ಹಾವೇರಿ: ಜಿಲ್ಲೆಯಲ್ಲಿರುವ 12,219 ವಲಸಿಗ ಫಲಾನುಭವಿಗಳಿಗೆ ಮೇ ಹಾಗೂ ಜೂನ್ ತಿಂಗಳ ಆಹಾರಧಾನ್ಯವನ್ನು ಮೇ 26 ರಿಂದ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ವಲಸಿಗ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆತ್ಮ ನಿರ್ಭರ ಭಾರತ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಹಾಗೂ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿ ಇಲ್ಲದಿರುವ ವಲಸಿಗರಿಗೆ ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಮೇ ಮಾಹೆ ಪಡಿತರವನ್ನು ಮೇ 26ರಿಂದ 31ರ ವರೆಗೆ ಹಾಗೂ ಜೂನ್ ಮಾಹೆ ಪಡಿತರವನ್ನು ಜೂ. 1 ರಿಂದ 10ರ ವರೆಗೆ ವಿತರಣೆ ಮಾಡಲಾಗುವುದು. ಪ್ರತಿ ವ್ಯಕ್ತಿಗೆ ಐದು ಕೆಜಿ ಅಕ್ಕಿ ಹಾಗೂ ಕೇಂದ್ರ ಸರ್ಕಾರ ಹಂಚಿಕೆ ಪ್ರಮಾಣದಂತೆ ಕಡಲೆಕಾಳನ್ನು ವಿತರಿಸಲಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿನ ವಲಸಿಗರಿಗೆ ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ. ಕಡಲೆಕಾಳು ವಿತರಣೆಗೆ ಸರ್ಕಾರದ ಸೂಚನೆಗಳನ್ವಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮೇ ಮಾಹೆಯಲ್ಲಿ ಆಹಾರಧಾನ್ಯ ಪಡೆಯದೇ ಇದ್ದಲ್ಲಿ ಒಟ್ಟಿಗೆ ಜೂನ್ ಮಾಹೆಯಲ್ಲಿ ಎರಡು ತಿಂಗಳ ಅಕ್ಕಿ (10 ಕೆಜಿ) ಹಾಗೂ ಕಡಲೆಕಾಳು ಪಡೆಯಬಹುದು. ಜಿಲ್ಲೆಯಲ್ಲಿನ 12,219 ವಲಸಿಗ ಫಲಾನುಭವಿಗಳಿಗೆ 1221.90 ಕ್ವಿಂಟಲ್ ಅಕ್ಕಿಯನ್ನು ಹಂಚಿಕೆ ಮಾಡಲು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ, ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ಮತ್ತು ಒಂದು ತಾಲೂಕಿನಿಂದ ಮತ್ತೂಂದು ತಾಲೂಕಿಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿನ ವಲಸಿಗ ಫಲಾನುಭವಿಯು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಯಾಗಿರಬಾರದು. ಆಹಾರಧಾನ್ಯ ಪಡೆಯಬಯಸುವ ಫಲಾನುಭವಿ ತನ್ನ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಬೇಕು. ನ್ಯಾಯಬೆಲೆ ಅಂಗಡಿಯವರು ತಂತ್ರಾಂಶದನ್ವಯ ಪರಿಶೀಲಿಸಿ ಪಡಿತರ ವಿತರಣೆಗೆ ಕ್ರಮ ವಹಿಸಲಿದ್ದಾರೆ. ವಲಸಿಗ ಫಲಾನುಭವಿಯು ಸ್ವಂತ ಮನೆ ಹೊಂದಿರಬಾರದು ಹಾಗೂ ಆದಾಯ ತೆರಿಗೆ ಪಾವತಿಸುವವರಾಗಿರಬಾರದು ಎಂದು ತಿಳಿಸಿದ್ದಾರೆ.
ತಪ್ಪು ಮಾಹಿತಿ ನೀಡಿ ಆಹಾರಧಾನ್ಯ ಪಡೆದುಕೊಂಡಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ದಂಡ ಅಥವಾ ದಂಡದ ಜೊತೆಗೆ ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.