ಗಂಗಾವತಿ: ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿ ಹಾಗೂ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ. ಇದರಿಂದ ಅಕ್ಕಿಯನ್ನು ಬಳಸದೆ ಅಕ್ಕಿ ಖರೀದಿದಾರರಿಗೆ ಮಾರಾಟ ಮಾಡುವ ದಂಧೆ ವ್ಯಾಪಕವಾಗಿದೆ.
ಕಳೆದ 2-3 ತಿಂಗಳಿಂದ ಸಾರ್ವಜನಿಕ ಪಡಿತರ ಅಕ್ಕಿ ವಿತರಣೆಯಲ್ಲಿ ಸ್ವಲ್ಪ ಪ್ರಮಾಣದ ಅಕ್ಕಿ ನೀರಿನಲ್ಲಿ ಕರಗದೆ ಮೇಲೆ ತೇಲುವ ಅಕ್ಕಿ ಪೂರೈಕೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಆತಂಕಗೊಂಡು ಪಡಿತರ ಅಕ್ಕಿಯನ್ನು ಬಳಸದೆ ಮಾರಾಟದಲ್ಲಿ ತೊಡಗಿದ್ದಾರೆ.
ಇದರಿಂದ ಸರ್ಕಾರದ ಧ್ಯೇಯೋದ್ದೇಶ ಉಲ್ಲಂಘನೆಯಾಗಿದ್ದು, ಪ್ಲಾಸ್ಟಿಕ್ ಅಕ್ಕಿ ಎನ್ನುವ ಭ್ರಮೆಯಲ್ಲಿ ಇರುವವರಿಗೆ ಸೂಕ್ತ ವೈಜ್ಞಾನಿಕ ಮಾಹಿತಿ ವಿತರಣೆ ಮಾಡುವಲ್ಲಿ ಆಹಾರ ಇಲಾಖೆ ವಿಫಲವಾಗಿದೆ. ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯ ಸಮಸ್ಯೆಯಿಂದಾಗಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶ ತರುವ ಉದ್ದೇಶದಿಂದ ಸರ್ಕಾರ ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ ಪೌಷ್ಠಿಕಾಂಶವುಳ್ಳ ಅಕ್ಕಿಯನ್ನು ಪೂರೈಕೆ ಮಾಡುತ್ತಿದೆ.
ಸಾರ್ವಜನಿಕ ಪಡಿತರ ಅಕ್ಕಿಯ ಜತೆಗೆ ಶೇ.25 ರಷ್ಟು ಪೌಷ್ಠಿಕಾಂಶವುಳ್ಳ ಅಕ್ಕಿಯನ್ನು ಮಿಶ್ರಣ ಮಾಡಿ ವಿತರಿಸಲಾಗುತ್ತಿದ್ದು, ಅಪೌಷ್ಠಿಕತೆಯಿಂದ ಬಳಲುತ್ತಿರುವವರಿಗೆ ಸರಕಾರ ಪೌಷ್ಟಿಕಾಂಶ ಹೆಚ್ಚಿಸಲು ಪೌಷ್ಠಿಕಾಂಶವುಳ್ಳ ಅಕ್ಕಿಯನ್ನು ದಾನ ಮಾಡುತ್ತಿದೆ. ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ಲಾಸ್ಟಿಕ್ ಅಕ್ಕಿ ವಿತರಣೆಯಾಗುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ.
ಪೌಷ್ಠಿಕಾಂಶವುಳ್ಳ ಅಕ್ಕಿ ವಿತರಣೆ ಬಗ್ಗೆ ಆಹಾರ ಇಲಾಖೆ ಜಿಲ್ಲಾಡಳಿತ, ತಾಲೂಕಾಡಳಿತ, ಹೋಬಳಿವಾರು ಸಾರ್ವಜನಿಕೆ ಜಾಗೃತಿಯನ್ನುಂಟು ಮಾಡಿ ಸಾರ್ವಜನಿಕ ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ ಊಟಕ್ಕೆ ಬಳಸುವಂತೆ ಸಲಹೆ ನೀಡಬೇಕಿದೆ.
ಸಾರ್ವಜನಿಕರಿಗೆ ತಪ್ಪು ಮಾಹಿತಿ: ಸಾರ್ವಜನಿಕ ಪಡಿತರ ಅಕ್ಕಿ ವಿತರಣೆಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದು, ಇದು ಸರಿಯಾದ ಮಾಹಿತಿಯಲ್ಲ. ಸಾರ್ವಜನಿಕರು ಇದನ್ನು ನಂಬಬಾರದು. ಅಪೌಷ್ಟಿಕ ಕೊರತೆಯಿಂದ ಬಳಲುತ್ತಿರುವ ಜನರಿಗೆ ಪೌಷ್ಟಿಕಾಂಶ ನೀಡುವ ಉದ್ದೇಶದಿಂದ ಸರಕಾರ ಕಳೆದ ಕೆಲವು ತಿಂಗಳಿಂದ ಪಡಿತರ ಅಕ್ಕಿಯ ಜೊತೆಗೆ ಸ್ವಲ್ಪ ಪ್ರಮಾಣದ ಪೌಷ್ಠಿಕಾಂಶ ಉಳ್ಳ ಅಕ್ಕಿಯನ್ನು ಮಿಶ್ರಣ ಮಾಡಿ ವಿತರಣೆ ಮಾಡುತ್ತಿದೆ. ಸಾರ್ವಜನಿಕರು ತಪ್ಪು ಮಾಹಿತಿಗೆ ಕಿವಿ ಕೊಡದೆ ಪಡಿತರ ಅಕ್ಕಿಯನ್ನು ಮಾರಾಟ ಮಾಡದೆ ಊಟಕ್ಕೆ ಬಳಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಜಿಲ್ಲಾ ಉಪನಿರ್ದೇಶಕ ಮಲ್ಲಿಕಾರ್ಜುನ ಉದಯವಾಣಿ ಜೊತೆ ಮಾತನಾಡಿದಾಗ ತಿಳಿಸಿದ್ದಾರೆ.