ಮೈಸೂರು: ವಿವಿಧ ಅಭಿವೃದ್ಧಿ ನಿಗಮದಡಿ ಆಯ್ಕೆಯಾಗಿರುವ ಚಾಮರಾಜ ಕ್ಷೇತ್ರದ ನೂರಾರು ಫಲಾನುಭವಿಗಳಿಗೆ ಹಲವು ಯೋಜನೆಗಳ ಮಂಜೂರಾತಿ ಪತ್ರವನ್ನು ಗುರುವಾರ ವಿತರಿಸಲಾಯಿತು. ನಗರದ ಜಲದರ್ಶಿನಿ ಆವರಣದ ಶಾಸಕರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ವಾಸು ಅವರು ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ 213, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 195, ಅಲ್ಪ$ಸಂಖ್ಯಾತರ ಅಭಿವೃದ್ಧಿ ನಿಗಮದಿಂದ 144 , ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 54 ಸೇರಿ ಒಟ್ಟು 606 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರ ವಿತರಿಸಲಾಯಿತು.
ಶಾಸಕ ವಾಸು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಡವರ ಅಭಿವೃದ್ಧಿಗೆ ವಿವಿಧ ಅಭಿವೃದ್ಧಿ ನಿಗಮಗಳಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಲಾಭ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕಿದೆ. ಸಮಾಜದಲ್ಲಿನ ಬಡವರು, ದಲಿತರು, ಹಿಂದುಳಿದವರು, ಅಲ್ಪ$ಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಎಲ್ಲಾ ಯೋಜನೆಗಳು ಅರ್ಹರಿಗೆ ತಿಳಿವಳಿಕೆ ಇಲ್ಲದ ಕಾರಣ ಕೇವಲ ಕೆಲವರ ಪಾಲಾಗುತ್ತಿದೆ ಎಂದು ಹೇಳಿದರು. ಒಂದು ಯೋಜನೆಯಿಂದ ಸಹಾಯ ಪಡೆದ ಫಲಾನುಭವಿ ತನ್ನ ಸುತ್ತಮುತ್ತಲಿನ ಅರ್ಹರಿಗೆ ಯೋಜನೆ ಬಗ್ಗೆ ತಿಳಿವಳಿಕೆ ನೀಡಿದರೆ ಸರ್ಕಾರದ ಯೋಜನೆ ಅರ್ಹರಿಗೆ ತಲುಪಿ ಯಶಸ್ವಿಯಾಗುತ್ತದೆ ಎಂದರು.
ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಮಾಜಿ ಮೇಯರ್‌ಗಳಾದ ಬಿ.ಕೆ.ಪ್ರಕಾಶ್, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮಾಜಿ ಉಪಮೇಯರ್ ಪುಷ್ಪಲತಾ ಜಗನ್ನಾಥ, ಪುಷ್ಪವಲ್ಲಿ, ನಗರಪಾಲಿಕೆ ಸದಸ್ಯರಾದ ಶಿವಮಾದು, ರಮೇಶ್, ಪ್ರಶಾಂತ್, ಬಿ.ಭಾಗ್ಯವತಿ ಸುಬ್ರಹ್ಮಣ್ಯ, ಸುಹೇಲ್ ಬೇಗ್ ಇದ್ದರು.
ಶಾಸಕರಿಂದ ಆರ್ಥಿಕ ನೆರವು: ಜಲದರ್ಶಿನಿ ಆವರಣದಲ್ಲಿ ನಡೆದ ಮಂಜೂರಾತಿ ಪತ್ರ ವಿತರಣೆಗೆ ಆಗಮಿಸಿದ್ದ ಏಕಲವ್ಯ ನಗರದ ಅಂಗವಿಕಲ ಮಹಿಳೆ ಮಂಗಳಗೌರಿ ತಮ್ಮ ಪತಿ ಹಾಗೂ ಮಗಳು ಸಹ ಕುರುಡರಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ.
ಸರ್ಕಾರ ನೀಡಿದ ಮನೆ ಹಾಗೂ ನೀಡುತ್ತಿರುವ ಪಿಂಚಣಿ ಹಣದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತೂಕದ ಯಂತ್ರ ಖರೀದಿಸಲು ಧನ ಸಹಾಯ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕ ವಾಸು, ತೂಕದ ಯಂತ್ರ ಖರೀದಿಸಲು 1700 ರೂ.ಗಳ ಚೆಕ್ ವಿತರಿಸಿದರು.