Advertisement

ಬಿಜೆಪಿಯಿಂದ ಸ್ವಚ್ಛತಾ ಕಾರ್ಯ, ಅಕ್ಕಿ ವಿತರಣೆ

12:02 PM Sep 18, 2017 | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ವತಿಯಿಂದ ನಗರದಲ್ಲಿ ಸ್ವಚ್ಛತಾ ಆಂದೋಲನ, ಪ್ರತಿಮೆಗಳ ಸ್ವಚ್ಛತೆ, ಇತ್ತೀಚೆಗೆ ಬಿದ್ದ ಮಳೆಯಿಂದ ಸಂತ್ರಸ್ತರಾದ ಬಡ ಕುಟುಂಬಗಳಿಗೆ ಅಕ್ಕಿ ವಿತರಿಸುವುದು ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್‌ ಸೇರಿದಂತೆ ಪಕ್ಷದ ಶಾಸಕರು, ಬಿಬಿಎಂಪಿ ಸದಸ್ಯರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಈ ಮಧ್ಯೆ ಮಳೆಯ ಕಾರಣದಿಂದಾಗಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮ ರದ್ದಾದರೆ, ಯಡಿಯೂರಪ್ಪ ಅವರು ಆನಂದರಾವ್‌ ವೃತ್ತದ ಗಾಂಧಿ ಪ್ರತಿಮೆ ಸ್ವಚ್ಛಗೊಳಿಸಲು ಮುಂದಾಗಿದ್ದರಾದರೂ ಅಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದ್ದುದರಿಂದ ಆ ಕಾರ್ಯಕ್ರಮವೂ ರದ್ದುಗೊಂಡಿತು.

ಅಕ್ಕಿ ವಿತರಣೆ: ಧಾನಿಯವರ ಜನ್ಮದಿನದ ಅಂಗವಾಗಿ ಇತ್ತೀಚೆಗೆ ಬಿದ್ದ ಮಳೆಯಿಂದ ಸಂತ್ರಸ್ತರಾದ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಎರಡು ಲಾರಿಗಳಲ್ಲಿ ಅಕ್ಕಿ ತರಿಸಿಕೊಳ್ಳಲಾಗಿತ್ತು. ಅಲ್ಲಿ ಯಡಿಯೂರಪ್ಪ ಅವರು ಅಕ್ಕಿಯ ಗುಣಮಟ್ಟ ಪರಿಶೀಲಿಸಿದ ಬಳಿಕ ವಿತರಣೆಗಾಗಿ ನಗರದ ವಿವಿಧೆಡೆ ಕಳುಹಿಸಿಕೊಡಲಾಯಿತು. 

ಇದಾದ ಬಳಿಕ ಅಕ್ಕಿಯೊಂದಿಗೆ ಶಾಂತಿನಗರ ಕ್ಷೇತ್ರಕ್ಕೆ ತೆರಳಿದ ಯಡಿಯೂರಪ್ಪ ಅವರು ಕೆಲವು ಕುಟುಂಬಗಳಿಗೆ ಸಾಂಕೇತಿಕವಾಗಿ ಅಕ್ಕಿ ವಿತರಣೆ ಮಾಡಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್‌, ಬಿಬಿಎಂಪಿ ಸದಸ್ಯ ಶಿವಕುಮಾರ್‌, ಮಂಡಲ ಬಿಜೆಪಿ ಅಧ್ಯಕ್ಷ ವಾಸುದೇವಮೂರ್ತಿ ಮತ್ತಿತರರು ಹಾಜರಿದ್ದರು.

Advertisement

ಪ್ರತಿಮೆಗಳ ಸ್ವಚ್ಛತೆ: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಗಣ್ಯರ ಪ್ರತಿಮೆ ಮತ್ತು ಪುತ್ಥಳಿಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಹಲವೆಡೆ ಸ್ವಚ್ಛತಾ ಅಭಿಯಾನ ನಡೆಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತಿತರರು ಇದ್ದರು.

ಈ ಮಧ್ಯೆ ಸದಾನಂದಗೌಡ ಅವರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಚ್ಛತಾ ಕಾರ್ಯದ ಬಗ್ಗೆ ಎಲ್ಲರೂ 20-30 ವರ್ಷದ ಹಿಂದೆಯೇ ಕಾಳಜಿ ವಹಿಸಿದ್ದರೆ ಭಾರತ ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರವಾಗಿ ರೂಪುಗೊಳ್ಳುತ್ತಿತ್ತು ಎಂದು ಹೇಳಿದರು.

ಪೌರ ಕಾರ್ಮಿಕರೊಂದಿಗೆ ಉಪಹಾರ: ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರ ಕಾರ್ಮಿಕರೊಂದಿಗೆ ಬೆಂಗಳೂರಿನಲ್ಲಿದ್ದಾಗ ಬೆಳಗಿನ ಉಪಹಾರ ಸೇವಿಸಿ ಅವರ ಸಮಸ್ಯೆಗಳನ್ನು ಆಲಿಸಲು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನಿರ್ಧರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಸ್ವಚ್ಛತಾ ಆಂದೋಲನ ಮತ್ತು ಪ್ರತಿಮೆಗಳ ಸ್ವಚ್ಛತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು.

ದೇಶ ಇಂದು ಇಷ್ಟರ ಮಟ್ಟಿಗೆ ಸ್ವಚ್ಛವಾಗಿದೆ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಪೌರ ಕಾರ್ಮಿಕರು. ಅವರಿಗೆ ಅಂತಃಕರಣ ಸಾಕ್ಷಿಯಾಗಿ ನಮನ ಸಲ್ಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿದ್ದಾಗ ಅವರೊಂದಿಗೆ ಬೆಳಗಿನ ಉಪಹಾರ ಸೇವಿಸಿ ಒಂದು ಗಂಟೆ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದರು.

ತಮ್ಮ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ  ಪುಲಿಕೇಶಿನಗರ, ಕೆ.ಆರ್‌.ಪುರ, ಬ್ಯಾಟರಾಯನಪುರ, ಮಹಾಲಕ್ಷ್ಮಿ ಲೇಔಟ್‌, ಮಲ್ಲೇಶ್ವರ, ದಾಸರಹಳ್ಳಿ, ಯಶವಂತಪುರ ಮತ್ತು ಹೆಬ್ಟಾಳ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳಲ್ಲಿ ಪಕ್ಷದ ಶಾಸಕರು ಮತ್ತು ಸ್ಥಳೀಯ ಕಾರ್ಪೋರೇಟರ್‌ಗಳೊಂದಿಗೆ ಉಪಹಾರ ಸೇವಿಸಲಾಗುವುದು. ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವಂತೆ ಕಾರ್ಪೋರೇಟರ್‌ಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next