ಮೈಸೂರು: ಮುಂಬರುವ 2020-21ನೇ ಶೈಕ್ಷಣಿಕ ವರ್ಷದಲ್ಲಿ ಶಾಲಾ ಆರಂಭದ ದಿನವೇ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ನೀಡುವ ದೃಷ್ಟಿಯಿಂದ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಇಷ್ಟು ವರ್ಷ ಪಠ್ಯಪುಸ್ತಕಗಳನ್ನು ಸೆಪ್ಟೆಂಬರ್,ಅಕ್ಟೋಬರ್, ನವೆಂಬರ್‌ನಲ್ಲಿ ನೀಡ ಲಾಗುತ್ತಿತ್ತು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆ ಆರಂಭದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು. ಪರೀಕ್ಷೆಯಲ್ಲಿ ನಕಲು ತಡೆಯಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು.
10,600 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ಪಟ್ಟಿ ಹಾಕಿದ್ದೇವೆ. ಎರಡನೇ ಪಟ್ಟಿಯಲ್ಲಿ ಆಗಿರವು ತಾಂತ್ರಿಕ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು ಎಂದರು. ಇನ್ನು ಮುಂದೆ ವಾರದಲ್ಲಿ ಒಂದು ದಿನ ಪುಸ್ತಕರಹಿತ ದಿನವಾಗಿ ಮಾಡಿ ಮಕ್ಕಳಿಗೆ ಚಟುವಟಿಕೆಗಳಿಂದ ಮೌಲ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷದಿಂದಲೇ ಟಿಪ್ಪು ಇತಿಹಾಸವನ್ನು ಶಾಲಾ ಪಠ್ಯದಿಂದ ಕೈಬಿಡಲು ಆಗುವುದಿಲ್ಲ. ಈ ಕುರಿತು ವಿಸ್ತೃತ ಚರ್ಚೆಯಾಗಬೇಕಿದ್ದು, ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
-ಎಸ್.ಸುರೇಶ್ ಕುಮಾರ್, ಸಚಿವ