ಕೋಲಾರ: ರೈತರಿಗೆ ಕಳಪೆ ಮಲ್ಚಿಂಗ್ ಪೇಪರ್ ಡ್ರಿಪ್ ವಿತರಣೆ ಮಾಡಿ, ಬಿಲ್ ನೀಡದೆ ವಂಚನೆ ಮಾಡುತ್ತಿರುವ ಕಂಪನಿ ಹಾಗೂ ಅಂಗಡಿ ಮಾಲಿಕರ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವಂತೆ ರೈತ ಸಂಘದಿಂದ ಕಳಪೆ ಪೇಪರ್ ಡ್ರಿಪ್ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಿ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಜಿಲ್ಲಾಡಳಿತಕ್ಕೆ ಕೂಗಳತೆ ದೂರದಲ್ಲಿರುವ ಟಮಕ ಕೈಗಾರಿಕಾ ಪ್ರದೇಶದಲ್ಲಿ ರೈತರಿಗೆ ಡ್ರಿಪ್ ಮಲ್ಚಿಂಗ್ ಪೇಪರ್ ನೀಡುವ ಕಂಪನಿ ಹಾಗೂ ಅಂಗಡಿಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ರೈತರು ಖರೀದಿ ಮಾಡುವ ಯಾವುದೇ ವಸ್ತುವಿಗೆ ಬಿಲ್ ನೀಡದೆ ವಂಚನೆ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವುದಕ್ಕೆ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿಗಳ ಪರ ಅಧಿಕಾರಿಗಳು ಕೆಲಸ: ಪೂರ್ವಜರ ಕಾಲದ ಕೃಷಿ ಕ್ಷೇತ್ರ ಕಣ್ಮರೆಯಾಗಿ ಆಧುನಿಕತೆ ಹೆಚ್ಚಾದಂತೆ ಕೃಷಿ ಮಾಡಲು ಭೂಮಿಗೂ ಪೇಪರ್ ಒದಿಕೆ ಮಡುವ ಮುಖಾಂತರ ಕೃಷಿ ಮಾಡಬೇಕಾದ ಮಟ್ಟಕ್ಕೆ ಬಹುರಾಷ್ಟ್ರೀಯ ಕಂಪನಿಗಳು ವಿತರಣೆ ಮಾಡುವ ಗೊಬ್ಬರ ಕೀಟನಾಶಕಗಳಿಂದ ಕೃಷಿ ಭೂಮಿ ಸಂಪೂರ್ಣವಾಗಿ ಬರುಡಾಗುವ ಭೀತಿಯಲ್ಲಿ ರೈತರಿದ್ದಾರೆ. ಭೂಮಿಯ ಫಲವತ್ತತೆಯ ನೆಪವನ್ನೇ ಇಟ್ಟುಕೊಂಡು ಗಲ್ಲಿಗೊಂದು ಮಲಿcಂಗ್ ಪೇಪರ್ ಡ್ರಿಪ್ ಕಂಪನಿಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ರೈತರಿಗೆ ಅವಶ್ಯಕತೆ ಇರುವ ಕೃಷಿ ಸಾಮಗ್ರಿಗಳ ಮಾರಾಟ ಮಾಡುವ ಮಾಲಿಕರು, ತಮಗೆ ಇಷ್ಟ ಬಂದ ರೀತಿ ಬೆಲೆ ನಿಗದಿ ಮಾಡುತ್ತಿದ್ದರೂ ಅದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಕಣ್ಮರೆಯಾಗಿ ಕಂಪನಿಗಳ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಬೇಡಿಕೆ ಹೆಚ್ಚಾದಂತೆ ಗುಣಮಟ್ಟ ಕಡಿಮೆ: ಒಂದು ವರ್ಷದ ಹಿಂದೆ ರೈತರ ಕೊಳ್ಳುತ್ತಿದ್ದ ಮಲಿcಂಗ್ ಪೇಪರ್ ಹನಿನೀರಾವರಿ ಸಲಕರಣೆಗಳು ಗುಣಮಟ್ಟದಿಂದ ಕೂಡಿದ್ದು, ಒಂದು ಬೆಳೆಗೆ ಹಾಕಿದರೆ ಕನಿಷ್ಟ ಎರಡು-ಮೂರು ಬೆಳೆಯನ್ನು ತೆಗೆದುಕೊಳ್ಳಬಹುದಾಗಿತ್ತು. ಆದರೆ, ಇತ್ತೀಚೆಗೆ ಬೇಡಿಕೆ ಹೆಚ್ಚಾದಂತೆ ಡ್ರಿಪ್ ಹಾಗೂ ಮಲ್ಚಿಂಗ್ ಮೆಸ್ ಕಂಪನಿಗಳು ಗುಣಮಟ್ಟವನ್ನು ಕಡಿಮೆ ಮಾಡಿ ರೈತರನ್ನು ವಂಚನೆ ಮಾಡುತ್ತಿದ್ದು, ಹಾಕಿದ ಪೇಪರ್ ಒಂದೇ ವಾರಕ್ಕೆ ಸಂಪೂರ್ಣವಾಗಿ ಮಳೆ, ಗಾಳಿ, ಬಿಸಿಲಿಗೆ ಹಾಳಾಗುತ್ತಿವೆ. ಕೇಳಿದರೆ ನೀವು ನಮ್ಮ ಅಂಗಡಿಯಲ್ಲಿ ಖರೀದಿ ಮಾಡಿಲ್ಲ. ಬಿಲ್ ಕೊಡಿ ಎಂದು ರೈತರ ಮೇಲೆಯೇ ದೌರ್ಜನ್ಯ ಮಾಡುತ್ತಾರೆ ಎಂದು ಮಾಲಿಕರ ವಿರುದ್ಧ ದೂರು ನೀಡಿದರು.
