ಮೈಸೂರು: ಅಪೂರ್ವ ಸ್ನೇಹ ಬಳಗ ಹಾಗೂ ಪ್ರಜ್ಞಾವಂತ ನಾಗರಿಕರ ವೇದಿಕೆ ವತಿಯಿಂದ ನಗರದ ನಂಜುಮಳಿಗೆ ವೃತ್ತದಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಉಚಿತವಾಗಿ ಮಾಸ್ಕ್ ಹಾಗೂ ಸೋಂಕನ್ನು ತಡೆಗಟ್ಟವ ಮಾಹಿತಿಯ ಕರಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಲಕ್ಷ್ಮೀದೇವಿ ಮಾತನಾಡಿ, ಕೊರೊನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬರು ಆರೋಗ್ಯ ಕಾಳಜಿ ವಹಿಸಿ ಪಾಲಿಸಿದರೇ ಮಾತ್ರ ಸಾಧ್ಯವಾಗುತ್ತದೆ. ಅತಿಯಾದ ಶೀತದ ಪ್ರದೇಶ ಮತ್ತು ರಾಸಾಯನಿಕ ತಂಪು ಪಾನೀಯದಿಂದ ದೂರವಿರಬೇಕು. ವಯೋವೃದ್ಧರಿಗೆ ಮತ್ತು ಸಣ್ಣಮಕ್ಕಳಿಗೆ ನಿಶಕ್ತಿಯ ಕಾರಣ ರೋಗನಿರೋಧಕ ಅಂಶ ಕಡಿಮೆಯಿರುತ್ತದೆ. ಹಾಗಾಗಿ ನೆಗಡಿ, ಕೆಮ್ಮು, ಜ್ವರ ಬರದ ಹಾಗೇ ಜಾಗೃತೆ ವಹಿಸಬೇಕು. ಪ್ರತಿದಿನ ನಮ್ಮ ವಾತಾವರಣದ ಶುಚಿತ್ವವಾಗಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಪಾಲಿಕೆ ಸದಸ್ಯ ಮಾವಿ. ರಾಂಪ್ರಸಾದ್ ಮಾತನಾಡಿ, ಕೊರೊನಾ ಸೋಂಕನ್ನು ತಡೆಗಟ್ಟಲು ದೇಶ ವಿದೇಶಗಳಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಎಮರ್ಜೆನ್ಸಿ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಸಹ ಸೋಂಕನ್ನು ತಡೆಗಟ್ಟಲು ಶಾಲಾ ಕಾಲೇಜು, ಶಾಫಿಂಗ್ ಮಾಲ್ ಸೇರಿದಂತೆ ಜನನಿಬೀಡ ಪ್ರದೇಶಕ್ಕೆ ನಿರ್ಬಂಧ ಹೇರಿರುವುದು ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬರೂ ಸೂಚನೆಗಳನ್ನು ಪಾಲಿಸುವಲ್ಲಿ ಮುಂದಾದರೆ ಜೀವ ರಕ್ಷಿಸಿಕೊಳ್ಳಬಹುದು. ಆಯುರ್ವೇದ ಆಹಾರ ಉತ್ಪನ್ನ ಬಳಕೆ ಹೆಚ್ಚಾಗಬೇಕು ಎಂದರು.
ಕೃಷ್ಣರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ ಮಾತನಾಡಿ, ಕೊರೊನಾ ಸೋಂಕು ಜನಸಾಮಾನ್ಯರ ಜೀವನಶೈಲಿಗೆ ಪಾಠ ಕಲಿಸಿದಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಮರ್ಜೆನ್ಸಿ ಘೋಷಣೆಯಾದರೂ ಸಹ ಮೆಡಿಕಲ್ ಶಾಫಿನಲ್ಲಿ 1 ರೂ ಬದಲು 30ರೂ.ಗೆ ಮಾಸ್ಕ್ ಮಾರಾಟವಾಗುತ್ತಿದೆ. ಅಕ್ರಮವಾಗಿ ಸಂಪಾದನೆ ಮಾಡುತ್ತಿರುವುದು ಅರೋಗ್ಯ ವ್ಯಾಪಾರೀಕರಣವಾದಂತೆ, ಇದನ್ನು ತಡೆಗಟ್ಟಲು ಆರೋಗ್ಯಾಧಿಕಾರಿಗಳು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಅಪೂರ್ವ ಸುರೇಶ್, ಜೋಗಿ ಮಂಜು, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಡಿ. ಲೋಹಿತ್, ಮಧು ಪೂಜಾರ್, ಶ್ರೀಕಾಂತ್ ಕಶ್ಯಪ್, ವಿಜಯ್ ಕುಮಾರ್ ಪೈ ಕೃಷ್ಣ, ಚಂದ್ರು, ಗೋಪಾಲ್, ನಾಗರಾಜು ಇದ್ದರು.