ಸಿಂಧನೂರು: ಕೋವಿಡ್‌ನಿಂದ ಸಂಕಷ್ಟ ಪರಿಸ್ಥಿತಿ ಎದುರಾಗಿರುವುದರಿಂದ ಬ್ಲಾಕ್ ಕಾಂಗ್ರೆಸ್‌ನಿಂದ ರೋಗಿಗಳಿಗೆ ಪೌಷ್ಟಿಕ ಆಹಾರ ಹಂಚಿಕೆ ಮಾಡುವುದಕ್ಕೆ ಚಾಲನೆ ನೀಡಲಾಗಿದೆ ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ರೋಗಿಗಳಿಗೆ ಪೌಷ್ಟಿಕ ಆಹಾರ ಹಂಚಿದ ಬಳಿಕ ಅವರು ಮಾತನಾಡಿದರು. ತಾಲೂಕಿನಲ್ಲಿ ರೋಗಿಗಳಿಗೆ ರೆಮ್ ಡೆಸಿವಿಯರ್ ಇಂಜೆಕ್ಷನ್, ಆಕ್ಸಿಜನ್, ವೆಂಟಿಲೇಟರ್, ಚಿಕಿತ್ಸೆ ಸೌಲಭ್ಯ ಸೂಕ್ತವಾಗಿ ದೊರೆಯುತ್ತಿಲ್ಲ. ಈ ಎಲ್ಲ ಸೌಲಭ್ಯ ಸಾರ್ವಜನಿಕ ಆಸ್ಪತ್ರೆಗೆ ಕಲ್ಪಿಸಬೇಕು. ಆಕ್ಸಿಜನ್ ಸಮಸ್ಯೆ ಉಲ್ಬಣಿಸದಂತೆ ಈಗನಿಂದಲೇ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿನ ಕುಂದುಕೊರತೆ ಆಲಿಸಿ, ಸರಿಪಡಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರದಿಂದಲೇ ಪ್ರತಿ ನಿತ್ಯ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ. ಹಾಲು, ಬ್ರೆಡ್, ಹಣ್ಣು, ಮೊಟ್ಟೆ ಸೇರಿದಂತೆ ಅಗತ್ಯ ಪೌಷ್ಟಿಕ ಆಹಾರ ಪ್ರತಿ ರೋಗಿಗೂ ತಲುಪಿಸಲಾಗುವುದು ಎಂದರು. ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿಮಲಿಕ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ವೈ., ಮುಖ್ಯ ವೈದ್ಯಾಧಿ ಕಾರಿ ಡಾ| ಹನುಮಂತರೆಡ್ಡಿ, ಮುಖಂಡರಾದ ಆಲಂಬಾಷಾ, ತಿಮ್ಮಯ್ಯ ಭಂಗಿ, ಸುರೇಶ ಶೇs…, ಆರ್.ಸಿ. ಪಾಟೀಲ್, ಮಹ್ಮದ್ ಇಕ್ಬಾಲ್, ರಾಜಶೇಖರಗೌಡ, ಸಿದ್ದಲಿಂಗ, ಕಾಶಿಂ ದಢೇಸುಗೂರು, ಹುಸೇನಿ ಇತರರು ಇದ್ದರು.
ಅಲೆಮಾರಿಗಳಿಗೆ ಆಹಾರ ವಿತರಣೆ: ಕರ್ಫ್ಯೂ ಬಳಿಕ ಇದೀಗ ಕೊರೊನಾ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಕೂಲಿಕಾರರು, ಬಡ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ತುರ್ತು ಪರಿಹಾರವಾಗಿ ರಾಜ್ಯ ಸರ್ಕಾರ ಸಹಾಯಧನ ಘೋಷಿಸುವಂತೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದ್ರಾಕ್ಷಾಯಣಿ ಬಸನಗೌಡ ಮಾ.ಪಾ. ಒತ್ತಾಯಿಸಿದರು. ನಗರದಲ್ಲಿ ಸೋಮವಾರ ವೈಯಕ್ತಿಕವಾಗಿ ಅಲೆಮಾರಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊರೊನಾದಿಂದ ದುಡಿಮೆ ಇಲ್ಲದೇ ಮನೆಯಲ್ಲಿ ಕುಳಿತವರಿಗೆ ಒಪ್ಪೊತ್ತಿನ ಊಟಕ್ಕೂ ಕಷ್ಟವಾಗಿದೆ. ಈ ಸಂದರ್ಭ ಅರಿತು ಸರ್ಕಾರಗಳು ಅವರ ನೆರವಿಗೆ ಧಾವಿಸಬೇಕು. ಲಾಕ್‌ಡೌನ್‌ನಲ್ಲಿ ಅವರ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಿ, ಸಹಾಯಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಅಲೆಮಾರಿ ಕುಟುಂಬಗಳಿಗೆ ಅಕ್ಕಿ, ಬೇಳೆ, ದಿನಸಿ ಸಾಮಗ್ರಿ ಉಚಿತವಾಗಿ ಹಂಚಿಕೆ ಮಾಡಲಾಯಿತು. ಈ ವೇಳೆ ಶ್ರೀ ಶಕ್ತಿ ರಕ್ತ ಭಂಡಾರದ ಅಧ್ಯಕ್ಷ ಸೋಮನಗೌಡ ಬಾದರ್ಲಿ, ಬಸನಗೌಡ ಮಾಲಿ ಪಾಟೀಲ್, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಇತರರಿದ್ದರು.