ಉಡುಪಿ: ಜಿಲ್ಲೆಯಲ್ಲಿ ಹೊಟೇಲ್, ಕಾರ್ಖಾನೆ, ಕಟ್ಟಡ ಕಾರ್ಮಿಕರು ಹಾಗೂ ಇನ್ನಿತರ ಯಾವುದೇ ಸಂಸ್ಥೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ, ಕೇಂದ್ರ ಸರಕಾರದ ಆತ್ಮ ನಿರ್ಭರ್ ಭಾರತ್ ಯೋಜನೆ ಅಡಿಯಲ್ಲಿ ಮೇ ಮತ್ತು ಜೂನ್ ಮಾಹೆಯಲ್ಲಿ ಉಚಿತವಾಗಿ ಆಹಾರಧಾನ್ಯವನ್ನು ಹತ್ತಿರದ ನ್ಯಾಯಬೆಲೆ ಅಂಗಡಿ
ಯಲ್ಲಿ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಆದೇಶದಂತೆ ಈ ಯೋಜನೆಯಡಿ ಬರುವ ವಲಸೆ ಕಾರ್ಮಿಕರು ರಾಜ್ಯದಲ್ಲಿ ಮತ್ತು ಬೇರಾವುದೇ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಚೀಟಿ ಹೊಂದಿರಬಾರದು. ಆಹಾರಧಾನ್ಯ ವಿತರಿಸುವಾಗ ಇದನ್ನು ಇಲಾಖಾ ತಂತ್ರಾಂಶದಲ್ಲಿ ಪರಿಶೀಲಿಸಿ ಖಾತ್ರಿ ಪಡಿಸಿಕೊಂಡು ಸಂಬಂಧಿಸಿದ ಫಲಾನು ಭವಿಯ ಆಧಾರ್ ಸಂಖ್ಯೆಯ ಮುಖಾಂತರ ಅವರ ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಬಂದ ಅನಂತರ ಒಟಿಪಿಯನ್ನು ದಾಖಲಿಸಿ ಉಚಿತವಾಗಿ ಪಡಿತರ ವಿತರಿಸಲಾಗುವುದು.
ಸಂಬಂಧಿಸಿದ ಫಲಾನುಭವಿ ಆಹಾರಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವಾಗ ಆಧಾರ್ ಕಾರ್ಡ್ ತರಬೇಕು. ಮೇ-2020ರ ಮಾಹೆಯ ಹಂಚಿಕೆಯನ್ವಯ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯನ್ನು ಮೇ 26 ರಿಂದ 31 ರ ವರೆಗೆ ಹಾಗೂ ಜೂನ್ ತಿಂಗಳಲ್ಲಿ ಜೂನ್ 1ರಿಂದ 10 ರ ವರೆಗೆ ವಿತರಿಸಲಾಗುವುದು. ಒಂದು ವೇಳೆ ಮೇ ತಿಂಗಳಿನಲ್ಲಿ, ಆಹಾರ ಧಾನ್ಯವನ್ನು ಪಡೆಯದ ವಲಸೆ ಫಲಾನುಭವಿ ಜೂನ್ ತಿಂಗಳಲ್ಲಿ ಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕಡಲೆ ಕಾಳು ಉಚಿತವಾಗಿ ಪಡೆಯಲು ಅರ್ಹರಿರುತ್ತಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.