾಂನ ಪಂಪಿಂಗ್‌ ಜಾಗದಲ್ಲಿ ಇರುವ ಬಾವಿಯಲ್ಲಿ ಯಥೇತ್ಛವಾಗಿ ಮರಳು ತುಂಬಿ ಪಂಪಿಂಗ್‌ ಸಮಸ್ಯೆ ಆದಾಗ, ಬಾವಿಯಲ್ಲಿ ತುಂಬಿರುವ ಮರಳನ್ನು ಈ ಹಿಂದೆ ತೆಗೆಯಲಾಗಿತ್ತು. 15 ದಿನದ ಹಿಂದೆ ಕೂಡ ಇದೇ ರೀತಿ ಬಾವಿಯ ಮರಳನ್ನು ತೆಗೆಯಲಾಗಿದ್ದು, ಅದಕ್ಕಾಗಿ ಒಂದು ದಿನ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಆದರೆ ಡ್ಯಾಂ ಪೂರ್ಣ ಸಂಗ್ರಹವಾಗಿರುವ ಮರಳನ್ನು ತೆಗೆದಿರಲಿಲ್ಲ. ಹೀಗಾಗಿ ಎಷ್ಟು ಪ್ರಮಾಣದ ಮರಳು ಇಲ್ಲಿ ಇದೆ ಎಂದು ಅಂದಾಜಿಸಲಾಗುತ್ತಿಲ್ಲ.

ಡ್ರೆಜ್ಜಿಂಗ್‌ ಯಾಕಾಗಿ?
ಈಗ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ 5 ಮೀಟರ್‌ನಷ್ಟಿದೆ. ಆದರೆ ನದಿಯಲ್ಲಿ ನೀರಿನ ಜತೆಗೆ ಮರಳು ಕೂಡ ಬಂದು ಡ್ಯಾಂ ಭಾಗದ ತಳಮಟ್ಟದಲ್ಲಿ ಸಂಗ್ರಹವಾಗಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಜತೆಗೆ ಈ ಹಿಂದಿನ ಹಳೆ ಡ್ಯಾಂನಲ್ಲಿ ಮಳೆಗಾಲದ ಸಂದರ್ಭ ಎಲ್ಲ ಗೇಟುಗಳನ್ನು ತೆರೆಯುತ್ತಿದ್ದ ಕಾರಣ ಮರಳು ಡ್ಯಾಂನಿಂದ ಹೊರಭಾಗಕ್ಕೆ ಹೋಗುತ್ತಿತ್ತು. ಹೊಸ ಡ್ಯಾಂ ಆದ ಬಳಿಕ ಇಲ್ಲಿ ಕೆಲವು ಗೇಟ್‌ಗಳನ್ನು ಬಂದ್‌ ಮಾಡಿದ್ದರಿಂದ ಅಲ್ಲಿ ಮರಳು ಸಂಗ್ರಹ ಯಥೇತ್ಛವಾಗಿದೆ. ಭಾರೀ ಪ್ರಮಾಣದಲ್ಲಿ ಹೂಳು/ಮರಳು ತುಂಬಿದರೆ, ನೀರು ಹತ್ತಿರದ ಪ್ರದೇಶಗಳಿಗೆ ನುಗ್ಗುವ ಅಪಾಯ ವಿದೆ. ಹೀಗಾಗಿ ಡ್ರೆಜ್ಜಿಂಗ್‌ ಮಾಡಲು ತೀರ್ಮಾನಿಸಲಾಗಿದೆ.

ತುಂಬೆ ವೆಂಟೆಡ್‌ಡ್ಯಾಂ ಅನ್ನು ನಗರದ ಮುಂದಿನ 20ರಿಂದ 25 ವರ್ಷಗಳವರೆಗಿನ ನೀರಿನ ಆವಶ್ಯಕತೆಯನ್ನು ಮನಗಂಡು 2009ರಲ್ಲಿ ರೂಪಿಸಲಾಗಿತ್ತು. ಡ್ಯಾಂನ ಎತ್ತರ 12 ಮೀಟರ್‌ ಆಗಿದ್ದು ಗರಿಷ್ಠ 7 ಮೀ. ನೀರು ನಿಲ್ಲಿಸಬಹುದು. ಆದರೆ 7 ಮೀ.ನೀರು ಸಂಗ್ರಹಿಸಿದರೆ ನದಿಯ ಎರಡೂ ಕಡೆಗಳಲ್ಲಿ ಕೃಷಿ ಭೂಮಿ ಸಹಿತ ಬಹಳಷ್ಟು ಪ್ರದೇಶ ಜಲಾವೃತಗೊಳ್ಳುವುದರಿಂದ ಆರಂಭ ದಲ್ಲಿ ಇಲ್ಲಿ 5 ಮೀ. ಎತ್ತರಕ್ಕೆ ನೀರು ಸಂಗ್ರಹಿಸಲಾಗುತ್ತಿದೆ. ನಗರಕ್ಕೆ ದಿನಂಪ್ರತಿ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. 

Advertisement

ಮೀನುಗಾರಿಕಾ ಬಂದರ್‌ನ ರೀತಿಯಲ್ಲಿ ಡ್ರೆಜ್ಜಿಂಗ್‌
ನಗರದ ಮೀನುಗಾರಿಕಾ ಬಂದರ್‌ ನಲ್ಲಿ ಮೀನುಗಾರಿಕಾ ದೋಣಿಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸಲು ಮಾಡಲಾಗುತ್ತಿರುವ ಡ್ರೆಜ್ಜಿಂಗ್‌ಗೆ ಬಳಕೆ ಮಾಡುವ ರೀತಿಯ ಬೃಹತ್‌ ಗಾತ್ರದ ಯಂತ್ರವನ್ನೇ ತುಂಬೆ ಡ್ಯಾಂನಲ್ಲೂ ಬಳಕೆ ಮಾಡುವ ಸಾಧ್ಯತೆ ಇದೆ. ಡ್ಯಾಂನ ಪೂರ್ಣ ಮರಳನ್ನು ತೆಗೆದು ಅದನ್ನು ಸರಕಾರಿ ಕಾಮಗಾರಿಗಳಿಗೆ ಬಳಕೆ ಮಾಡುವ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಪ್ರಾಥಮಿಕವಾಗಿ ನಿರ್ಧರಿಸಿದೆ. ಆದರೆ ಡ್ಯಾಂನಿಂದ ತೆಗೆದ ಮರಳನ್ನು ಎಲ್ಲಿ ಸಂಗ್ರಹಿಸುವುದು ಹಾಗೂ ಅವುಗಳ ವಿಲೇವಾರಿ ಹೇಗೆ? ಇತ್ಯಾದಿ ಸಂಗತಿಗಳ ಬಗ್ಗೆ ಜಿಲ್ಲಾಧಿಕಾರಿಯವರು ನೇಮಿಸಿದ್ದ ಸಮಿತಿಯು ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ಒಳಹರಿವು ಕಡಿಮೆಯಾದರೆ 6 ಮೀಟರ್‌
ಕಳೆದ ಬಾರಿ ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಕಡಿಮೆ ಆಗುತ್ತಿದ್ದಂತೆ ನವೆಂಬರ್‌ ಅಂತ್ಯದ ವೇಳೆಗೆ 6 ಮೀಟರ್‌ ನೀರು ನಿಲ್ಲಿಸಲಾಗಿತ್ತು. ಈಗ 5 ಮೀಟರ್‌ ನಷ್ಟು ನೀರು ಸಂಗ್ರಹಿಸಲಾಗುತ್ತಿದೆ. ಈ ಬಾರಿಯೂ ಒಳಹರಿವು ಕಡಿಮೆಯಾಗುವ ಸಂದರ್ಭ ಗೇಟಿನ ಮಟ್ಟವನ್ನು ಸ್ವಲ್ಪ ಏರಿಸಿ 6 ಮೀಟರ್‌ ನೀರು ನಿಲುಗಡೆ ಮಾಡಲು ಪಾಲಿಕೆ ನಿರ್ಧರಿಸಿದೆ.

ಡ್ರೆಜ್ಜಿಂಗ್‌ಗೆ ಅನುಮತಿ
ತುಂಬೆ ಡ್ಯಾಂನಲ್ಲಿ ತುಂಬಿರುವ ಹೂಳು/ಮರಳನ್ನು ಡ್ರೆಜ್ಜಿಂಗ್‌ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಇದಕ್ಕಾಗಿ  ಮಿತಿಯೊಂದನ್ನು ರಚಿಸಲಾಗಿದೆ. ಅದರ ಮೂಲಕ ಟೆಂಡರ್‌ ಹಾಗೂ ಇತರ ನಿಯಮಾವಳಿಗಳ ಜಾರಿಗೆ ಸಿದ್ಧತೆ ನಡೆದಿದೆ. ಕೆಲವೇ ದಿನದಲ್ಲಿ ಡ್ರೆಜ್ಜಿಂಗ್‌ ಪ್ರಕ್ರಿಯೆ ಆರಂಭವಾಗಲಿದೆ.
– ಮಹಮ್ಮದ್‌ ನಝೀರ್‌, ಆಯುಕ್ತರು, ಮನಪಾ

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next