ಗೋಕಾಕ: ಅರಂಭಾವಿ ಮತಕ್ಷೇತ್ರದಲ್ಲಿ ಈವರೆಗೆ ಕಾರ್ಮಿಕರು, ಅಲೆಮಾರಿಗಳು ಸೇರಿದಂತೆ 84,500 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ ಎಂದು ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಏ. 25ರಿಂದ ಅರಭಾಂವಿ ಕ್ಷೇತ್ರದ ಪ್ರತಿ ಗ್ರಾಮಗಳ ಪ್ರತಿ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ. ಹೊರಗಿನಿಂದ ದುಡಿಯಲಿಕ್ಕೆ ಬಂದ ಕಾರ್ಮಿಕ ಕುಟುಂಬಗಳು, ಅಲೆಮಾರಿಗಳ ಸಮೀಕ್ಷೆ ನಡೆದಿರಲಿಲ್ಲ. ಈ ಕುಟುಂಬಗಳಿಗೂ ಅನುಕೂಲವಾಗಲು ಸೋಮವಾರ 8242 ಕಿಟ್ ಗಳನ್ನು ಟೀಂ ಎನ್‌ಎಸ್‌ಎಫ್ ವಿತರಿಸಿದೆ ಎಂದು ತಿಳಿಸಿದ್ದಾರೆ.
ಇದರಿಂದ ಅರಭಾಂವಿ ಕ್ಷೇತ್ರದಲ್ಲಿ ಒಟ್ಟಾರೆ 84,500 ಕುಟುಂಬಗಳಿಗೆ ದಿನಬಳಕೆಯ ದಿನಸಿ ವಸ್ತುಗಳ ಕಿಟ್‌ಗಳನ್ನು ನೀಡಿದಂತಾಗಿದೆ. ಕ್ಷೇತ್ರದಲ್ಲಿ 2.50 ಲಕ್ಷ ಮಾಸ್ಕ್ ಸಾರ್ವಜನಿಕರಿಗೆ ನೀಡಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ: ಕಿಟ್‌ಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಶ್ರಮಿಸಿರುವ ಎಲ್ಲ ಅಧಿಕಾರಿಗಳ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿ ಹಂತದಲ್ಲೂ ಶ್ರಮಿಸಿರುವ ಆರೋಗ್ಯ, ಕಂದಾಯ, ಪೊಲೀಸ್, ಪಂಚಾಯತರಾಜ್, ಶಿಕ್ಷಣ ಇಲಾಖೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಕೋವಿಡ್ 19 ವಾರಿಯರ್, ಜನಪ್ರತಿನಿಧಿಗಳು-ಮುಖಂಡರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂಜಾಗ್ರತೆ ವಹಿಸಿ: ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಈವರೆಗೆ ಕೊರೊನಾ ಕಾಣಿಸಿಲ್ಲ. ಈಗ ಲಾಕ್‌ಡೌನ್ ಸಡಿಲಿಕೆಯಾಗಿದ್ದರಿಂದ ನಿರ್ಲಕ್ಷ್ಯ ಮಾಡಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ.