ಗಂಗಾವತಿ: ಇಡೀ ದೇಶದ ಜನರ ಸಾವಿರಾರು ವರ್ಷಗಳ ಕನಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪ ಮಾಡಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಬೃಹತ್ ಮಂದಿರನ್ನು ಜನರ ಭಕ್ತಿ ಕಾಣಿಯಲ್ಲಿ ನಿರ್ಮಿಸಿದ್ದು ಶ್ರೀರಾಮನ ಬಂಟ ಶ್ರೀ ಆಂಜನೇಯನ ಕ್ಷೇತ್ರ ಕಿಷ್ಕಿಂಧಾವನ್ನು ಸಹ ಇಡೀ ಜಗತ್ತು ನೋಡುವ ರೀತಿಯಲ್ಲಿ ಅಭಿವೃದ್ಧಿ ಮಾಡಲು ಪ್ರಧಾನಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಅವರು ತಾಲೂಕಿನ ಪಂಪಾಸರೋವರದಲ್ಲಿ ಹನುಮಮಾಲೆ ಧರಿಸಿ ನಂತರ ಕಿಷ್ಕಿಂಧಾ ಅಂಜನಾದ್ರಿಯ ಪಾದಗಟ್ಟೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯ ನಂತರ ಪಂಚಲೋಹದ 108 ಚಿನ್ನಲೇಪಿತ ಬಿಂದಿಗೆಗಳಲ್ಲಿ ಪವಿತ್ರ ತುಂಗಭದ್ರಾ ಜಲವನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗಿ ಶ್ರೀರಾಮ ಪ್ರಭುವಿಗೆ ಜಲಾಭಿಷೇಕ ಮಾಡಿ ನಿತ್ಯವೂ ಜಲಾಭಿಷೇಕ ಮಾಡಲು ದೇಗುಲಕ್ಕೆ 108 ಬಿಂದಿಗೆಗಳನ್ನು ಸಮರ್ಪಿಸಲಾಗುತ್ತದೆ.
ಜತೆಗೆ ಪ್ರಧಾನಿಯರವರನ್ನು ಭೇಟಿ ಮಾಡಿ ಕಿಷ್ಕಿಂಧಾ ಅಂಜನಾದ್ರಿಯ ಮೂಲಸೌಕರ್ಯಗಳು, ಪ್ರವಾಸಿಗರು ಮತ್ತು ಹನುಮಭಕ್ತರ ಕೋರಿಕೆಯ ಶ್ರೀರಾಮ ಶ್ರೀ ಆಂಜನೇಯನ ಥೀಮ್ ಪಾರ್ಕ್ ಯೋಜನೆ ಅನುಷ್ಠಾನ ಮಾಡಿ ಸಂಪೂರ್ಣ ಶ್ರೀರಾಮಾಯಣದ ದೃಶ್ಯಗಳನ್ನು ನಿತ್ಯವೂ ಪ್ರದರ್ಶನ ಮಾಡಲು ಯೋಜನೆ ಇದ್ದು ಕೇಂದ್ರ ಸರಕಾರದ ನೆರವನ್ನು ಪಡೆಯಲಾಗುತ್ತದೆ. ಇಡೀ ದೇಶದೊಂದಿಗೆ ಕಿಷ್ಕಿಂಧಾ ಅಂಜನಾದ್ರಿಯನ್ನು ಜೋಡಣೆ ಮಾಡಲು ಸಾಮಾಜಿಕ ಜಾಲತಾಣ ಹಾಗೂ ರಸ್ತೆ, ರೈಲ್ವೇ ಹಾಗೂ ವಿಮಾನ ಸೌಕರ್ಯಗಳನ್ನು ಅನುಷ್ಠಾನಕ್ಕೆ ಪ್ರಸ್ತಾವನೆ ಇರಿಸಲಾಗುತ್ತದೆ.ಪ್ರಾಕೃತಿಕವಾಗಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶ ಸೌಂದರ್ಯ ಹಾಗೂ ಜೀವಿ ಸಂಕುಲಗಳಿಂದ ಕೂಡಿದ್ದು ಇವುಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಯೋಜನೆ ಅನುಷ್ಠಾನ ಮಾಡಲು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಶ್ರೀರಾಮ ಹಾಗೂ ಶ್ರೀಕೃಷ್ಣ ಸರ್ಕ್ಯೂಟ್ ಯೋಜನೆಗಳಲ್ಲಿ ಪ್ರಸ್ತಾವನೆ ಇದ್ದು ಕೇಂದ್ರ ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯಗಳ ಸಚಿವಾಲಯದೊಂದಿಗೆ ಸಂಪರ್ಕ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಆರ್‌ಪಿ ಪಕ್ಷದ ಬಳ್ಳಾರಿ ಜಿಲ್ಲಾಧ್ಯಕ್ಷ ದಮ್ಮೂರ್ ಶೇಖರ್, ಕೊಪ್ಪಳ ಜಿಲ್ಲಾಧ್ಯಕ್ಷರಾದ ಸಂಗಮೇಶ್ ಬಾದಾವಾಡಗಿ, ಪಂಪಣ್ಣ ನಾಯಕ್, ಯುವ ಮುಖಂಡರಾದ ಯಮನೂರು ಚೌಡಕಿ, ನಾಗರಾಜ್ ಚಳಗೇರಿ, ವೀರೇಶ್ ಬಲಕುಂದಿ, ಆನಂದ ಗೌಡ, ಬಸವರಾಜ್, ಹನುಮಂತ ನಾಯಕ್ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರಿದ್ದರು.
ಡಿ.22 ರಂದು ಬೆಳಗಿನ ಜಾವ ಆನೆಗೊಂದಿಯ ಪಂಪ ಸರೋವರದಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಪವಿತ್ರ ಹನುಮ ಮಾಲೆ ಧರಿಸಿದರು. ತದನಂತರ ಪಂಪ ಸರೋವರದಿಂದ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳಿ ಶ್ರೀ ಆಂಜನೇಯನಿಗೆ ಪೂಜೆ ಸಲ್ಲಿಸಿ ನೂರಾರು ಭಕ್ತಾದಿಗಳೊಂದಿಗೆ ಕೆಲಕಾಲ ಸಮಯ ಕಳೆದರು. ಕಳೆದ ಹನುಮ ಜಯಂತಿಯಂದು ಗಾಲಿ ಜನಾರ್ದನರೆಡ್ಡಿ ಹನುಮಮಾಲೆ ಧರಿಸಿ ಗಂಗಾವತಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಘೋಷಣೆ ಮಾಡಿ ಸ್ವಂತ ಪಕ್ಷ ಕಟ್ಟಿ ಶಾಸಕರಾಗಿದ್ದು 5 ಸಾವಿರ ಕೋಟಿ ರೂ.ಗಳಲ್ಲಿ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ಘೋಷಣೆ ಮಾಡಿದ್ದಾರೆ.