Advertisement

ಎಸಿಬಿ ಮಧ್ಯಸ್ಥಿಕೆಯಲ್ಲಿ ರೈತರಿಗೆ ಬಾಕಿ ಪರಿಹಾರ ಧನ ವಿತರಣೆ

10:25 AM Jul 28, 2020 | Suhan S |

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡಿದ್ದ ರೈತರಿಗೆ ನೀಡಬೇಕಾಗಿದ್ದ ಬಾಕಿ ಪರಿಹಾರ ಧನದ ಚೆಕ್‌ಗಳನ್ನು ಎಸಿಬಿ ಇಲಾಖೆಯ ಮಧ್ಯಸ್ಥಿಕೆಯಲ್ಲಿ ಫಲಾನುಭವಿಗಳಿಗೆ ಸೋಮವಾರ ವಿತರಿಸಲಾಯಿತು.

Advertisement

ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಕೆಲ ತಿಂಗಳುಗಳ ಹಿಂದೆ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್‌ ಕೊಡಲು ಆಲಮಟ್ಟಿಯ ವಿಶೇಷ ಭೂಸ್ವಾಧಿಧೀನಾಕಾರಿಗಳ ಕಚೇರಿಗೆ ಕಳುಹಿಸಲಾಗಿತ್ತು. ಆದರೂ ಕೂಡ ಅವುಗಳನ್ನು ಸಂಬಂಧಿಸಿದ ರೈತರಿಗೆ ನೀಡದೇ ಕಚೇರಿಯಲ್ಲಿಟ್ಟುಕೊಂಡು ರೈತರಿಗೆ ಸತಾಯಿಸಲಾಗುತ್ತಿತ್ತು. ಎಲ್ಲ ಚೆಕ್‌ಗಳನ್ನು ಸಾಂಕೇತಿಕವಾಗಿ ಕೆಲ ರೈತರಿಗೆ ಪರಿಹಾರ ಧನ ಚೆಕ್‌ ಅನ್ನು ಅಪರ ವಿಶೇಷ ಭೂಸ್ವಾಧೀನಾಧಿಕಾರಿ ಇಸ್ಮಾಯಿಲ್‌ಸಾಬ ಶಿರಹಟ್ಟಿ ಹಾಗೂ ಎಸಿಬಿ ಡಿವೈಎಸ್ಪಿ ಎಲ್‌.ವೇಣುಗೋಪಾಲ ವಿತರಿಸಿದರು.

ನೀರಾವರಿ ಉದ್ದೇಶದಿಂದ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂ ಸ್ವಾಧೀನಪಡಿಸಿಕೊಂಡು ಪರಿಹಾರ ವಿತರಣೆಯಲ್ಲಿ ಬಾಕಿ ಉಳಿದ 76 ರೈತರಿಗೆ ಒಟ್ಟು 83,25,379 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಎಸಿಬಿ ಪೊಲೀಸರು ತಿಳಿಸಿದರು. ಪರಿಹಾರ ವಿತರಣೆಯಲ್ಲಿ ಭೂಸ್ವಾಧೀನಾಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಎಸಿಬಿಗೆ ವಿಜಯಪುರದ ನ್ಯಾಯವಾದಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ವಲಯದ ಎಸಿಬಿ ಎಸ್ಪಿ ಬಿ.ಎಸ್‌. ನೇಮಗೌಡ ಮಾರ್ಗದರ್ಶನದಲ್ಲಿ ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಆಗಮಿಸಿ ಬಾಕಿ ಪರಿಹಾರ ವಿತರಿಸುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಒಟ್ಟು ಮೂವರ ಮೇಲೆ ಪ್ರಕರಣ ದಾಖಲಾಗಿದ್ದು ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಇನ್ನೂ ಇಬ್ಬರು ಕಚೇರಿಗೂ ಬಾರದೇ ಮನೆಯಲ್ಲಿಯೂ ಇಲ್ಲದೇ ತಲೆಮರೆಸಿಕೊಂಡಿದ್ದು ಅವರುಗಳನ್ನೂ ಶೀಘ್ರವಾಗಿ ಬಂಧಿಸಲಾಗುವದು ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಎಸಿಬಿ ಅಧಿಕಾರಿಗಳಾದ ಪರಮೇಶ್ವರ ಕವಟಗಿ, ಹರಿಶ್ಚಂದ್ರ, ಸುರೇಶ ಜಾಲಗೇರಿ, ಈರಣ್ಣ ಕನ್ನೂರ, ಮಾಧವಸಿಂಗ್‌ ರಜಪೂತ, ಅಶೋಕ ಸಿಂಧೂರ, ಎಂ.ಎಸ್‌. ಸಾಲಗೊಂಡ, ಮಹೇಶ ಪೂಜಾರಿ, ಚನ್ನನಗೌಡ ಹೆಳವರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next