ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಭಾರಿ ಮಳೆಗೆ ಮರ ಬಿದ್ದು ಮೃತಪಟ್ಟ ಜಗದೀಶ್ ಅವರ ಕುಟುಂಬಕ್ಕೆ ಮೇಯರ್ ಜಿ.ಪದ್ಮಾವತಿ ಅವರು ಸೋಮವಾರ 5 ಲಕ್ಷ ರೂ. ಪರಿಹಾರ ನೀಡಿದರು. ಕಳೆದ ಶುಕ್ರವಾರ ಸುರಿದ ಭಾರಿ ಮಳೆಗೆ ರಿಣಾಮ ಒಂದೇ ಕುಟುಂಬದ ಜಗದೀಶ್, ರಮೇಶ್ ಹಾಗೂ ಭಾರತಿ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಆ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ಘೋಷಿಸಿದ್ದರು. ಅದರಂತೆ ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೃತ ಜಗದೀಶ್ ಅವರ ಪತ್ನಿ ರೂಪಾ ಅವರಿಗೆ ಮೇಯರ್ ಪದ್ಮಾವತಿ ಅವರು 5 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದರು.
ಈ ವೇಳೆ ಮಾತನಾಡಿದ ಮೇಯರ್ ಜಿ.ಪದ್ಮಾವತಿ ಅವರು, ಯಾವುದೇ ಕುಟುಂಬದಲ್ಲೂ ಇಂತಹ ಘಟನೆ ಸಂಭವಿಸಬಾರದು. ದುರಾದೃಷ್ಟವಶಾತ್ ಅನಾಹುತ ಸಂಭವಿಸಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಜಗದೀಶ್ ಪತ್ನಿ ರೂಪ ಮಾತನಾಡಿ, ಗೃಹ ರಕ್ಷಕ ದಳ ಸಿಬ್ಬಂದಿಯಾದ ಭಾರತಿ ಮತ್ತು ಅವರ ಪತಿ ರಮೇಶ್ ಇಬ್ಬರೂ ಮೃತಪಟ್ಟಿರುವುದರಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಹೀಗಾಗಿ ಇಬ್ಬರಿಗೂ ಬಿಬಿಎಂಪಿಯಿಂದ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಉಪಮೇಯರ್ ಎಂ.ಆನಂದ್, ಆಡಳಿತ ಪಕ್ಷ ನಾಯಕ ರಿಜ್ವಾನ್ ಮಹಮ್ಮದ್, ಪಾಲಿಕೆ ಸದಸ್ಯ ಎನ್.ನಾಗರಾಜ್ ಇದ್ದರು.
ಶಿವಾನಂದ ವೃತ್ತದ ರೈಲ್ವೆ ಕೆಳ ಸೇತುವೆ ಬಳಿ ಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಅರುಣ್ ಕುಟುಂಬ ಹಾಗೂ ರಮೇಶ್ ಹಾಗೂ ಭಾರತಿ ಅವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರದ ಚೆಕ್ ಸಿದ್ಧವಾಗಿದ್ದು, ಶೀಘ್ರವೇ ವಿತರಿಸಲಾಗುವುದು.
-ಜಿ.ಪದ್ಮಾವತಿ, ಮೇಯರ್