ರೈತರ ಬದುಕು ಕಷ್ಟ: ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಒಂದು ಎಕರೆ ಕೃಷಿ ಮಾಡಬೇಕಾದರೆ ದುಬಾರಿಯಾಗಿರುವ ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ಜೊತೆಗೆ ಒಂದು ಎಕರೆಗೆ ಪೇಪರ್ ಹಾಗೂ ಡ್ರಿಪ್ ಅಳವಡಿಸಲು 1 ಲಕ್ಷ ಖರ್ಚು ಬರುತ್ತದೆ. ಒಟ್ಟಾರೆಯಾಗಿ ಎಲ್ಲಾ ಸೇರಿ 3 ಲಕ್ಷ ಇಲ್ಲದೆ ಒಂದು ಎಕರೆ ಬೆಳೆ ಮಾಡಲು ಸಾಧ್ಯವಿಲ್ಲ. ರೈತರ ಅದೃಷ್ಟ ಚೆನ್ನಾಗಿದ್ದರೆ, ಹಾಕಿದ ಬಂಡವಾಳ ಬರುತ್ತದೆ.ಇಲ್ಲವಾದರೆ ಮನೆಯಲ್ಲಿ ಹೆಣ್ಣು ಮಕ್ಕಳ ಒಡವೆಯನ್ನು ಗಿರಿವಿ ಇಟ್ಟು ಸಾಲ ತೀರಿಸಬೇಕಾದ ಮಟ್ಟಕ್ಕೆ ರೈತರ ಪರಿಸ್ಥಿತಿ ಇದೆ ಎಂದು ಮನವರಿಕೆ ಮಾಡಿದರು.
ವಂಚನೆ ಮಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ: ಡ್ರಿಪ್ ಹಾಗೂ ಮಲಿcಂಗ್ ಪೇಪರ್‌ಗೆ ಸರ್ಕಾರದಿಂದ ಶೇ.90ರಷ್ಟು ಸಬ್ಸಿಡಿ ನೀಡುತ್ತಿರುವುದು ನಿಜವಾದ ರೈತರಿಗಲ್ಲ. ಎಲ್ಲಾ ಸಬ್ಸಿಡಿ ಅಧಿಕಾರಿಗಳ ಮತ್ತು ಡ್ರಿಪ್ ಕಂಪನಿಗಳ ಒಳ ಒಪ್ಪಂದಕ್ಕೆ ರೈತರು ವಂಚನೆಗೆ ಒಳಗಾಗುತ್ತಿದ್ದಾರೆ. ಪ್ರತಿ ರೈತ ಅಳವಡಿಸುವ ಡ್ರಿಪ್ ಸಂದರ್ಭದಲ್ಲಿ ಜಮೀನು ವೀಕ್ಷಣೆ ಮಾಡುವ ಅಧಿಕಾರಿಗಳು ಸಮ್ಮುಖದಲ್ಲಿ ದಲ್ಲಾಳಿಗಳು ಒಂದು ಅಥವಾ ಎರಡು ರೋಲ್ ಗುಣಮಟ್ಟ ಡ್ರಿಪ್ ಅಳವಡಿಸಿ,
ಆ ನಂತರ ಕಳಪೆ ಹಾಗೂ ಮೀಟರ್‌ಗಳಲ್ಲಿ (ಅಳತೆ) ರೈತರನ್ನು ವಂಚನೆ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕಿರಣ್, ಮುನಿಯಪ್ಪ, ಸಂದೀಪ್, ಸುರೇಶ್, ಕಿರಣ್, ವೇಣು, ವಿಭಾಗೀಯ ಕಾರ್ಯದರ್ಶಿ ಪಾರುಕ್‌ಪಾಷ, ಬಂಗಾರಿ ಮಂಜು, ಭಾಸ್ಕರ್, ಸುನಿಲ್ , ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ನಾರಾಯಣಗೌಡ, ಮಾಸ್ತಿ ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಟರ್, ಶ್ರೀನಿವಾಸ್, ಚಂದ್ರಪ್ಪ ಹಾಜರಿದ್ದರು.
ಸಂಬಂಧಪಟ್ಟ ಅಧಿಕಾರಿಗಳು, ಕಂಪನಿ ಹಾಗೂ ರೈತ ಸಂಘಟನೆಗಳ ಮುಖಂಡರ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವ ಜೊತೆಗೆ ಬಿಲ್ ನೀಡದ ಅಂಗಡಿಗಳ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುತ್ತೇವೆ.
● ಡಾ.ಸ್ನೇಹ, ಅಪರ ಜಿಲ್ಲಾಧಿಕಾರಿ