Advertisement

ವರ್ಷಾಂತ್ಯಕ್ಕೆ 5 ಸಾವಿರ ನಿವೇಶನ ಹಂಚಿಕೆ

12:57 PM Oct 17, 2017 | Team Udayavani |

ಮೈಸೂರು: ವರ್ಷಾಂತ್ಯದ ವೇಳೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರು ನಗರದ ನಿವೇಶನ ರಹಿತರಿಗೆ 5 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮುಡಾ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರವೀಂದ್ರನಾಥ ಠಾಗೋರ್‌ ನಗರ (ಆರ್‌.ಟಿ.ನಗರ) ಬಡಾವಣೆ ನಿವೇಶನಗಳ ಸಂಖ್ಯೆಯನ್ನು ಲಾಟರಿ ಮೂಲಕ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ, ಫ‌ಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಬಹಳ ವರ್ಷಗಳ ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಮಾಡುತ್ತಿದೆ. ಹೀಗಾಗಿ ವರ್ಷಾಂತ್ಯದೊಳಗೆ 5 ಸಾವಿರ ನಿವೇಶನ ಹಂಚಿಕೆ ಮಾಡುವಂತೆ ಮುಡಾ ಆಯುಕ್ತರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಆರ್‌.ಟಿ.ನಗರ ಬಡಾವಣೆಗೆ 6 ತಿಂಗಳ ಹಿಂದೆ ಬಂದು ಪರಿಶೀಲನೆ ಮಾಡಿದ್ದೆ. 2270 ನಿವೇಶನಗಳನ್ನು ಈ ಬಡಾವಣೆಯಲ್ಲಿ ರಚಿಸಲಾಗಿದ್ದು, 4 ದರ್ಜೆಗಳಲ್ಲಿ 20*30, 30*40 ಅಳತೆ 1683 ನಿವೇಶನಗಳನ್ನು ಬಡ-ಮಧ್ಯಮ ವರ್ಗದ ಜನರಿಗೆ ಹಂಚಿಕೆ ಮಾಡಲಾಗಿದೆ. ಮೂಲೆ ನಿವೇಶನ, ಸಿಎ ನಿವೇಶನ ಹೊರತುಪಡಿಸಿ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರಿಗೆ ನಿವೇಶನ ನೀಡಲಾಗಿದೆ ಎಂದರು.

ಲಲಿತಾದ್ರಿಪುರದಲ್ಲಿ 800 ನಿವೇಶನ ಸೇರಿದಂತೆ ನಗರದ ಬೇರೆ ಬೇರೆ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು, ಗುಂಪು ಮನೆ ನಿರ್ಮಾಣಕ್ಕೂ ಒತ್ತು ನೀಡಲಾಗಿದ್ದು, ಹೊಸ ಬಡಾವಣೆಗಳಿಗೆ ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸಿಕೊಡಲಾಗಿದೆ ಎಂದರು. 

ಮುಡಾಗೆ ಸೂಚನೆ: ಹೊಸ ಬಡಾವಣೆಗಳಿಗೆ ಎಲ್ಲಾ ಮೂಲ ಸೌಕರ್ಯ ಒದಗಿಸಿದ ನಂತರ ಮಹಾ ನಗರಪಾಲಿಕೆಗೆ ಹಸ್ತಾಂತರಿಸಬೇಕು ಎಂದು ಮುಡಾಗೆ ಇದೇ ವೇಳೆ ಸೂಚಿಸಿದರು.  ನೀರು, ರಸ್ತೆ, ವಿದ್ಯುದ್ದೀಪ ಇಲ್ಲದಿದ್ದರೆ ಜನರು ತೆರಿಗೆ ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ ಅವರು, ಹಾಗೆಂದು ತೆರಿಗೆ ಕಟ್ಟದಿರುವುದು ಸರಿಯಲ್ಲ. ತೆರಿಗೆ ಹಣವನ್ನು ಸರ್ಕಾರ ಜನಪರ ಕಾರ್ಯಗಳಿಗೆ ಬಳಸುತ್ತಿದೆ ಎಂದರು.

Advertisement

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೈಸೂರು ನಗರಕ್ಕೆ ಸಾಕಷ್ಟು ಅನುದಾನ ನೀಡಿರುವುದಾಗಿ ಹೇಳಿದ ಅವರು, ಜಯದೇವ ಆಸ್ಪತ್ರೆ ಹೊಸ ಕಟ್ಟಡ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಕಟ್ಟಡ ಪುನರ್‌ ನಿರ್ಮಾಣ, ಮಹಾರಾಣಿ ಕಾಲೇಜು ಹೊಸ ಕಟ್ಟಡ, ವಿದ್ಯಾರ್ಥಿನಿಲಯ, ಹಲವು ಭವನಗಳ ನಿರ್ಮಾಣ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾಸ್ಪತ್ರೆ ಮಂಜೂರು ಮಾಡಿದ್ದೇವೆ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಚಾಮುಂಡಿಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿರುವುದಾಗಿ ಹೇಳಿದರು.

ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌ ಮಾತನಾಡಿದರು. ಶಾಸಕ ಎಂ.ಕೆ.ಸೋಮಶೇಖರ್‌, ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ, ವಿವಿಧ ನಿಗಮ-ಮಂಡಳಿ ಅಧ್ಯಕ್ಷರಾದ ಎಚ್‌.ಎ.ವೆಂಕಟೇಶ್‌, ಬಿ.ಸಿದ್ದರಾಜು, ಎಚ್‌.ಎಸ್‌.ನಂಜಪ್ಪ, ಮಲ್ಲಿಗೆವೀರೇಶ್‌, ನಂದಕುಮಾರ್‌, ಜಿ.ವಿ.ಸೀತಾರಾಮು, ಡಾ.ಯತೀಂದ್ರ, ಕೆ.ಮರಿಗೌಡ, ಮಾಜಿ ಶಾಸಕ ಸತ್ಯನಾರಾಯಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next