ಕೊಪ್ಪಳ: ನಗರದ ಹೊರ ವಲಯದಲ್ಲಿನ ಹಿರೇಹಳ್ಳವನ್ನು ಸಂರಕ್ಷಣೆ ಮಾಡಿದರೆ ಅಂತರ್ಜಲಮಟ್ಟ ಹೆಚ್ಚಳವಾಗಿ ಸುತ್ತಲಿನ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎನ್ನುವುದುನ್ನು ಅರಿತ ಜಿಲ್ಲಾಡಳಿತವು ಪ್ರಾಜೆಕ್ಟ್ರಿ ಪೋರ್ಟ್ ಸಿದ್ಧಗೊಳಿಸಿ ವಿಶೇಷ ಅನುದಾನ ಪಡೆಯುವ ನಿರೀಕ್ಷೆಯಲ್ಲಿದೆ. ಮೊದಲ ಹಂತವಾಗಿ ಜಂಗಲ್ ಕಟ್ಟಿಂಗ್ ಕಾರ್ಯಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.
ಹೌದು. ಜಿಲ್ಲೆಯಲ್ಲಿ ಪದೇ ಪದೆ ಬರದ ಛಾಯೆ ಆವರಿಸುತ್ತಿದೆ. ಇದರಿಂದ ರೈತರ ಕೃಷಿ ಬದುಕು ದುಸ್ತರವಾಗುತ್ತಿದ್ದು, ಕೃಷಿಯಿಂದ ಜನರು ವಿಮುಖವಾಗುತ್ತಿದ್ದಾರೆ. ಮಳೆಯ ಅವಕೃಪೆಯಿಂದಾಗಿ ರೈತರು, ಜನರು ದೂರದ ಊರುಗಳಿಗೆ ದುಡಿಮೆ ಅರಸಿ ಗುಳೆ ಹೊರಡುತ್ತಿದ್ದಾರೆ. ಇದನ್ನರಿತ ಜಿಲ್ಲಾಡಳಿತವು ಇಲ್ಲಿನ ಜನರಿಗೆ ಸ್ಥಳೀಯವಾಗಿ ಬದುಕು ಕಟ್ಟಿಕೊಡಬೇಕೆನ್ನುವ ಉದ್ದೇಶದಿಂದ ಸ್ಥಳೀಯ ಜಲಮೂಲಗಳ ಸಂರಕ್ಷಣೆಗೆ ಮುಂದಾಗಿದೆ.
ವಿಶೇಷವಾಗಿ ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಈ ಬಾರಿ ಕೆರೆಗಳ ಹೂಳೆತ್ತಿ ಜನರ ಜೀವನ ರಕ್ಷಣೆ ಮಾಡಬೇಕೆಂದು ಪಣತೊಟ್ಟಿದ್ದು, ಕುಷ್ಟಗಿ ತಾಲೂಕಿನ ನಿಡಶೇಷಿ ಕೆರೆ ಹಾಗೂ ಯಲಬುರ್ಗಾ ತಾಲೂಕಿನ ಕಲ್ಲಭಾವಿ ಕೆರೆ, ತಾವರಗೇರಾದ ರಾಯನಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸ್ಥಳೀಯರ ಸಹಕಾರದ ಜೊತೆಗೆ ಗಣ್ಯರು ಹೂಳೆತ್ತುವ ಕಾರ್ಯಕ್ಕೆ ನೆರವಿನ ಹಸ್ತ ಚಾಚಿದ್ದು, ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಅಲ್ಲದೇ, ಗವಿಮಠದಿಂದಲೇ ಶ್ರೀಗಳು ಹಿರೇಹಳ್ಳವನ್ನು ಪ್ರತ್ಯೇಕವಾಗಿ ಸರ್ವೇ ನಡೆಸಿದ್ದಾರೆ. ಅವರೊಟ್ಟಿಗೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು, ಕೈ ಜೋಡಿಸಿದ್ದು, ಮೊದಲ ಹಂತವಾಗಿ 21 ಕಿ.ಮೀ. ಉದ್ದ ಹೊಂದಿರುವ ಹಿರೇಹಳ್ಳದ ಎರಡೂ ಬದಿಯಲ್ಲೂ ಜಂಗಲ್ ಕಟಿಂಗ್ ಮಾಡಿದರೆ ಎಷ್ಟು ಪ್ರಮಾಣದಲ್ಲಿ ಮುಂದೆ ಕಾಮಗಾರಿ ಕೈಗೊಳ್ಳಲು ಸಾಧ್ಯ ಎನ್ನುವುದನ್ನು ಚಿಂತನೆ ಮಾಡುತ್ತಿದ್ದಾರೆ.
