ಹಾವೇರಿ: ಬರ, ನೆರೆ, ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪ್ರಸಕ್ತ ವರ್ಷ ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.
ಕರ್ಜಗಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ ಮಾಡಿ ಅವರು ಮಾತನಾಡಿದರು. ಈ ವರ್ಷ ಮುಂಗಾರು ಹಾಗೂ ಹಿಂಗಾರು ಬಿತ್ತನೆಗೆ ರೈತರಿಗೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಆಯ್ಕೆಮಾಡಿಕೊಳ್ಳಬೇಕು. ಸರ್ಕಾರದಿಂದ ವಿತರಿಸುವ ಪ್ರಮಾಣೀಕೃತ ಮಾನ್ಯತೆ ಪಡೆದ ಉತ್ತಮ ಗುಣಮಟ್ಟದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ರೈತರಿಗೆಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಆರ್. ಕೆ. ಕುಡಪಲಿ ಮಾತನಾಡಿ, ತಾಲೂಕಿನಲ್ಲಿ 65 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆ ಪ್ರದೇಶವಿದೆ. ಇದರಲ್ಲಿ 20 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದೆ. 35 ಸಾವಿರ ಹೆಕ್ಟೇರ್ ಮೆಕ್ಕೆಜೋಳ, 10 ಸಾವಿರ ಹೆಕ್ಟೇರ್ ಹೈಬ್ರಿàಡ್ ಹತ್ತಿ, ಒಂದು ಸಾವಿರ ಹೆಕ್ಟೇರ್ ಸೋಯಾ ಅವರೆ, ಒಂದು ಸಾವಿರ ಹೆಕ್ಟೇರ್ ಶೇಂಗಾ, 500 ಹೆಕ್ಟೇರ್ ತೊಗರಿ ಉಳಿದಂತೆ ಹೆಸರು, ಹೈಬ್ರೀಡ್ ಜೋಳ ಬೆಳೆ ಹಾಕುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕೃಷಿ ಸಮಾಜದ ಸದಸ್ಯರಾದ ಪ್ರಕಾಶ ಹಂದ್ರಾಳ, ಬಸವರಾಜ ಹಾದಿಮನಿ, ಬಸವರಾಜ ಡೊಂಕಣ್ಣನವರ, ನಾಗರಾಜ ವಿಭೂತಿ, ಶಿವಪುತ್ರಪ್ಪ ಶಿವಣ್ಣನವರ, ಮಲ್ಲೇಶಪ್ಪ ಮತ್ತಿಹಳ್ಳಿ, ರವಿ ಕಬಾಡಿ, ಸಂಗಮೇಶ ಸುರಳಿಹಳ್ಳಿ, ಜಯಪ್ಪ ಶಟ್ಟರ, ಕೃಷಿ ಇಲಾಖೆಯ ಕೊಟ್ರೇಶ ಜಿ., ಡಿ.ಪಿ. ದೊಡ್ಡಮನಿ ಇದ್ದರು.