ಉಡುಪಿ: ಶ್ರೀಕೃಷ್ಣ ಮಠದಲ್ಲಿ ಕೃಷ್ಣಜಯಂತಿ- ವಿಟ್ಲಪಿಂಡಿ ಸಂಭ್ರಮ ಮುಗಿದ ಬಳಿಕ ಶನಿವಾರ ವಿವಿಧೆಡೆ ಪ್ರಸಾದ ವಿತರಣೆಯನ್ನು ಮಠದ ಸಿಬಂದಿ ನಡೆಸಿದರು. ಇದೇ ವೇಳೆ ಅದಮಾರು ಮಠದ ಹಿಂದಿನ ಪೀಠಾಧಿಪತಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾಧನೆ ಮಾಡಿದ ಶ್ರೀವಿಬುಧೇಶತೀರ್ಥ ಶ್ರೀಪಾದರ ಆರಾಧನೋತ್ಸವ ಜರಗಿತು.
ಶುಕ್ರವಾರ ವಿಟ್ಲಪಿಂಡಿ ಉತ್ಸವದ ವೇಳೆ ಸಾರ್ವಜನಿಕರಿಗೆ ರಥಬೀದಿಗೆ ಪ್ರವೇಶವಿರಲಿಲ್ಲ. ಉತ್ಸವ ಮುಗಿದ ಬಳಿಕ ಸಾರ್ವಜನಿಕರು ರಥಬೀದಿಗೆ ಆಗಮಿಸಿ ದೇವರ ದರ್ಶನವನ್ನು ಕನಕನ ಕಿಂಡಿ ಮೂಲಕ ನಡೆಸಿದರು. ಕೃಷ್ಣಾಷ್ಟಮಿ ಯಂತೆ ಶನಿವಾರವೂ ಭಕ್ತರು ಕನಕನ ಕಿಂಡಿ ಮೂಲಕ ದರ್ಶನ ಪಡೆದರು.
ಶುಕ್ರವಾರ 5,000 ಉಚಿತ ಪ್ರಸಾದ ವನ್ನು ರಥಬೀದಿಯಲ್ಲಿ ಹಾಕಿದ ಕೌಂಟರ್‌ನಲ್ಲಿ ವಿತರಿಸಲಾಗಿತ್ತು. ಇದಕ್ಕೂ ಶನಿವಾರ ಹೆಚ್ಚಿನ ಬೇಡಿಕೆ ಇತ್ತು. ಶುಕ್ರವಾರ ಉಡುಪಿ ನಗರದಲ್ಲಿ ಪ್ರಸಾದ ವಿತರಣೆ ನಡೆದರೆ, ಶುಕ್ರವಾರ, ಶನಿವಾರ ವಿವಿಧ ಕಚೇರಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು. ಒಟ್ಟು 20 ಸಾವಿರ ಉಚಿತ ಪ್ಯಾಕೆಟ್ ವಿತರಿಸಲಾಗಿದೆ.
ಆರಾಧನೋತ್ಸವದ ಅಂಗವಾಗಿ ಬೆಳಗ್ಗೆ ಮಹಾ ಪೂಜೆ ಬಳಿಕ ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಪಾದ್ಯವನ್ನು ಸಮರ್ಪಿಸಿದರೆ, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಅದಮಾರು ಮೂಲ ಮಠದಲ್ಲಿರುವ ವೃಂದಾವನಕ್ಕೆ ಪೂಜೆ ಸಲ್ಲಿಸಿದರು. ಸಂಜೆ ರಾಜಾಂಗಣದಲ್ಲಿ ಶ್ರೀವಿಬುಧೇಶತೀರ್ಥ ಶ್ರೀಪಾದರ ಸಂಸ್ಮರಣೆ ನಡೆಯಿತು.