ಹೊಳಲ್ಕೆರೆ: ತಾಲೂಕಿನಲ್ಲಿ ಮೊದಲ ಹಂತದಲ್ಲಿ 180 ರೈತರಿಗೆ ಬಗರ್‌ಹುಕುಂ ಹಕ್ಕು ಪತ್ರ ವಿತರಣೆಯನ್ನು ಇನ್ನೊಂದು ತಿಂಗಳಲ್ಲಿ ಮಾಡಲಾಗುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಶಿವಮೊಗ್ಗ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಕಂದಾಯ ಇಲಾಖೆ, ಜಿಲ್ಲಾ ಮತ್ತು ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪಿಂಚಣಿ ಆದಾಲತ್ ಹಾಗೂ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಣೆ ಮತ್ತು ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿರುವ ಸಾವಿರಾರು ರೈತರು ಅಮೃತಮಹಲ್ ಕಾವಲ್, ಅಂಜನಾಪುರ ಕಾವಲ್, ತಾಳಿಕಟ್ಟೆ ಕಾವಲ್, ಅರೆಹಳ್ಳಿ ಕಾವಲ್, ಗುಂಡೇರಿ ಕಾವಲ್‌ಗಳಲ್ಲಿ ಜಮೀನುಗಳನ್ನು ಉಳುಮೆ ಮಾಡುತ್ತಿದ್ದಾರೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದರೂ ಹಕ್ಕುಪತ್ರ ವಿತರಣೆ ಮಾಡಿಲ್ಲ. ಈಗ ಸರಕಾರದ ವಿಶೇಷ ಆದೇಶದನ್ವಯ ಹಕ್ಕುಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗೋಮಾಳ, ಅರಣ್ಯಪ್ರದೇಶ ಸೇರಿದಂತೆ ಸರಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ಎಲ್ಲರಿಗೂ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು.
ಇಂದು ವೃದ್ಧರಿಗೆ ಪಿಂಚಣಿ ಬಹಳ ಮುಖ್ಯ. ಏಕೆಂದರೆ ಇಳಿವಯಸ್ಸಿನಲ್ಲಿ ತಂದೆ-ತಾಯಿಗಳಿಗೆ ಮಕ್ಕಳ ಅಸರೆ ಕಡಿಮೆ. ಹಾಗಾಗಿ ವೃದ್ಧರಿಗೆ ತೊಂದರೆಯಾಗದಂತೆ ಸರಕಾರ ಪಿಂಚಣಿ ಸೌಲಭ್ಯ ಕಲ್ಪಿಸಿದೆ. ಅಂಗವಿಕಲರು, ವಿಧವೆಯರ ಸಂಕಷ್ಟದ ಜೀವನಕ್ಕೆ ಮುಕ್ತಿ ನೀಡುವ ಉದ್ದೇಶದಿಂದ ಮಾಸಾಶನ ನೀಡಲಾಗುತ್ತಿದೆ. ತಾಲೂಕಿನಲ್ಲಿ ಇಲ್ಲಿಯವರೆಗೆ ವಿಧವೆ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಸಂಧ್ಯಾ ಸುರಕ್ಷಾ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ 36 ಸಾವಿರ ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕಸಬಾ ಹೋಬಳಿ ಸಂದ್ಯಾ ಸುರಕ್ಷಾ ಯೋಜನೆಯಲ್ಲಿ 34, ಅಂಗವಿಕಲ ಯೋಜನೆಯಲ್ಲಿ 6, ವಿಧವಾ ವೇತನ 9, ವೃದ್ಧಾಪ್ಯ ವೇತನ 55 ಸೇರಿದಂತೆ ಒಟ್ಟು 104, ತಾಳ್ಯ ಹೋಬಳಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 23, ಅಂಗವಿಕಲ ಯೋಜನೆಯಲ್ಲಿ 5, ವಿಧವಾ ವೇತನ 8, ವೃದ್ಧಾಪ್ಯ ವೇತನ 53 ಸೇರಿ ಒಟ್ಟು 89 ಜನರಿಗೆ ಆದೇಶ ಪ್ರತಿ ವಿತರಿಸಲಾಯಿತು. ರಾಮಗಿರಿ ಹೋಬಳಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 31, ಅಂಗವಿಕಲ ಯೋಜನೆಯಲ್ಲಿ 2, ವಿಧವಾ ವೇತನ 9, ವೃದ್ಧಾಪ್ಯ ವೇತನ 21 ಸೇರಿ ಒಟ್ಟು 63, ಬಿ.ದುರ್ಗ ಹೋಬಳಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 8, ಅಂಗವಿಕಲ ಯೋಜನೆಯಲ್ಲಿ 1, ವಿಧವಾ ವೇತನ 2, ವೃದ್ಧಾಪ್ಯ ವೇತನ 9 ಸೇರಿದಂತೆ ಒಟ್ಟು 20 ಫಲಾನುಭವಿಗಳಿಗೆ ಆದೇಶ ಪ್ರತಿಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಗರ್‌ಹುಕುಂ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ, ದಗ್ಗೆ ಶಿವಪ್ರಕಾಶ್, ಹಾಲಮ್ಮ, ಭೂಮಾಪನ ಇಲಾಖೆಯ ನಾಗಭೂಷಣ, ಬಗರ್ ಹುಕುಂ ಕಮಿಟಿ ತಿಪ್ಪೇಸ್ವಾಮಿ, ತಾಳ್ಯ ಹೋಬಳಿಯ ಉಪ ತಹಶೀಲ್ದಾರ್ ಅಶೋಕ್, ರಾಜಸ್ವ ನಿರೀಕ್ಷಕ ಶಿವಾನಂದಮೂರ್ತಿ, ರಾಮಗಿರಿ ಹೋಬಳಿಯ ಮಂಜುನಾಥ್, ನಾಗರಾಜ್, ಬಿ.ದುರ್ಗ ಹೋಬಳಿಯ ಸುನೀಲ್ ರಾಜನ್, ಸಿದ್ದಪ್ಪ, ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಪ್ರಶಾಂತ್, ಆನಂದ್, ಹರೀಶ್, ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.
ಸಹಾಯವಾಣಿ ಸೌಲಭ್ಯ ಸದ್ಬಳಕೆಯಾಗಲಿ
ರಾಜ್ಯ ಸರಕಾರ ‘ಹಲೋ ಕಂದಾಯ ಸಚಿವರೇ’ ಎಂಬ ಸಹಾಯವಾಣಿ ತೆರೆದಿದೆ. ದೂರವಾಣಿ ಸಂಖ್ಯೆ: 155245ಗೆ ಕರೆ ಮಾಡಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮಾಹಿತಿ ನೀಡಿದರೆ ಸಾಕು. ನವೋದಯ ಅಪ್ಲಿಕೇಶನ್ ಮೂಲಕ ಅರ್ಜಿ ಹಾಕಿದಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಹೋಗುತ್ತದೆ. ಅವರು 72 ಗಂಟೆ ಒಳಗೆ ಅರ್ಜಿದಾರರ ಮನೆ ಬಳಿ ಹೋಗಿ ದಾಖಲಾತಿ ಪಡೆದು ಕಂದಾಯ ನಿರೀಕ್ಷಕರಿಗೆ ಮಾಹಿತಿ ನೀಡಿ ಅರ್ಜಿದಾರರಿಗೆ ದಾಖಲಾತಿ ಒದಗಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದು ತಹಶೀಲ್ದಾರ್ ರಮೇಶ ಆಚಾರಿ ತಿಳಿಸಿದರು.