ಗವಿಮಠದ ಶ್ರೀಗಳು ಒಂದೆಡೆ ಪ್ರತ್ಯೇಕ ಯೋಜನೆ ರೂಪಿಸಿದ್ದರೆ, ಜಿಲ್ಲಾಡಳಿತವೂ ಹಿರೇಹಳ್ಳದ ಸಂಪೂರ್ಣ ಡಿಪಿಆರ್ ಮಾಡಲು ಉದ್ದೇಶಿಸಿದೆ. 21 ಕಿಮೀ ಉದ್ದ ಹೊಂದಿರುವ ಹಿರೇಹಳ್ಳದ ಎರಡೂ ಬದಲಿಯಲ್ಲಿ ಜಂಗಲ್ ಕಟಿಂಗ್ ಮಾಡಿ ಎಲ್ಲಿ ಸೇತುವೆ ನಿರ್ಮಾಣ ಮಾಡಬೇಕು? ಏಲ್ಲಿ ಬ್ರಿಜ್x ಕಂ ಬ್ಯಾರೇಜ್ ಮಾಡಬೇಕು? ಹೇಗೆ ನೀರು ನಿಲ್ಲಿಸುವ ಕಾಯಕ ಕೈಗೊಳ್ಳಬೇಕೆಂದು ಡಿಪಿಆರ್‌ನಲ್ಲಿ ಸಿದ್ಧಗೊಳಿಸುವ ಪ್ರಯತ್ನ ನಡೆದಿದೆ. ಈಗಾಗಲೇ ಸಣ್ಣ ನೀರಾವರಿ ಇಲಾಖೆಯ ರಾಜ್ಯ ಕಾರ್ಯದರ್ಶಿಯೂ ಕೊಪ್ಪಳಕ್ಕೆ ಭೇಟಿ ನೀಡಿ ಇಲ್ಲಿನ ಕೆರೆ ಹೂಳೆತ್ತುವ ಕಾರ್ಯ ರಾಜ್ಯಕ್ಕೆ ಮಾದರಿ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ಜಿಲ್ಲಾಡಳಿತ ಹಿರೇಹಳ್ಳ ಪ್ರಾಜೆಕ್ಟ್ಗೆ ಹೆಚ್ಚಿನ ಆಸಕ್ತಿ ವಹಿಸಿದೆ.
ಹಿರೇಹಳ್ಳದ ಅಲ್ಲಲ್ಲಿ ಸೇತುವೆ ನಿರ್ಮಾಣ ಮಾಡಿದರೆ ನೀರು ನಿಂತು ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಜೊತೆಗೆ ಹಳ್ಳದ ಸುತ್ತಮುತ್ತಲಿನ ರೈತರಿಗೆ ಕೃಷಿ ಚಟುವಟಿಕೆಗೆ ತುಂಬ ಅನುಕೂಲವಾಗಲಿದೆ. ಇದೆಲ್ಲವನ್ನು ಅರಿತು ಮೊದಲ ಜಂಗಲ್ ಕಟಿಂಗ್ ನಡೆಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಮುಂದಾಗಿದ್ದು, ನಂತರದ ದಿನದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ವಿಶೇಷ ಅನುದಾನದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಹಿರೇಹಳ್ಳದ ಸಂಪೂರ್ಣ ಡಿಪಿಆರ್ ಯೋಜನೆ ಸಿದ್ಧತೆಗೆ ನಾವು ಮುಂದಾಗಿದ್ದೇವೆ. ಸದ್ಯಕ್ಕಂತೂ ಸರ್ಕಾರದಿಂದ ಆ ಯೋಜನೆಗೆ ಯಾವುದೇ ಅನುದಾನವಿಲ್ಲ. ಮೊದಲ ಹಂತದಲ್ಲಿ 21 ಕಿ.ಮೀ. ಉದ್ದದ ಹಳ್ಳದಲ್ಲಿನ ಜಂಗಲ್ ಕಟ್ಟಿಂಗ್ ಕಾರ್ಯ ನಡೆಯಲಿದೆ. ನಂತರದ ದಿನದಲ್ಲಿ ಡಿಪಿಆರ್ ಅನುಸಾರ ಸರ್ಕಾರದ ಮಟ್ಟದಲ್ಲಿ ಅನುದಾನ ಕೇಳಲಾಗುವುದು.
.ಸುನೀಲಕುಮಾರ,
ಜಿಲ್ಲಾಧಿಕಾರಿ
ದತ್ತು ಕಮ್ಮಾರ